ತುಮಕೂರು ನಗರದಲ್ಲಿ 2025ರಲ್ಲಿ ನಡೆದಿದ್ದ ಅದ್ಧೂರಿ ದಸರಾ 
ತುಮಕೂರು

ತೀವ್ರ ಬರದ ನಡುವೆಯೇ ಅದ್ಧೂರಿ ದಸರಾಗೆ ಸಿದ್ಧತೆ

ಪ್ರಮುಖ ಮುಖ್ಯಾಂಶಗಳು

  • ಇಂದು ಡಿಸಿಎಂ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
  • 2025ರಲ್ಲಿ ಬರೋಬ್ಬರಿ 2.37ಕೋಟಿ ರೂ. ವೆಚ್ಚ
  • ಅದ್ಧೂರಿ ಆಚರಣೆಗೆ ಅಧಿಕಾರಿಗಳಿಗೂ ಟಾಸ್ಕ್​
ತುಮಕೂರು: ಜಿಲ್ಲೆಯೆಲ್ಲೆಡೆ ತೀವ್ರ ಬರ ಆವರಿಸಿದ್ದು ಜಿಲ್ಲೆಯ ಜನ, ಆಡು, ಕುರಿ, ದನ ಬೆಳೆ ಕಳೆದುಕೊಂಡು ಮೇವು, ನೀರು ಇಲ್ಲದೆ ಪರಿತಪಿಸುತ್ತಿರುವ ನಡುವೆಯೇ ಜಿಲ್ಲಾಡಳಿತ ಅದ್ಧೂರು "ತುಮಕೂರು ದಸರಾ' ಆಯೋಜನೆಗೆ ಸಿದ್ಧತೆ ನಡೆಸುತ್ತಿರುವುದು ಜಿಲ್ಲೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ದಿಗ್ಭ್ರಮೆ ಮೂಡಿಸಿದೆ.
ತುಮಕೂರು ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡ ಅಕ್ಟೋಬರ್​ 11ರಿಂದ 21ರ ವರೆಗೂ ಸರ್ಕಾರದ ವತಿಯಿಂದಲೇ "ತುಮಕೂರು ದಸರಾ' ಆಚರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆ ಕೂಡ ಮಾಡಿಕೊಳ್ಳಲು ಅಧಿಕಾರಿಗಳಿಗೆ ಖಡಕ್​ ಸೂಚನೆ ಜಿಲ್ಲಾಡಳಿತದ ವತಿಯಿಂದ ಲಿಖಿತವಾಗಿಯೇ ರವಾನೆಯಾಗಿರುವ ಹಿನ್ನೆಲೆಯಲ್ಲಿ ಬರ ನಿರ್ವಹಣೆಯ ಜವಬ್ಧಾರಿ ಹೊತ್ತಿರುವ ಅಧಿಕಾರಿಗಳ ಆತಂಕ ಹೆಚ್ಚಿಸಿದೆ.
ದಸರಾ ಆಚರಣೆಗೆ ಪೂರ್ವಭಾವಿಯಾಗಿ ಚರ್ಚಿಸಲು ಡಿಸಿಎಂ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಸೆ.7ರಂದು ಮಧ್ಯಾಹ್ನ 2ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಕೂಡ ನಡೆಯಲಿದೆ. ಈ ಸಭೆಗೆ ಅಧಿಕಾರಿಗಳು, ಸಂಘ, ಸಂಸ್ಥೆಗಳಿಗೆ ಭಾಗವಹಿಸುವಂತೆ ಕೋರಿ ಸೆ.4ರಂದು ಸಭೆಯ ನೋಟಿಸ್​ ಕಳುಹಿಸಲಾಗಿದೆ. ಬರದ ಸಂದರ್ಭದಲ್ಲಿ ಅಭಿಪ್ರಾಯ ಕೂಡ ಪಡೆಯದೇ ಅದ್ಧೂರಿ ದಸರಾಗೆ ಸಿದ್ಧತೆ ಆರಂಭಿಸಿರುವ ಜಿಲ್ಲೆಯ ಕೆಲವು ಶಾಸಕರ ಆಕ್ರೋಶಕ್ಕೂ ಕಾರಣವಾಗಿದ್ದು ಶೀಘ್ರದಲ್ಲಿಯೇ ಸ್ಫೋಟವಾಗಲಿದೆ.
