- ತುಮಕೂರು ಜಿಲ್ಲಾ ಪೊಲೀಸರ ಪ್ರಯೋಗ
- ವಾಹನಗಳ ಮಾರ್ಗ ನಿರ್ವಹಣೆಗೆ ಸಾರ್ವಜನಿಕರ ಸಾಥ್
- 21 - 65 ವಯೋಮಾನದವರು ತಂಡ ಸೇರಬಹುದು
ತುಮಕೂರು: ವಾಹನ ದಟ್ಟಣೆಯನ್ನು ನಿಯಂತ್ರಿಸಲು ನಗರದಲ್ಲಿ "ಟ್ರಾಫಿಕ್ ವಾರ್ಡನ್ ತಂಡ' ಅಸ್ತಿತ್ವಕ್ಕೆ ಬರಲಿದ್ದು ಆ ಮೂಲಕ ತುಮಕೂರು ಜಿಲ್ಲಾ ಪೊಲೀಸರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಸ್ಮಾರ್ಟ್ಸಿಟಿ ತುಮಕೂರು ನಗರವು ವೇಗವಾಗಿ ಬೆಳಯುತ್ತಿರುವುದರಿಂದ ನಗರದಲ್ಲಿ ವಾಹನಗಳ ಸಂಖ್ಯೆ, ಸಂಚಾರ ದಟ್ಟಣೆ ಕೂಡ ದಿನೇದಿನೇ ಹೆಚ್ಚಾಗುತ್ತಿದೆ. ಸಹಜವಾಗಿ ಟ್ರಾಫಿಕ್ ಕಿರಿಕಿರಿಯಿಂದ ಜನ ಹೈರಾಣಾಗುತ್ತಿದ್ದಾರೆ. ಹಾಗಾಗಿ, ನಗರದಲ್ಲಿನ ಟ್ರಾಫಿಕ್ ಸುಧಾರಿಸಲು ಮತ್ತು ಅಪಘಾತಗಳನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸರ ಜತೆ ಕೈಜೋಡಿಸಬಹುದಾಗಿದೆ.
ಟ್ರಾಫಿಕ್ ನಿಯಂತ್ರಣದಲ್ಲಿ ಪೊಲೀಸರ ಕರ್ತವ್ಯದಲ್ಲಿ ಸಹಕಾರ ನೀಡಲು ಇಚ್ಚೆಯುಳ್ಳ ಆಸಕ್ತಿ ಹೊಂದಿರುವರನ್ನೊಳಗೊಂಡ ತುಮಕೂರು ಜಿಲ್ಲಾ ಪೊಲೀಸ್ "ಟ್ರಾಫಿಕ್ ವಾರ್ಡನ್ ತಂಡ'ವನ್ನು ರಚಿಸಲಾಗುತ್ತಿದೆ. 21 ರಿಂದ 65 ವಯೋಮಾನದೊಳಗಿನ ಆರೋಗ್ಯವಂತರು ಈ ಟ್ರಾಫಿಕ್ ವಾರ್ಡನ್ ತಂಡವನ್ನು ಸೇರಬಹುದಾಗಿದೆ.
ಮಾಜಿ ಸೈನಿಕರಿಗೆ ಅವಕಾಶ: ನಿವೃತ್ತ ಸರ್ಕಾರಿ ನೌಕರರು, ಮಾಜಿ ಸೈನಿಕರು, ಎನ್ಸಿಸಿ, ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲದೆ, ಉದ್ಯಮಿಗಳು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು, ಸ್ಥಳಿಯ ನಿವಾಸಿ ಸಂಘಟನೆಗಳ ಸದಸ್ಯರು, ಆಟೋ, ಟ್ಯಾಕ್ಸಿ ಸಂಘದ ಸದಸ್ಯರು, ಕಂಪನಿ ಸಿಎಸ್ಆರ್ ಸ್ವಯಂಸೇವಕರು ಸಹ ಈ ಟ್ರಾಫಿಕ್ ವಾರ್ಡನ್ ತಂಡದ ಸದಸ್ಯರಾಗಬಹುದು.
ಮೂಲ ಉದ್ದೇಶ: ವಾಹನ, ಜನ ದಟ್ಟಣೆ ಜಂಕ್ಷನ್ಗಳಲ್ಲಿ ಟ್ರಾಫಿಕ್ ಪೊಲೀಸರಿಗೆ ಸಹಾಯ, ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು, ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ವರದಿ ಮಾಡಬಹುದಾಗಿದೆ. ಆದರೆ, ದಂಡ ವಿಧಿಸುವ ಹಕ್ಕು ಹೊಂದಿರುವುದಿಲ್ಲ. ಇದಲ್ಲದೆ, ಅಪಘಾತ ಅಥವಾ ಟ್ರಾಫಿಕ್ ದಟ್ಟಣೆ ಉಂಟಾದ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡುವುದು. ಹಬ್ಬಹರಿದಿನ, ವಿಶೇಷ ಕಾರ್ಯಕ್ರಮಗಳ ಸಮಯದಲ್ಲಿ ಸಹಾಯ ಮಾಡುವುದು ಈ ತಂಡದ ಉದ್ದೇಶವಾಗಿರಲಿದೆ. ಇದರಿಂದ ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಹಕಾರವು ಏರ್ಪಡಲಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್.
ಟ್ರಾಫಿಕ್ ವಾರ್ಡನ್ಗಳ ಕರ್ತವ್ಯ
* ಪಾದಚಾರಿಗಳಿಗೆ ರಸ್ತೆ ದಾಟಲು ಸಹಾಯ ಮಾಡುವುದು
* ಟ್ರಾಫಿಕ್ ಜಾಮ್ ಇರುವ ಸ್ಥಳದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮಾರ್ಗದರ್ಶನ
* ನಿಯಮ ಉಲ್ಲಂಘನೆಗಳನ್ನು ವರದಿ
* ಶಾಲೆ ಹಾಗೂ ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು
* ಅಪಘಾತವಾದಾಗ ಪೊಲೀಸರಿಗೆ ಮಾಹಿತಿ ನೀಡುವುದು. ಆದರೆ ನೇರವಾಗಿ ದಂಡ ವಿಧಿಸುವ ಅಧಿಕಾರ ಇರುವುದಿಲ್ಲ.