ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದರು.
- ಸಿಎಂ ಸೂಚನೆ ಹಿನ್ನೆಲೆಯಲ್ಲಿ ಚುರುಕಾದ ಜಿಲ್ಲಾಡಳಿತ
- ಜಿಲ್ಲೆಯ 141 ಗ್ರಾಮಗಳಲ್ಲಿ ಕಾಣಿಸಿಕೊಂಡ ಸಮಸ್ಯೆ
- ಏ.24ರಂದು ತೆಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ
ತುಮಕೂರು: ಜಿಲ್ಲೆಯ 141 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು ಅಗತ್ಯ ಮುಂಜಾಗ್ರತೆ ವಹಿಸಬೇಕು, ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾದರೆ ಜಿಲ್ಲಾಧಿಕಾರಿಯೇ ಹೊಣೆ, ಎಲ್ಲಾ ಇಲಾಖೆಗಳೊಂದಿಗೆ ಸಮನ್ವತೆಯಿಂದ ಕೆಲಸ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ ಬೆನ್ನೆ ಹಿಂದೆಯೇ ತುಮಕೂರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
ಸಿಎಂ ಜತೆಗಿನ ಸಭೆ ಮುಗಿದ ಕೂಡಲೇ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಜಿಲ್ಲಾಧಿಕಾರಿ ಗುರುವಾರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ, ಸಿಎಂ ನೀಡಿದ ಸೂಚನೆಗಳನ್ನು ರವಾನಿಸಿದ್ದಾರೆ. ಎಲ್ಲಾ ತಾಲೂಕುಗಳಲ್ಲಿ ಕುಡಿಯುವ ನೀರಿನ ಕುರಿತಾದ ಟಾಸ್ಕ್ ಪೋರ್ಸ್ ಸಭೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದರು.
ಸಿಎಂ ಸಭೆ ನಡೆಸಿದ ಬೆನ್ನಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಕೂಡ ತ್ರೆೃಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ದಿನಾಂಕ ನಿಗದಿಪಡಿಸಿದ್ದಾರೆ. ಏ.24ರಂದು ಬೆಳಗ್ಗೆ 10.30ಕ್ಕೆ ಜಿಪಂ ಸಭಾಂಗಣದಲ್ಲಿ ಸಭೆ ನಡೆಯಲಿದ್ದು ಜಿಲ್ಲೆಯಲ್ಲಿ ಬೇಸಿಗೆ ನಿರ್ವಹಣೆ ಬಗ್ಗೆ ಚರ್ಚಿಸಲಿದ್ದಾರೆ.
ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿರುವ ಅನುದಾನ ಬಳಸಿಕೊಂಡು ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರು ಪೂರೈಕೆಯನ್ನು ಖಾತ್ರಿಪಡಿಸಲು ಯಾವುದೇ ಅನುದಾನದ ಕೊರತೆಯಿಲ್ಲ ಎನ್ನಲಾಗಿದ್ದು ಅಗತ್ಯವಿದ್ದರೆ ಜಿಲ್ಲಾಧಿಕಾರಿ ವರದಿ ಆಧಾರದಲ್ಲಿ ಅಗತ್ಯ ಅನುದಾನ ಒದಗಿಸಲು ಹಣಕಾಸು ಇಲಾಖೆಗೆ ಸರ್ಕಾರ ಸೂಚಿಸಿದೆ.
ಮಳೆಗಾಲ ವಿಳಂಬವಾಗಿ ಆರಂಭವಾಗುವ ಸಾಧ್ಯತೆಯಿರುವುದರಿಂದ ಜುಲೈ ಮಧ್ಯದವರೆಗೂ ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಬೇಕು. ನೀರಾವರಿಗಿಂತ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಜಲಾಶಯಗಳಲ್ಲಿ ನೀರಿನ ಸೋರಿಕೆಯನ್ನು ಗುರುತಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಬಿ.ವಿ.ಅಶ್ವಿಜಾ, ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತೆ ಬಿ.ಶುಭಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾಧಿಕಾರಿಗೆ ಸಿಎಂ ಸೂಚನೆಗಳು:
ಕುಡಿಯುವ ನೀರಿನ ಕುರಿತಾಗಿ ಸಾರ್ವಜನಿಕರ ಅಹವಾಲುಗಳಿಗೆ ತುರ್ತಾಗಿ ಸ್ಪಂದಿಸಬೇಕು. ಇದಕ್ಕಾಗಿ ತಾಲೂಕು ಹಾಗೂ ವಾರ್ಡ್ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಬೇಕು. ಜಿಲ್ಲಾ ಮಟ್ಟದ ಕಾರ್ಯಪಡೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ಜನರಿಗೆ ನೀರು ಪೂರೈಕೆ ಮಾಡಬೇಕು, ಖಾಸಗಿ ಕೊಳವೆಬಾವಿ ಬಾಡಿಗೆ ಪಡೆಯುವುದಕ್ಕೆ ಆದ್ಯತೆ ನೀಡಬೇಕು, ಪಿಡಿ ಖಾತೆಯಲ್ಲಿರುವ ಹಣ ಬಳಸಿಕೊಂಡು ಅಗತ್ಯ ಸಂದರ್ಭದಲ್ಲಿ ಕೊಳವೆ ಬಾವಿ ಕೊರೆಸಬೇಕು, ಶುದ್ಧ ನೀರಿನ ಟಕ ಕಾರ್ಯನಿರ್ವಹಣೆ ಖಾತ್ರಿ ಪಡಿಸಿಕೊಳ್ಳಬೇಕು, ದುರಸ್ಥಿ ಹಾಗೂ ನೀರಿನ ಪೂರೈಕೆ ಸಮಸ್ಯೆ ಭಗೆಹರಿಸಲು ತಾಲೂಕು ಮಟ್ಟದಲ್ಲಿ ತಂಡ ನಿಯೋಜನೆಗೆ ಸೂಚಿಸಲಾಗಿದೆ.
ರಸಗೊಬ್ಬರ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯಿದ್ದು ವ್ಯಾಪಾರಿಗಳು ರಸಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ದಾಸ್ತಾನು ಇರಿಸುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ. . ಯೂರಿಯಾ, ಡಿಎಪಿ ಸರಿಯಾಗಿ ವಿತರಣೆಯಾಗುವಂತೆ ನೋಡಿಕೊಳ್ಳಬೇಕು. ಬೇರೆ ರಾಜ್ಯಗಳಿಗೆ ರಸಗೊಬ್ಬರ ಸಾಗಾಟ ತಪ್ಪಿಸಲು ಚೆಕ್ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಬೇಕು.
ಕಲುಷಿತ ನೀರು ಪೂರೈಕೆಯಾಗಿ ಆರೋಗ್ಯ ಸಮಸ್ಯೆಯಾಗದಂತೆ ಎ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಈಗಾಗಲೇ ಮಾರ್ಗಸೂಚಿ ಜಾರಿಗೊಳಿಸಲಾಗಿದ್ದು, ಯಾವುದೇ ಕಾರಣಕ್ಕೂ ಕಲುಷಿತ ನೀರಿನಿಂದ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿ ಜವಾಬ್ದಾರಿ ಹೊಣೆ ಎಂದು ಸಿಎಂ ಹೇಳಿದ್ದಾರೆ.
ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಆದ್ಯತೆ ನೀಡಬೇಕು. ಪಂಚಾಯತ್ ರಾಜ್ ಮತ್ತು ಇಂಧನ ಇಲಾಖೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಲು ಠೇವಣಿಗಾಗಿ ಕಾಯಬಾರದು ಎಂದು ಸೂಚಿಸಲಾಗಿದೆ.