ಸತತ 11 ದಿನಗಳ ಕಾಲ ನಡೆಯುವ ದಸರಾ ಆಚರಣೆಯ ಸಿದ್ಧತೆಗೆ ಇಡೀ ಜಿಲ್ಲೆಯ ಅಧಿಕಾರಿಗಳು ಬೇರೆಲ್ಲಾ ಕೆಲಸಗಳನ್ನು ಬಿಟ್ಟು ತನು, ಮನ, ಧನವನ್ನು ಸಮರ್ಪಿಸಿ ತಿಂಗಳುಗಟ್ಟಲೇ ಕೆಲಸ ಮಾಡಬೇಕಿದೆ. ದಸರಾ ಆಚರಣೆ ಹೆಸರಿನಲ್ಲಿ ಕೆಲವು ಅಧಿಕಾರಿಗಳು ಜಿಲ್ಲೆಯೆಲ್ಲೆಡೆ ಹಣ ವಸೂಲಿ ಮಾಡುವ ಆರೋಪ ಕೂಡ ಕಳೆದ ವರ್ಷಗಳಿಂದಲೇ ಇದೆಯಾದರೂ ಜಿಲ್ಲಾಡಳಿತ ಇದಕ್ಕೆ ತಲೆಕೆಡಿಸಿಕೊಂಡಿಲ್ಲ.
2025ರಲ್ಲಿ ದಸರಾ ಆಯೋಜನೆಗೆ ಸರ್ಕಾರದ ವತಿಯಿಂದಲೇ 1.50ಕೋಟಿ ರೂ. ಕನ್ನಡ ಮತ್ತು ಸಂಸತಿ ಇಲಾಖೆ ಮೂಲಕ ಬಿಡುಗಡೆ ಮಾಡಲಾಗಿದ್ದು ದಾನಿಗಳಿಂದಲೂ ಸಾಕಷ್ಟು ಹಣ ಸಂಗ್ರಹಿಸಿ ಅದ್ಧೂರಿ ದಸರಾ ಆಯೋಜಿಸಲಾಗಿತ್ತು. ಅದ್ಧೂರಿ ದಸರಾಗೆ ಅಧಿಕೃತವಾಗಿ 2.37ಕೋಟಿ ರೂ. ಖರ್ಚು ಮಾಡಿ 21.15ಲಕ್ಷ ರೂ. ಉಳಿಸಲಾಗಿದೆ.
ಸಂಗೀತ ಕಾರ್ಯಕ್ರಮಕ್ಕೇ ಕೋಟಿ ರೂ. ಖರ್ಚು:
ದಸರಾ ಅಂಗವಾಗಿ ಮನರಂಜನೆಗಾಗಿ ಆಯೋಜಿಸುವ ಸಂಗೀತ ಕಾರ್ಯಕ್ರಮಕ್ಕೆ 2025ರಲ್ಲಿ ಕೋಟಿ ರೂ. ಖರ್ಚು ಮಾಡಲಾಗಿತ್ತು. ಕಾರ್ಯಕ್ರಮ ನೀಡಿದ ಅನನ್ಯಭಟ್​ಗೆ 12.70 ಲಕ್ಷ ರೂ., ಅರ್ಜುನ್​ ಜನ್ಯಾಗೆ 27ಲಕ್ಷ ರೂ. ಅನುರಾಧ ವಿಶ್ರಾಂತ್​ಗೆ 10 ಲಕ್ಷ ರೂ., ಅಳ್ವಾಸ್​ ಸಂಸ್ಥೆಗೆ 10 ಲಕ್ಷ ರೂ. ಹೀಗೆ ಸಂಗೀತ ಕಾರ್ಯಕ್ರಮಕ್ಕೆ ಲಕ್ಷಾಂತರ ರೂ. ಹಣ ಖರ್ಚು ಮಾಡಲಾಗಿದೆ.
