ತುಮಕೂರಿನಲ್ಲಿ ಕೆಪಿಟಿಸಿಎಲ್​, ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಅಧಿಕಾರಿಗಳು, ನೌಕರರು ಪ್ರತಿಭಟನೆ ನಡೆಸಿದರು 
ತುಮಕೂರು

ವಿದ್ಯುತ್ ಕ್ಷೇತ್ರ ಖಾಸಗೀಕರಣ ನೀತಿ ಜನವಿರೋಧಿ

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್​ ಕ್ಷೇತ್ರ ಖಾಸಗೀಕರಣಕ್ಕೆ ವಿರೋಧ
  • ಬೆಸ್ಕಾಂ, ಕೆಪಿಟಿಸಿಎಲ್​ ಸಿಬ್ಬಂದಿ ನೇತೃತ್ವ
  • ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ
ತುಮಕೂರು:- ಕೆಪಿಟಿಸಿಎಲ್​, ಬೆಸ್ಕಾಂ, ಎಸ್ಕಾಂ ವಿದ್ಯುತ್​ ವಿತರಣಾ ಪರವಾನಗಿಯನ್ನು ಟಾಟಾ ಪವರ್​ ಕಂಪೆನಿಗೆ ನೀಡದಂತೆ ಒತ್ತಾಯಿಸಿ ನಗರದ ಬೆಸ್ಕಾಂ ಕಚೇರಿ ಮುಂಭಾಗ ಅಧಿಕಾರಿಗಳು ಹಾಗೂ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಕೋತಿತೋಪು ರಸ್ತೆಯಲ್ಲಿ ಬೆಸ್ಕಾಂ ಕಚೇರಿ ಮುಂಭಾಗ ಅಧೀಕ್ಷಕ ಇಂಜಿನಿಯರ್​ ನರಸಿಂಹಮೂರ್ತಿ ಹಾಗೂ ಕೆಪಿಟಿಸಿಎಲ್​ ಅಧೀಕ್ಷಕ ಇಂಜಿನಿಯರ್​ ಶಿವಕುಮಾರ್​ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಜಿಲ್ಲೆಯ ವಿವಿಧ ತಾಲೂಕುಗಳ ಬೆಸ್ಕಾಂ ಅಧಿಕಾರಿಗಳು ಹಾಗೂ ನೌಕರರು ಕೆಪಿಟಿಸಿಎಲ್​ ಮತ್ತು ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳನ್ನು ಉಳಿಸಿ-ನಮ್ಮ ಹಕ್ಕನ್ನು ರಕ್ಷಿಸುವಂತೆ ಕರಪತ್ರ ಹಿಡಿದು ಘೋಷಣೆಗಳನ್ನು ಕೂಗಿದರು.
ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿ ಮಾತನಾಡಿದ ನರಸಿಂಹಮೂರ್ತಿ, ಸರ್ಕಾರಿ ಸ್ವಾಮ್ಯದ ಬೆಸ್ಕಾಂ ಇಲಾಖೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್​ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವುದು ಆತಂಕ ಮೂಡಿಸಿದೆ. ಖಾಸಗಿ ಕಂಪೆನಿಯಾದ ಟಾಟಾ ಪವರ್​ ಕಂಪೆನಿಗೆ ವಿದ್ಯುತ್​ ವಿತರಣಾ ಪರವಾನಗಿ ನೀಡಿದರೆ ಗ್ರಾಹಕರು, ರೈತರಿಗೆ ತುಂಬಾ ತೊಂದರೆಯಾಗಲಿದೆ. ಜತೆಗೆ ನೌಕರರ ಸೇವಾ ಭದ್ರತೆಗೂ ಧಕ್ಕೆ ಉಂಟಾಗಲಿದೆ ಎಂದರು.
ವಿದ್ಯುತ್​ ಕ್ಷೇತ್ರ ಖಾಸಗೀಕರಣದಿಂದ ಹಲವಾರು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಇದು ರೈತ ವಿರೋಧಿ ಹಾಗೂ ಜನ ವಿರೋಧಿಯಾಗಿದ್ದು, ಸರ್ಕಾರ ಕೂಡಲೇ ಈ ಚಿಂತನೆಯನ್ನು ಕೈ ಬಿಡಬೇಕು. ರಾಜ್ಯದಲ್ಲಿ ವಿದ್ಯುತ್​ ವಿತರಣಾ ಪರವಾನಗಿಯನ್ನು ಟಾಟಾ ಕಂಪೆನಿಗೆ ನೀಡುತ್ತಿರುವುದನ್ನು ಬೆಸ್ಕಾಂ ನೌಕರರ ಒಕ್ಕೂಟ, ರೈತರು, ಗ್ರಾಹಕರು ಹಾಗೂ ಗುತ್ತಿಗೆದಾರರು ಎಲ್ಲರೂ ಸೇರಿ ವಿರೋಧ ಮಾಡಬೇಕು. ಖಾಸಗೀಕರಣದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಗ್ರಾಹಕರಿಗೆ ಮನದಟ್ಟು ಮಾಡಬೇಕು ಎಂದು ಹೇಳಿದರು.
ಉದ್ಯೋಗ ಭದ್ರತೆಗೆ ಧಕ್ಕೆ: ವಿದ್ಯುತ್​ ಕಂಪನಿ ಖಾಸಗೀಕರಣಗೊಂಡರೆ ಉದ್ಯೋಗ ಭದ್ರತೆ ಇಲ್ಲದಂತಾಗಿ ನೌಕರರು ಹಾಗೂ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಖಾಸಗಿ ಕಂಪೆನಿಗಳು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿ, ಕೆಲಸಕ್ಕೆ ತಕ್ಕಷ್ಟು ಮಾತ್ರ ಸಂಬಳ ನೀಡುವುದರಿಂದ ನೌಕರರು ಹಲವಾರು ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಎಂದು ಕೆಪಿಟಿಸಿಎಲ್​ ಅಧೀಕ್ಷಕ ಇಂಜಿನಿಯರ್​ ಶಿವಕುಮಾರ್​ ಅಸಮಾಧಾನ ಹೊರಹಾಕಿದರು.
