ತುಮಕೂರಿನಲ್ಲಿ ಟ್ರಾಫಿಕ್​ ಸಮಸ್ಯೆ ಹಿನ್ನೆಲೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಪೊಲೀಸ್​ ಇಲಾಖೆ, ಪಾಲಿಕೆ ಅಧಿಕಾರಿಗಳ ಜತೆ ಸಮನ್ವಯ ಸಭೆ ನಡೆಸಿದರು. ಕೆ.ವಿ.ಅಶೋಕ್​, ಬಿ.ಶುಭ ಇದ್ದರು.  
ತುಮಕೂರು

ಟ್ರಾಫಿಕ್​ ಸಿಕ್ಕು ಬಿಡಿಸಲು ಪೊಲೀಸರಿಗೆ ಶಾಸಕರ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ತುಮಕೂರಿನಲ್ಲಿ ಸಂಚಾರ ದಟ್ಟಣೆ
  • ಪೊಲೀಸ್​, ಪಾಲಿಕೆ ಸಮನ್ವಯ ಸಭೆ
  • ವಾಹನ ಸವಾರರು ಹೈರಾಣ
ತುಮಕೂರು: ದಿನದಿಂದ ದಿನಕ್ಕೆ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು ನಗರದ ಹಲವೆಡೆ ಟ್ರಾಫಿಕ್​ ಸಮಸ್ಯೆ ಆಗುತ್ತಿದೆ. ಇದನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಕ್ರಮವಹಿಸುವಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ತಾಕೀತು ಮಾಡಿದರು.
ನಗರದ ಟ್ರಾಫಿಕ್​ ಸಮಸ್ಯೆ ಹಿನ್ನೆಲೆ ಜಿಲ್ಲಾ ಪೊಲೀಸ್​ ಅಧೀಕ್ಷಕ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ಜತೆ ಸಮನ್ವಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಗರದಲ್ಲಿ ವಸತಿ ಪ್ರದೇಶಗಳಲ್ಲಿ ಭಾರಿ ವಾಹನಗಳು ಸಂಚಾರ ಮಾಡುತ್ತಿದ್ದು, ಅಮಾಯಕ ಜನರ ಪ್ರಾಣಕ್ಕೆ ಸಂಚಕಾರ ಎದುರಾಗುತ್ತಿದೆ. ಈ ಕಾರಣದಿಂದ ಗಾರ್ಡನ್​ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧ ಮಾಡಬೇಕು ಹಾಗೂ ದಿಬ್ಬೂರು ಜಂಕ್ಷನ್​ ಬಳಿ ಸಿಗ್ನಲ್​ ದೀಪಗಳನ್ನು ಅದೇ ರೀತಿಯಾಗಿ ಕುಣಿಗಲ್​ ಸರ್ಕಲ್​, ರಾಣಿಚೆನ್ನಮ್ಮ ಸರ್ಕಲ್​ನಲ್ಲಿ ಸಿಗ್ನಲ್​ ದೀಪ ಅಳವಡಿಸುವಂತೆ ಸಲಹೆ ನೀಡಿದರು.
ಅತಿ ವೇಗದಲ್ಲಿ ವಾಹನಗಳು ಸಂಚಾರ ಮಾಡುವುದರಿಂದ ಅಪಘಾತಗಳು ಹೆಚ್ಚಾಗಿ ಹಿಟ್​ ಅಂಡ್​ ರನ್​ ಕೇಸ್​ಗಳು ಹೆಚ್ಚಾಗುತ್ತಿದೆ. ಈ ಕಾರಣದಿಂದ ಯಲ್ಲಾಪುರ, ಅಂತರಸನಹಳ್ಳಿ ರಸ್ತೆಯಲ್ಲಿ ಹಾಗೂ ಇತರ ಅಪಘಾತ ವಲಯದಲ್ಲಿ ವೈಜ್ಞಾನಿಕವಾಗಿ ಹಂಪ್ಸ್​, ಸೂಚನಾ ಫಲಕ, ಕ್ಯಾಟ್​ ಐಸ್​, ಬಿಳಿ ಬಣ್ಣದ ಮಾರ್ಕರ್​ ಮಾಡಬೇಕು. ಸಿದ್ಧಿವಿನಾಯಕ ಮಾರುಕಟ್ಟೆಯ (ಜೆ.ಸಿ.ರಸ್ತೆಯ) ಎಡಭಾಗದಲ್ಲಿರುವ ಹೂವು-ಹಣ್ಣು ಮಾರಾಟಗಾರರು ಕಳೆದ 60 ವರ್ಷಗಳಿಂದ ಅಲ್ಲಿಯೇ ವ್ಯಾಪಾರ ಮಾಡುತ್ತಿದ್ದು, ಅವರು ವ್ಯಾಪಾರ ನಡೆಸಲು ಸಹಕಾರ ಹಾಗೂ ಸೌಲಭ್ಯ ನೀಡಲು ಸಭೆಯಲ್ಲಿ ಸೂಚನೆ ನೀಡಿದರು.
