ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ಹೂಬಿಟ್ಟಿರುವ ಜಾಲಾರಿ ಮರ. 
ತುಮಕೂರು

ಅರೆ ನಿತ್ಯಹರಿದ್ವರ್ಣ ಕಾಡಿನಲ್ಲೀಗ ಜಾಲಾರಿ ಪರಿಮಳ

ಪ್ರಮುಖ ಮುಖ್ಯಾಂಶಗಳು

  • ಅಪಾಯದ ಅಂಚಿನಲ್ಲಿರುವ ಸ್ಥಾನಿಕ ಸಸ್ಯ ಪ್ರಭೇದ
  • ಕಾಳಜಿ ಮರೆತು ಸಂರಕ್ಷಣೆ ಮಾಡದ ಅರಣ್ಯ ಇಲಾಖೆ
  • ಹೂ ಬಯಸಿ ರೆಂಬೆ, ಕೊಂಬೆ ಮುರಿಯುವ ಜನ
  • ತುಮಕೂರು ಜಿಲ್ಲೆಯ ಅಪರೂಪದ ಹೂ ಜಾಲಗಿರಿ
ತುಮಕೂರು: ಚಿಕ್ಕನಾಯಕನಹಳ್ಳಿ, ಬುಕ್ಕಾಪಟ್ಟಣ ಸುತ್ತಮುತ್ತಲ ಬೆಟ್ಟ ಕಾಡುಗಳು ಸೇರಿದಂತೆ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲೀಗ ಜಾಲಾರಿ ಹೂವಿನ ಮ..ಮ... ವಸಂತ ಕಾಲದ ಆರಂಭದಲ್ಲಿ ಶಿವರಾತ್ರಿ ಸಮಯ ಬಂತೆಂದರೆ ಹಳ್ಳಿ ಹೆಣ್ಣು ಮಕ್ಕಳ ಮುಡಿಯಲ್ಲಿ ಮಮಿಸುವ ಜಾಲಾರಿ(ಜಾಲಗಿರಿ) ಪರಿಮಳ ಇಡೀ ಕಾಡಿಗೆ ಹಬ್ಬಿದೆ.
ಗ್ರಾಮಗಳಲ್ಲಿ ಹಬ್ಬದ ದಿನದಂದು ದೇವಸ್ಥಾನಗಳ ಪೂಜೆಗಾಗಿ ಜಾಲಾರಿ ಹೂಗಳನ್ನು ಬಳಸುವುದು ಸಾಮಾನ್ಯ. ಹೂಗಳ ರೆಂಬೆ ಸಿಕ್ಕಿಸಿ ಕೊಂಡು ಅಲಂಕರಿಸಿಕೊಳ್ಳುವುದು ವಾಡಿಕೆ. ಪ್ರಕೃತಿಯ ಚೆಲುವೆಗೆ ಪುಷ್ಠಿ ನೀಡುವ ಇಂತಹ ಅಪರೂಪದ ಹೂವು ಬಯಸಿ ಅರಣ್ಯ ಪ್ರದೇಶದಲ್ಲಿರುವ ಮರದ ಬುಡಕ್ಕೆ ಜನರೇ ಕೊಡಲಿ ಇಟ್ಟಿದ್ದಾರೆ. ಜಾಗರಣೆಯ ನೆಪದಲ್ಲಿ ಹೂಗಳಿಗಾಗಿ ಜಾಲಾರಿ ಮರ ಏರುವ ಜನರು ಮಾರಾಟಕ್ಕಾಗಿ ಮರದ ರೆಂಬೆ, ಕೊಂಬೆಗಳನ್ನು ಮುರಿದು ಅಪರೂಪದ ಸಸ್ಯದ ನಿನಾಶಕ್ಕೆ ಕೊಡುಗೆ ನೀಡಿದ್ದಾರೆ.
ಪ್ರಕೃತಿಕವಾಗಿಯೇ ಹುಟ್ಟಿ ಬೆಳೆಯುವ ಈ ಅಪರೂಪದ ಸಸ್ಯ ಪ್ರಭೇದವನ್ನು ಉಳಿಸಿ, ಮುಂದಿನ ಪೀಳಿಕೆಗೆ ಬೆಳೆಸುವ ಕೆಲಸವನ್ನು ಅರಣ್ಯ ಇಲಾಖೆ ಎಂದೂ ಮಾಡುವ ಗೋಜಿಗೆ ಹೋಗಿಲ್ಲ, ಬೀಜಗಳನ್ನು ಸಂರಸಿ ಸಸಿ ಮಾಡುವ ಕೆಲಸಕ್ಕೆ ಎಂದೂ ತೆಲೆಕೆಡಿಸಿಕೊಂಡಿಲ್ಲ, ಹೂ ಬಿಟ್ಟು ಬೀಜವಾದ ಕೆಲಸವೇ ದಿನಗಳಲ್ಲಿ ಅದು ಭೂಮಿಯಲ್ಲಿ ಮೊಳೆತರೆ ಮಾತ್ರ ಸಸಿಯಾಗುವ ಅಪರೋಪದ ಜಲಾರಿ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕಿದೆ.
