ಮಹಾನಗರ ಪಾಲಿಕೆ 
ತುಮಕೂರು

ತುಮಕೂರು ಪಾಲಿಕೆ ಚುನಾವಣೆ ಯಾವಾಗ?

ಪ್ರಮುಖ ಮುಖ್ಯಾಂಶಗಳು

  • ಅವಧಿ ಮುಗಿದು ಎರಡೂವರೆ ವರ್ಷ
  • ಚುನಾವಣೆ ನಡೆಸಲು ಸರ್ಕಾರದ ಮೀನ ಮೇಷ
  • ಗ್ರೇಟರ್​ ತುಮಕೂರು ನೆಪ
ವಿಶೇಷ ವರದಿ
ತುಮಕೂರು: ಗ್ರೇಟರ್​ ತುಮಕೂರು ನೆಪದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಮುಂದೂಡುವ ಪ್ರಯತ್ನ ನಡೆದಿದೆ. ಪಾಲಿಕೆ ಅವಧಿ ಮುಗಿದು ಎರಡೂವರೆ ವರ್ಷವಾದರು ರಾಜ್ಯ ಸರ್ಕಾರ ಚುನಾವಣೆ ನಡೆಸಲು ಇನ್ನೂ ಮನಸು ಮಾಡಿದಂತೆ ಕಾಣುತ್ತಿಲ್ಲ. ತುಮಕೂರು ಸೇರಿ 5 ಮಹಾನಗರ ಪಾಲಿಕೆಗಳಿಗೆ ಈ ವರ್ಷ ಚುನಾವಣೆ ನಡೆಸುವುದಾಗಿ ರಾಜ್ಯ ಚುನಾವಣಾ ಆಯೋಗವು ಘೋಷಿಸಿದೆಯಾದರೂ ಸರ್ಕಾರಕ್ಕೆ ನಗರ ಸ್ಥಳಿಯ ಸಂಸ್ಥೆಗಳ ಚುನಾವಣೆ ನಡೆಸಲು ಕಿಂಚಿತ್ತು ಆಸಕ್ತಿ ಇಲ್ಲವಾಗಿದೆ.
ಕಳೆದ ಬಾರಿ ಆಗಸ್ಟ್​ 31, 2018ರಲ್ಲಿ ತುಮಕೂರು ಪಾಲಿಕೆಗೆ ಚುನಾವಣೆ ನಡೆದು ಸೆ.3ಕ್ಕೆ ಫಲಿತಾಂಶ ಹೊರಬಿದ್ದಿತ್ತು. ಮೊದಲ ಅವಧಿಯ ಮೇಯರ್​, ಉಪಮೇಯರ್​ ಸ್ಥಾನದ ಮೀಸಲು ನಿಗದಿ ವಿಳಂಬವಾಗಿದ್ದರಿಂದ 2019, ಜ.30 ರಂದು ಹೊಸ ಚುನಾಯಿತ ಮಂಡಳಿ ಅಸ್ತಿತ್ವಕ್ಕೆ ಬಂದಿತ್ತು. ಈ ಚುನಾಯಿತ ಮಂಡಳಿಯ ಆಡಳಿತವು ಜ.29, 2024ಕ್ಕೆ ಅಂತ್ಯಗೊಂಡಿತ್ತು. ಪಾಲಿಕೆ ಅವಧಿ ಮುಕ್ತಾಯಗೊಂಡು 30 ತಿಂಗಳಾಗತ್ತು ಬಂದಿದ್ದರು ಮತ್ತೆ ಚುನಾವಣೆ ನಡೆಸುವ ಗೋಜಿಗೆ ಸರ್ಕಾರ ಇನ್ನೂ ಹೋಗಿಲ್ಲ.
ಗ್ರೇಟರ್​ ತುಮಕೂರು : ತುಮಕೂರು ಪಾಲಿಕೆ ಭೌಗೋಳಿಕವಾಗಿ ವಿಸ್ತರಣೆಗೆ 2025ರಲ್ಲಿ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್​ ತೀವ್ರ ಆಸಕ್ತಿ ತೋರಿದ್ದರಿಂದ 14 ಗ್ರಾಪಂಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಮೂಲಕ "ಗ್ರೇಟರ್​ ತುಮಕೂರು' ಕಲ್ಪನೆ ಸಾಕಾರಕ್ಕೆ ಮಹೂರ್ತ ಇಟ್ಟಂತಾಗಿದೆ. 14 ಗ್ರಾಪಂಗಳ ಸೇರ್ಪಡೆಗೆ ಈಗಾಗಲೇ ನಗರಾಭಿವೃದ್ಧಿ ಇಲಾಖೆ ಸಹ ಹಸಿರುನಿಶಾನೆ ತೋರಿದ್ದು ಅಂತಿಮ ಅಧಿಸೂಚನೆಗೆ ರಾಜ್ಯಪಾಲರ ಅಂಗಳ ತಲುಪಿದೆ.