ಬಡ್ಡಿಹಳ್ಳಿ ರೈಲ್ವೆ ಮೇಲುಸೇತುವೆ ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಯುತ್ತಿರುವ ಕಾಮಗಾರಿಯಿಂದ
ಅಂತರಸನಹಳ್ಳಿ ಕೆಳ ಸೇತುವೆ ಬಳಿ ಚರಂಡಿ ನೀರು ನಿಂತು ವಾಹನ ಸವಾರರು ಸಂಚಾರ ಮಾಡಲು ತೀವ್ರ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಅದೇ ರೀತಿಯಾಗಿ ಭೀಮಸಂದ್ರ ಶಾಹಿ ಗಾಮೆಂರ್ಟ್ಸ್​ ಮುಂಭಾಗ ಪಾಲಿಕೆ ವಾಟರ್​ ಪೈಪ್​ಲೈನ್​ ಹೊಡೆದು ಹೋಗಿದ್ದು, ರಸ್ತೆ ಬದಿ ಕೆರೆಯಂತಾಗಿದೆ ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಮಿಕಲ್​ ತ್ಯಾಜ್ಯ: ನಗರದ ಅಮಾನಿಕೆರೆಯ ಮುಂಭಾಗದ ಎಸ್​-ಮಾಲ್​ನ ಹಿಂಭಾಗದ ಕಾಲುವೆ ಶಿರಾಗೇಟ್​ ರಿಂಗ್​ ರಸ್ತೆ ದಿಬ್ಬೂರು ಬಳಿಯ ಕಾಲುವೆ ಹಾಗೂ ಭೀಮಸಂದ್ರ ಸೇತುವೆ ಹತ್ತಿರ ಇರುವ ಕಾಲುವೆಗಳಿಗೆ ಯಾವುದೋ ಕೆಮಿಕಲ್​ ಕಂಪನಿಯವರು ಕೆಮಿಕಲ್​ ತ್ಯಾಜ್ಯಗಳನ್ನು ಯಾರು ಸಂಚರಿಸದ ರಾತ್ರಿ ವೇಳೆಯಲ್ಲಿ ತಂದು ಸುರಿಯುತ್ತಿದ್ದು, ಸುತ್ತಮುತ್ತಲಿನ ಮಕ್ಕಳು, ವೃದ್ಧರು, ಸಾರ್ವಜನಿಕರು ಉಸಿರಾಡಲು ಸಹ ಕಷ್ಟಕರವಾಗುತ್ತಿದೆ. ಕೆಮಿಕಲ್​ ತ್ಯಾಜ್ಯ ಸುರಿಯುವ ಕಂಪನಿಯವರ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ಹೂಡಿ ಕಠಿಣ ಕ್ರಮಕೈಗೊಳ್ಳುವಂತೆ ಜ್ಯೋತಿಗಣೇಶ್​ ಸೂಚನೆ ನೀಡಿದರು.
ಈ ವೇಳೆ ಎಸ್ಪಿ ಅಶೋಕ್​, ಪೊಲೀಸ್​ ಸರ್ಕಲ್​ ಇನ್ಸ್​ಪೆಕ್ಟರ್​ ರವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಹಾಗೂ ಎಲ್ಲಿ ಎಲ್ಲಿ ಕಾಲುವೆಗೆ ಕೆಮಿಕಲ್​ ಎಸೆಯಲು ಅವಕಾಶವಿದೆಯೋ ಆ ಸ್ಥಳದಲ್ಲಿ ಸಿಸಿ ಕ್ಯಾಮಾರಾ ಅಳವಡಿಸಲು ಪಾಲಿಕೆ ಆಯುಕ್ತರಿಗೆ ಸಲಹೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತ ಬಿ.ಶುಭ, ಪಾಲಿಕೆ, ರೈಲ್ವೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಸಮನ್ವಯ ಸಭೆಯಲ್ಲಿ ಹಾಜರಿದ್ದರು.
ಕೆಂಪಣ್ಣ ಅಂಗಡಿ ಸರ್ಕಲ್​ ಯಮಯಾತನೆ !
ಎಸ್​.ಎಸ್​.ಪುರಂನ ಕೆಂಪಣ್ಣನ ಅಂಗಡಿ ಸರ್ಕಲ್​ನಿಂದ ಶೆಟ್ಟಿಹಳ್ಳಿ ಕಡೆಗೆ ಹಾಗೂ ಎಸ್​ಐಟಿ ಕಡೆಗೆ ಹೋಗುವ, ಅಶೋಕನಗರ, ಎಸ್​.ಎಸ್​.ಪುರಂ ನಾಗರೀಕರು ಟ್ರಾಫಿಕ್​ ಜಾಮ್​ನಿಂದ ಗಂಟೆ ಗಟ್ಟಲೆ ವಾಹನ ಸವಾರರು ಪರದಾಡುವಂತಾಗಿದೆ. ಇದು ವಾಹನ ಸವಾರರಿಗೆ ನಿತ್ಯ ಯಮಯಾತನೆಯಾಗಿ ಮಾರ್ಪಟ್ಟಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಸಂಚಾರ ಪೊಲೀಸರನ್ನು ನಿಯೋಜಿಸಿ, ಬೆಳಗ್ಗೆ, ಸಂಜೆ ವಾಹನ ಸಂಚಾರ ದಟ್ಟಣೆ ಸಂದರ್ಭದಲ್ಲಿ ಟ್ರಾಫಿಕ್​ ನಿಯಂತ್ರಣಕ್ಕೆ ಕ್ರಮವಹಿಸಲು ಜಿಲ್ಲಾ ಪೊಲೀಸ್​ ಅಧೀಕ್ಷಕರಿಗೆ ಶಾಸಕ ಜ್ಯೋತಿಗಣೇಶ್​ ಸೂಚನೆ ನೀಡಿದರು.