ರಾಜ್ಯದ 19 ಜಿಲ್ಲೆಗಳಲ್ಲಿ ಟಾಟಾ ಪವರ್​ ಕಂಪೆನಿಯರು ಪರವಾನಗಿ ಪಡೆದುಕೊಳ್ಳುತ್ತಿದ್ದು, ಈಗಾಗಲೇ ಅವರೇ ಇಂಜಿನಿಯರ್​ಗಳು, ಲೈನ್​ಮನ್​ಗಳನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದ ಬೆಸ್ಕಾಂ ನೌಕರರಿಗೆ ತೊಂದರೆಯಾಗಲಿದೆ. ರಿಲೆಯನ್ಸ್​ನವರು ಸಹ 14 ಜಿಲ್ಲೆಗಳಲ್ಲಿ ವಿದ್ಯುತ್​ ವಿತರಣಾ ಪರವಾನಗಿ ಪಡೆದುಕೊಂಡಿದ್ದು ಈ ಪೈಕಿ ಪ್ರಮುಖವಾಗಿ ಬೆಂಗಳೂರು ನಗರವನ್ನು ಪಡೆದುಕೊಂಡಿದ್ದಾರೆ. ಹಾಗಾಗಿ, ನಾವೆಲ್ಲರೂ ಒಟ್ಟಾಗಿ ಇದರ ವಿರುದ್ಧ ಪತ್ರ ಚಳವಳಿಯನ್ನು ಮಾಡಬೇಕು ಎಂದರು.
ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್​ ಪ್ರಶಾಂತ್​ ಕೂಡ್ಲಿಗಿ ಮಾತನಾಡಿ, ವಿದ್ಯುತ್​ ವಿತರಣಾ ಪರವಾನಗಿಯನ್ನು ಟಾಟಾ ಪವರ್​ನಲ್ಲಿ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಟಾಟಾ ಕಂಪೆನಿಯರು ನಮ್ಮ ನೌಕರರಿಗೆ ಕೆಲಸ ಕೊಡದೆ ಅನಿವಾರ್ಯವಾಗಿ ಸ್ವಯಂ ನಿವೃತ್ತಿ ಪಡೆದುಕೊಳ್ಳುವಂತಹ ಪರಿಸ್ಥಿತಿಯನ್ನು ನಿಮಾರ್ಣ ಮಾಡುತ್ತಾರೆ. ಹಾಗಾಗಿ ನೌಕರರು, ನೌಕರ ಸಂಬಂಧಿತ ಸಂಘಗಳು, ಒಕ್ಕೂಟಗಳು ಜತೆಗೂಡಿ ಖಾಸಗೀಕರಣ ವಿರೋಧಿಸಿ ಉಗ್ರ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಬೆಸ್ಕಾಂನ ಅಧಿಕಾರಿಗಳಾದ ಎಂ.ವಿ.ಪ್ರಕಾಶ್​, ಜಿ.ಜಗದೀಶ್​, ಸೋಮಶೇಖರಗೌಡ, ಪುರುಷೋತ್ತಮ್​, ಎಚ್​.ತಿಮ್ಮಪ್ಪ, ಎಂ.ಎಚ್​. ವೆಂಕಟರಮಣಯ್ಯ ಸೇರಿದಂತೆ ಕೆಪಿಟಿಸಿಎಲ್​ ಮತ್ತು ಬೆಸ್ಕಾಂ ಅಧಿಕಾರಿಗಳು, ಲೈನ್​ಮನ್​ಗಳು ಸೇರಿದಂತೆ ನೂರಾರು ಮಂದಿ ನೌಕರರು ಪಾಲ್ಗೊಂಡಿದ್ದರು.
ಸರ್ಕಾರದಿಂದ ಸಬ್ಸಿಡಿ ಬಂದರಷ್ಟೇ ಖಾಸಗಿ ಕಂಪೆನಿಗಳು ರೈತರಿಗೆ ವಿದ್ಯುತ್​ ಸಂಪರ್ಕ ನೀಡುತ್ತವೆ. ಇಲ್ಲದಿದ್ದರೆ ವಿದ್ಯುತ್​ ಸಂಪರ್ಕವನ್ನೇ ಕಡಿತ ಮಾಡುತ್ತವೆ. ಇದರಿಂದ ರೈತರು ಹಾಗೂ ಗ್ರಾಹಕರಿಗೆ ತುಂಬಾ ತೊಂದರೆಯಾಗಲಿದೆ. ಜತೆಗೆ ಅಧಿಕಾರಿಗಳು, ನೌಕರರ ಹುದ್ದೆಗಳಿಗೆ ಕತ್ತರಿ ಬೀಳುತ್ತದೆ. ಗ್ರಾಹಕರು, ರೈತರು, ಸಂಘ ಸಂಸ್ಥೆಗಳು ಎಲ್ಲರೂ ಜತೆಗೂಡಿ ಹೋರಾಟ ನಡೆಸುವ ಮೂಲಕ ವಿದ್ಯುತ್​ ಕ್ಷೇತ್ರ ಖಾಸಗೀಕರಣಕ್ಕೆ ಅವಕಾಶ ಕೊಡಬಾರದು.
ನರಸಿಂಹಮೂರ್ತಿ
ಅಧೀಕ್ಷಕ ಇಂಜಿನಿಯರ್​, ಬೆಸ್ಕಾಂ