ಜಾಲಾರಿ ಮರಗಳು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ, ದೇವರಾಯನದುರ್ಗ ಹಾಗೂ ಸಿದ್ದರಬೆಟ್ಟದ ಅರಣ್ಯ ಪ್ರದೇಶಗಳ ಬೆಟ್ಟಗಳ ಇಳಿಜಾರಿನಲ್ಲಿ ತಂಪಾದ ಹವಾಗುಣವಿರುವ ಅರೆಹರಿದ್ವರ್ಣ ಕಾಡಿರುವ ಜಾಗದಲ್ಲಿ ಮಾತ್ರ ಬೆಳೆಯುತ್ತವೆ. ಪ್ರಸ್ತುತ ಜಿಲ್ಲೆಯಲ್ಲಿ 300&400 ವರ್ಷಗಳಷ್ಟು ಹಳೆಯದಾದ ಸುಮಾರು 200 ರಿಂದ 250 ಮರಗಳು ಮಾತ್ರ ಉಳಿದಿವೆ.
ಬೇಸಿಕೆಯಲ್ಲಿಯೂ ಝರಿ ಹರಿದು ಅರೆ ನಿತ್ಯಹರಿಧ್ವರ್ಣ ಕಾಡುಗಳು ಎನ್ನಿಸಿಕೊಂಡಿದ್ದ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬೇಸಿಗೆಯಲ್ಲಿಯೂ ತಣ್ಣನೆಯ ಹವಾಗುಣ ಜಾಲಾರಿ ಮರಗಳ ಬೆಳವಣಿಗೆಗೆ ನೆರವಾಗಿತ್ತು ಆದರೆ, ಇತ್ತೀಚೆಗೆ ಮಳೆಯ ಅಭಾವದಿಂದ ಅರಣ್ಯದಲ್ಲಿಯೂ ಕಡು ಬೇಸಿಗೆಯಾಗಿ ವಾತಾವರಣ ಬದಲಾಗಿರುವ ಕಾರಣದಿಂದ ಜಾಲಾರಿ ನಿಧಾನವಾಗಿ ನಾಶವಾಗಲು ಕಾರಣವಾಗಿದೆ.
ಬಹುಪಯೋಗಿ ಅಪರೂಪದ ಸ್ಥಾನಿಕ ಸಸ್ಯ!
ಅಪರೂಪದ, ಅಪಾಯದ ಅಂಚಿನಲ್ಲಿರುವ ಜಾಲರಿ ಮರಗಳನ್ನು ಗುರುತಿಸಿರುವ ಐಯುಸಿಎನ್​ ಸಂಸ್ಥೆ ಈ ಮರವನ್ನು ಕೆಂಪು ಪಟ್ಟಿಯಲ್ಲಿ ಸೇರಿಸಿದೆ. ಈ ಮರಗಳು ಬೇರೆ ಪ್ರದೇಶಗಳಲ್ಲಿ ಬೆಳೆಯದೆ ಈ ಭೂ ಪ್ರದೇಶದಲ್ಲಿ ಮಾತ್ರ ಕಂಡು ಬರುವುದರಿಂದ ಇವುಗಳನ್ನು ಸ್ಥಾನಿಕ ಸಸ್ಯಗಳೆಂದೇ (ಎಂಡೆಮಿಕ್​ ಸ್ಪೀಸಿಸ್​) ಹೆಸರಿಸಲಾಗಿದೆ.
ಜಲಾರಿ ಮರದ ಕಾಂಡವನ್ನು ಬೇದಿ, ಡಯೇರಿಯ ರೋಗಗಳ ಶಮನ ಗೊಳಿಸಲು ಹಾಗೂ ಧೂಮ ಉತ್ಪಾದನೆಗೆ ಬಳಸುತ್ತಾರೆ. ಇದರ ಕಾಂಡ ಭಾಗದಲ್ಲಿ ಒಸರುವ ರಾಳವನ್ನು ಸುವಾಸಿಕಗಳ ಉತ್ಪಾದನೆಯಲ್ಲಿ ಬಳಸುತ್ತಾರೆ. ಫೆಬ್ರವರಿ& ಮಾರ್ಚ್​ ತಿಂಗಳಲ್ಲಿ ಜಾಲಾರಿ ಮರಗಳು ಎಲೆಗಳನ್ನು ಉದುರಿಸಿಕೊಂಡು ಚಿಗುರೆಲೆಗಳು ಹುಟ್ಟುವುದಕ್ಕಿಂತ ಮುಂಚೆಯೆ ಇಡೀ ಮರದ ತುಂಬಾ ಹಳದಿ ಬಿಳುಪಿನ ಹೂಗಳು ಹುಟ್ಟಿ, ಅರಳಿದಾಗ ಹೂಗಳ ಸುವಾಸನೆಯಿಂದ ಇಡೀ ಕಾಡು ಮಗಮಿಸುತ್ತದೆ. ಇಂತಹ ಹೂ ರೆಂಬೆಗಳನ್ನು ತುಮಕೂರು ನಗರದಲ್ಲಿ ಮಾರಾಟ ಮಾಡಲು ದೇವರಾಯನದುರ್ಗಕ್ಕೆ ತಂಡೋಪ ತಂಡವಾಗಿ ಬರುವ ಜನ ಇಡೀ ಕೊಂಬೆಗಳನ್ನು ಕಡಿದು ಮರಗಳನ್ನು ಬೋಳು ಮಾಡಿ ಹೋಗುತ್ತಿರುವುದರಿಂದ ಮರಗಳಲ್ಲಿ ನಂಜು ಉಂಟಾಗಿ ಒಣಗಲು ