Those who spread the message of equality
ತಿಪಟೂರು: ಡಾ.ಅಂಬೇಡ್ಕರ್ ಯಾವುದೇ ಜಾತಿ, ಸಮುದಾಯದ ಒಳಿತಿಗೆ ಸಂವಿಧಾನ ರಚಿಸಲಿಲ್ಲ. ಇಡೀ ದೇಶವಾಸಿಗಳಿಗೆ ಅನ್ವಯಿಸುವಂತ ಸಂವಿಧಾನ ರಚಿಸುವ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಉಪವಿಬಾಗಾಧಿಕಾರಿ ಬಿ.ಕೆ.ಸಪ್ತಶ್ರೀ ತಿಳಿಸಿದರು.
ತಾಲೂಕು ಆಡಳಿತದಿಂದ ಮಂಗಳವಾರ ಆಡಳಿತ ಸೌಧದಲ್ಲಿ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ಯಾವುದೇ ಸಮುದಾಯ ಇರಲಿ ಅವರಲ್ಲಿ ಸಮರ್ಪಕ ಶಿಕ್ಷಣ ಇದ್ದರೆ ಮಾತ್ರ ಸಂಘಟಿತ ಹೋರಾಟ ಮತ್ತು ಸಮಾಜದಲ್ಲಿ ಸಮತೋಲನ ನಿರ್ಮಿಸಲು ಸಾಧ್ಯ. ಮನುಷ್ಯ ಜಾತಿ ಒಂದೇ, ಆದರೆ ಕೆಲವರಲ್ಲಿ ತಾನು ಕೀಳು ಜಾತಿಯವ ಎಂಬ ಕೀಳಿರಿಮೆಯ ಇದೆ. ಮೊದಲು ಜಾತಿ ಎಂಬ ಭಾವನೆಯಿಂದ ಮನಸ್ಸು ಹೊರಬರುವಂತೆ ಮಾಡಬೇಕಿದೆ ಎಂದರು.
ಉಪನ್ಯಾಸಕ ಕೆ.ಎಂ. ರೇಣುಕಯ್ಯ ಮಾತನಾಡಿ, ಅಂಬೇಡ್ಕರ್ ಕೇವಲ ಹರಿಜನರಿಗಾಗಿ ಶ್ರಮಿಸಲಿಲ್ಲ. ಇಡೀ ಮನುಕುಲಕ್ಕೆ ಸಮಾನತೆಯ ಪಾಠ, ರೀತಿ, ನೀತಿ ಕಲಿಸಿದ ಧೀಮಂತ ವ್ಯಕ್ತಿ. ಅವರು ರಚಿಸಿದ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗ ಸಮಾಜದಲ್ಲಿ ಸಮಾನತೆಯ ದಾರಿ ತೋರಿಸುತ್ತಿದೆ. ಅವರ ಸಾಧನೆಯೆಂಬ ಸಮುದ್ರದಲ್ಲಿ ನಾವು ಅರಿತಿರುವುದು ಒಂದು ಬೊಗಸೆ ನೀರಿನಷ್ಟು ಮಾತ್ರ ಎಂದು ತಿಳಿಸಿದರು.
ಭೋವಿ ಸಮಾಜದ ಮುಖಂಡ ಶಂಕರಪ್ಪ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ತ್ರಿವೇಣಿ. ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಜಲಜಾಕ್ಷಮ್ಮ. ಆಹಾರ ಶಿರಸ್ತೇದಾರ್ ರೇಣುಕಪ್ರಸಾದ್ ಮತ್ತಿತರರು ಇದ್ದರು.