ತುಮಕೂರು ಜಿಲ್ಲಾ ಕಾಂಗ್ರೆಸ್​ ಸಮಿತಿ ವತಿಯಿಂದ ಎಸ್​ಐಆರ್​ ಕುರಿತು ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಜಿ.ಚಂದ್ರಶೇಖರಗೌಡ, ಟಿ.ಬಿ.ಜಯಚಂದ್ರ, ಎಸ್​.ಪಿ.ಮುದ್ದಹನುಮೇಗೌಡ, ರಮೇಶ್​ಬಾಬು, ಮುರಳೀಧರಹಾಲಪ್ಪ, ಎಸ್​.ಷಫೀ ಅಹ್ಮದ್​, ಕೆ.ಎಸ್​.ಕಿರಣ್​ಕುಮಾರ್​ ಮತ್ತಿತರರು ಇದ್ದರು.  
ತುಮಕೂರು

ಎಸ್​ಐಆರ್​ ಮತಾಧಿಕಾರ ಹರಣ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್​ನಿಂದ ಜಾಗೃತಿ ಕಾರ್ಯಾಗಾರ
  • ಮೈಮರೆತರೆ ಪಕ್ಷ ಅಧಿಕಾರ ಕಳೆದುಕೊಳ್ಳಲಿದೆ
  • ಕಾರ್ಯಕರ್ತರು ಎಚ್ಚೆತ್ತುಕೊಳ್ಳಲು ಸಲಹೆ
ತುಮಕೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಂತರವು ಆರ್ಹ ಮತದಾರ ತನ್ನ ಹಕ್ಕಿನಿಂದ ವಂಚಿತರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್​ ಪಕ್ಷ ನಡೆಸುತ್ತಿರುವ ಎರಡನೇ ಸ್ವಾತಂತ್ರ ಹೋರಾಟ ಇದಾಗಿದೆ ಎಂದು ವಿಧಾನಪರಿಷತ್​ ಸದಸ್ಯ ರಮೇಶ್​ಬಾಬು ಹೇಳಿದರು.
ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ "ಎಸ್​ಐಆರ್​: ಇದು ಮತದಾರರ ಪಟ್ಟಿ ಪರಿಷ್ಕರಣೆಯಲ್ಲ, ಮತಾಧಿಕಾರ ಹರಣ' ವಿಶೇಷ ಜಾಗೃತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತ ಹಕ್ಕು ಉಳಿಸಿಕೊಳ್ಳಲು ಕಾಂಗ್ರೆಸ್​ ಕಾರ್ಯಕರ್ತರು ಪ್ರತಿ ಮತದಾರರನ್ನು ಸಂಪರ್ಕಿಸಿ,ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರ ಹಕ್ಕುಗಳನ್ನು ಕಾಪಾಡಬೇಕಿದೆ ಎಂದರು.
ಕೇಂದ್ರ ಸರ್ಕಾರ ಈಗಾಗಲೇ ಎಸ್​ಐಆರ್​ ನಂತರ ಅಧಿಕೃತ ಮತಪಟ್ಟಿಯಲ್ಲಿರುವ ಮತದಾರರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ನೀಡಲಾಗುವುದು ಎಂದು ಹೇಳಿದೆ. ಸಿಎಂ ಡಿ.ಕೆ.ಶಿವಕುಮಾರ್​ ಸಹ ಇದೇ ವಿಚಾರವನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಎಸ್​ಐಆರ್​ ವೇಳೆ ನಾವು ಕೊಂಚ ಎಡವಿದರು ಮತದಾನದ ಹಕ್ಕಿನ ಜತೆಗೆ, ಸರ್ಕಾರದ ಸವಲತ್ತುಗಳಿಂದಲು ಜನರು ವಂಚಿತವಾಗಬೇಕಾಗುತ್ತಿದೆ. ಹಾಗಾಗಿ, ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಎಲ್ಲಾ ಕಾರ್ಯಕರ್ತರು ಸಹ ಪ್ರತಿ ಮಾಹಿತಿಯನ್ನು ಅರ್ಥ ಮಾಡಿಕೊಂಡು, ಮತದಾರರ ಹಕ್ಕುಗಳನ್ನು ಉಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಎಸ್​ಐಆರ್​ನಿಂದಾಗಿ ಎಂಥೆಂಥ ಅತಿರಥ,ಮಹಾರಥರು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಸೋಲು ಕಂಡಿದ್ದಾರೆ. ಎಸ್​ಐಆರ್​ ನಿಂದ ಶಾಸನ ಸಭೆ, ಸಂಸತ್​ ಸದಸ್ಯರಿಗೆ ಮಾತ್ರ ತೊಂದರೆಯಾಗುವುದಿಲ್ಲ. ಜಿಪಂ, ತಾಪಂ, ಗ್ರಾಪಂ ಚುನಾವಣೆಗೆ ಸ್ಪರ್ಧಿಸುವವರಿಗೂ ಹೊಡೆತ ಬೀಳಲಿದೆ. ಹಾಗಾಗಿ ಪ್ರತಿ ಹಳ್ಳಿಯಲ್ಲಿಯೂ ಮತದಾರರ ಹಕ್ಕು ರಕ್ಷಣೆಗೆ ಕಾಂಗ್ರೆಸ್​ ಕಾರ್ಯಕರ್ತರು ಶ್ರಮಿಸಬೇಕಾಗಿದೆ. ಒಂದು ವೇಳೆ ಮೈಮರೆತರೆ ನಾವು ಸೋಲುವ ಜತೆಗೆ, ಪಕ್ಷವೂ ಅಧಿಕಾರ ಕಳೆದುಕೊಳ್ಳಲಿದೆ ಎಂದು ಕೆಪಿಸಿಸಿ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ,ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಸ್ವಾಯತ್ತ ಸಂಸ್ಥೆಗಳು ಒಗ್ಗೂಡಿ, ಬಿಜೆಪಿಯನ್ನು ನಿರಂತರವಾಗಿ ಅಧಿಕಾರದಲ್ಲಿ ಇಡುವ ಹುನ್ನಾರ ವಾಗಿದೆ. ಇದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್​ ಇಡೀ ರಾಜ್ಯದಾದ್ಯಂತ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್​ ಪಕ್ಷದ ಮುಖಂಡರು, ಮಂಚೂಣಿ ಘಟಕದ ಮುಖ್ಯಸ್ಥರು, ಹಾಗೂ ಬಿಎಲ್​ಒ 2 ಅವರು ಬಿಎಲ್​ಒ 1 ರ ಜತೆಗೆ ಸಂಪರ್ಕ ಪಡೆದು, ಮತದಾರರ ನೊಂದಣಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
ಜಾಗೃತ ಕರ್ನಾಟಕದ ಡಾ.ಬಸವರಾಜು ಪಿಪಿಟಿ ಮೂಲಕ ಎಸ್​ಐಆರ್​ ಕುರಿತು ಜಾಗೃತಿ ಮೂಡಿಸಿದರು.