ತೋಟಗಾರಿಕೆ ಇಲಾಖೆಗೆ 10 ಲಕ್ಷ ರೂ., ಕೃಷಿ ಇಲಾಖೆಗೆ 5 ಲಕ್ಷ ರೂ., ಕೆಎಸ್​ಆರ್​ಟಿಸಿಗೆ 6 ಲಕ್ಷ ರೂ., ಗೂಗಲ್​ ಎಂಟರ್​ ಪೆಸೆಸ್​ಗೆ 2.91 ಲಕ್ಷ ರೂ.,
ಧಾರ್ಮಿಕ ಪೂಜೆಗೆ 10 ಲಕ್ಷ ರೂ., ವಿಡಿಯೋ, ಪೋಟೋ, ರೀಲ್ಸ್​ಗೆ 15 ಲಕ್ಷ ರೂ., ಹೀಗೆ, ವಸತಿ, ಸಾರಿಗೆ, ಪೋಟೋ, ರೀಲ್ಸ್​, ದೀಪಾಲಂಕಾರ ಸೇರಿದಂತೆ ಅದ್ಧೂರಿ ಆಚರಣೆಗೆ ಕೋಟ್ಯಾಂತರ ರೂಪಾಯಿಗಳನ್ನು ಯಾವುದೇ ಟೆಂಡರ್​ ಕೂಡ ನಡೆಸದೇ ಖರ್ಚು ಮಾಡಿದ್ದು ವಿವಾದಕ್ಕೆ ಗುರಿಯಾಗಿತ್ತು.
ಪ್ರಸ್ತುತ ಜಿಲ್ಲೆಯಲ್ಲಿ ತೀವ್ರ ಬರವಿದ್ದು ಗ್ರಾಮೀಣ ಭಾಗದಲ್ಲಿ ನೀರಿಲ್ಲದೆ ನೂರಾರು ಗ್ರಾಮಗಳಲ್ಲಿ ಕೊಳವೆಬಾವಿ ಅಗತ್ಯವಿದೆ, ಇನ್ನೇನು ಕೆಲವೇ ದಿನಗಳಲ್ಲಿ ಲಭ್ಯವಿರುವ ಮೇವು ಕೂಡ ಖಾಲಿಯಾಗಲಿದ್ದು ಜಾನುವಾರುಗಳಿಗೆ ಮೇವು ಬೇಕಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಅದ್ಧೂರಿ ದಸರಾ ಆಚರಣೆಗೆ ಕಾಂಗ್ರೆಸ್​ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದು ಜಿಲ್ಲಾಡಳಿತ ಇಂದಿನ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಕುತೂಹಲ ಮೂಡಿಸಿದೆ.
ಜನರೆಲ್ಲರೂ ಬರಗಾಲದ ಚಿಂತೆಯಲ್ಲಿದ್ದರೇ ಅಧಿಕಾರಿಗಳು ವರ ಮಾಡಿಕೊಳ್ಳಲಷ್ಟೇ "ತುಮಕೂರು ದಸರಾ' ಆಯೋಜಿಸಲಾಗುತ್ತಿದೆ. ಕಳೆದ ಎರಡು ವರ್ಷದಿಂದ ಆರಂಭಿಸಲಾಗಿರುವ ಆಡಂಭರದ ತುಮಕೂರು ದಸರಾ ಆಚರಣೆಯಲ್ಲಿ ಜಿಲ್ಲೆಯ ಸಾಂಸತಿಕ ಹಾಗೂ ಸಾಮಾಜಿಕ ಕಳಕಳಿ ಇಲ್ಲ, ಅಧಿಕಾರಿಗಳೇ ಮುಂದೆ ನಿಂತು ಹಣ ದುರಪಯೋಗ ಮಾಡಲಷ್ಟೇ ಮಾಡಿಕೊಂಡಂತಿದೆ. ಈ ಹಿಂದಿನ ದಸರಾ ಅವ್ಯವಹಾರದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಜಿ.ಎಸ್​.ಬಸವರಾಜು
ಅಧ್ಯಕ್ಷ, ರಾಷ್ಟ್ರೀಯ ಮಾವನ ಪರಿಸರ ಸಂರಕ್ಷಣಾ ಪಡೆ