ತುಮಕೂರು ಜತೆಗೆ ಮೈಸೂರು, ಶಿವಮೊಗ್ಗ, ದಾವಣಗೆರೆ, ಮಂಗಳೂರು ಸೇರಿದಂತೆ ಅವಧಿ ಮುಕ್ತಾಯಗೊಂಡಿರುವ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸರ್ಕಾರ ಮೀನ ಮೇಷ ಎಣಿಸುತ್ತಿದೆ. ದ್ದು ನಗರ ಸ್ಥಳಿಯ ಸಂಸ್ಥೆ ಚುನಾವಣೆ ನಡೆಸಲು ಸಿದ್ಧವಿರುವ ರಾಜ್ಯ ಚುನಾವಣಾ ಆಯೋಗಕ್ಕೆ "ಭೌಗೋಳಿಕ ವಿಸ್ತರಣೆ' ನೆಪವು ಸವಾಲಾಗಿ ಪರಿಣಮಿಸಿದೆ.
5 ಲಕ್ಷ ಮುಟ್ಟಲಿದೆ ಜನಸಂಖ್ಯೆ
2011ರ ಜನಗಣತಿ ಪ್ರಕಾರ ತುಮಕೂರು ನಗರದ ಜನಸಂಖ್ಯೆ 3.50 ಲಕ್ಷ. ಈಗ 4.25 ಲಕ್ಷದ ರವರೆಗೆ ಜನಸಂಖ್ಯೆ ಹೆಚ್ಚಳವಾಗಿದೆ. ಈ 14 ಗ್ರಾಪಂಗಳ 54 ಹಳ್ಳಿಗಳು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಂಡಲ್ಲಿ ಜನಸಂಖ್ಯೆ 5.5 ಲಕ್ಷ ಮುಟ್ಟಲಿದೆ. ಸದ್ಯ ಮಹಾನಗರ ಪಾಲಿಕೆ 35 ವಾರ್ಡ್​ಗಳಲ್ಲಿ ಒಟ್ಟು 2,72,155 ಮತದಾರರಿದ್ದು 132322 ಪುರುಷರು, 139809 ಮಹಿಳಾ ಮತದಾರರು ಇದ್ದಾರೆ. ಭೌಗೋಳಿಕ ವಿಸ್ತರಣೆಗೆ ಹಸಿರು ನಿಶಾನೆ ಸಿಕ್ಕಲ್ಲಿ ವಾರ್ಡ್​ಗಳ ಸಂಖ್ಯೆಯು ಹೆಚ್ಚಳವಾಗಲಿವೆ. ವಾರ್ಡ್​ಗಳ ಮರುವಿಂಗಡಣೆ ಜತೆ ಮೀಸಲು ನಿಗದಿ ಬಳಿಕವಷ್ಟೇ ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
ತುಮಕೂರು ಮಹಾನಗರ ಪಾಲಿಕೆ ಭೌಗೋಳಿಕ ವಿಸ್ತರಣೆಗೆ 2025ರಲ್ಲಿ ಚಾಲನೆ ನೀಡಲಾಗಿದ್ದು ಪಾಲಿಕೆ ಚುನಾವಣೆ ವಿಳಂಬಕ್ಕೆ ಮೂಲ ಕಾರಣ. 14 ಗ್ರಾಪಂಗಳ ಸೇರ್ಪಡೆಗೆ ನಿರಾಕ್ಷೇಪಣ ಪತ್ರ ಸಹ ನೀಡಲಾಗಿದ್ದು ಈ ಪ್ರಸ್ತಾವನೆಯು ನಗರಾಭಿವೃದ್ಧಿ ಇಲಾಖೆ ಸಲ್ಲಿಸಿದೆ. ಅಲ್ಲಿಂದ ರಾಜ್ಯಪಾಲರ ಅಂಗಳಕ್ಕೆ ತಲುಪಿದೆ. ಅಲ್ಲಿಂದ ಅಧಿಸೂಚನೆ ಹೊರಬಿದ್ದ ಬಳಿಕ ವಾರ್ಡ್​ಗಳ ಮರುವಿಂಗಡಣೆ (ಡಿಲಿಮಿಟೇಷನ್​), ಮೀಸಲು ನಿಗದಿ ಪಡಿಸಲಾಗುವುದು. 2027ರ ಹೊತ್ತಿಗೆ ಈ ಪ್ರಕ್ರಿಯೆ ಪೂರ್ಣಗೊಂಡು ಚುನಾವಣೆ ನಡೆಸಲು ಸಾಧ್ಯವಾಗಲಿದೆ.
ಬಿ.ಶುಭ
ಆಯುಕ್ತೆ, ಮಹಾನಗರ ಪಾಲಿಕೆ
ಸರ್ಕಾರದ ನಿರಾಸಕ್ತಿ
ಕಳೆದ 6 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು "ಮೀಸಲು' ನೆಪವೊಡ್ಡಿ ವಿಳಂಬಧೋರಣೆ ಅನುಸರಿಸುತ್ತಲೇ ಬಂದಿರುವ ರಾಜ್ಯ ಸರ್ಕಾರವು ಇದೀಗ ಅವಧಿ ಮುಕ್ತಾಯಗೊಂಡಿರುವ ಮಹಾನಗರ ಪಾಲಿಕೆಗಳಿಗು ಚುನಾವಣೆ ನಡೆಸಲು ಇನ್ನೂ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಚುನಾವಣಾ ಆಯೋಗವು ಪಾಲಿಕೆ ಚುನಾವಣೆ ನಡೆಸುವ ಉತ್ಸುಕತೆ ತೋರಿದ್ದು ವಾರ್ಡ್​ವಾರು ಮೀಸಲು ಪಟ್ಟಿ ಸಹ ನೀಡಿಲ್ಲ.