ಮಾಜಿ ಶಾಸಕರಾದ ಎಸ್​.ಷಫೀಅಹ್ಮದ್​, ಕೆ.ಎಸ್​.ಕಿರಣ್​ಕುಮಾರ್​, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆರ್​.ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್​ ಅಹಮದ್​,
ಷಣ್ಮುಗಪ್ಪ, ಕೆಂಚಮಾರಯ್ಯ, ಎಚ್​.ಸಿ.ಹನುಮಂತಯ್ಯ, ಅನಿಲ್​ಕುಮಾರ್​ ಚಿಕ್ಕದಾಳವಾಟ, ಏದ್ದೇಳು ಕರ್ನಾಟಕದ ಇಂದಿರಮ್ಮ, ರಾಮಚಂದ್ರಯ್ಯ,ತಾಜುದ್ದೀನ್​ ಷರೀಫ್​ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿನ ಏರುಪೇರು ಗಮನಿಸಿದರೆ ಎಸ್​ಐಆರ್​ನಿಂದ ಮತದಾರರ ಹಕ್ಕು ಕಸಿಯಲಾಗಿದೆ. ಕಾಂಗ್ರೆಸ್​ ಪಕ್ಷ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಮತದಾನದ ಹಕ್ಕಿನಿಂದ ಆರ್ಹರು ವಂಚಿತರಾಗಬಾರದೆಂಬ ಆಶಯದೊಂದಿಗೆ ರಾಜ್ಯದಾದ್ಯಂತ "ಕಾಂಗ್ರೆಸ್​ ನಡೆ ನಿಮ್ಮ ಮತರಕ್ಷಣೆಯ ಕಡೆ' ಜಾಗೃತಿ ಅಭಿಯಾನವನ್ನು ಆಯೋಜಿಸಿದೆ.ಪ್ರಮುಖವಾಗಿ ಬೂತ್​ ಮಟ್ಟದ ಕಾರ್ಯಕರ್ತರು,ಬೂತ್​ ಮಟ್ಟದ ಎಜೆಂಟರುಗಳು ಮುಂದಿನ ಮೂರು ತಿಂಗಳ ಕಾಲ ಹೆಚ್ಚು ಸಕ್ರಿಯರಾಗಿ ಕೆಲಸ ಮಾಡಬೇಕಿದೆ. 2002ರ ಮತಪಟ್ಟಿ ಮತ್ತು 2025ರ ಮತಪಟ್ಟಿಗೆ ಹೋಲಿಕೆ ಸಮಯದಲ್ಲಿ ನಾವುಗಳು ಎಚ್ಚೆತ್ತು ಕೆಲಸ ಮಾಡಬೇಕಾಗಿದೆ.ಎಲ್ಲರೂ ಹೊಸದಾಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಆಗಬೇಕಾಗಿದೆ.
ಟಿ.ಬಿ.ಜಯಚಂದ್ರ
ದೆಹಲಿ ವಿಶೇಷ ಪ್ರತಿನಿಧಿ
ಎಸ್​ಐಆರ್​ ಎಂಬುದು ಒಂದು ಸಾಮಾನ್ಯ ಪ್ರಕ್ರಿಯೆ ಯಾಗಿದ್ದರೂ ತಾನು ಅಧಿಕಾರದಲ್ಲಿ ಮುಂದುವರೆಯಬೇಕೆಂಬ ಉದ್ದೇಶದಿಂದ ವಿಶೇಷ ಪರೀಕ್ಷರಣೆಗೆ ಕೇಂದ್ರ ಮುಂದಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿದೆ.ನಮ್ಮೊಂದಿಗೆ ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಿವೆ. ಬೂತ್​ ಲೆವಲ್​ ಏಜೆಂಟರು ಪ್ರತಿ ಮತದಾರರ ಹಕ್ಕು ರಕ್ಷಿಸಲು ಹೋರಾಟಕ್ಕೆ ಅಣಿಯಾಗಬೇಕಿದೆ.
ಎಸ್​.ಪಿ.ಮುದ್ದಹನುಮೇಗೌಡ
ಮಾಜಿ ಸಂಸದ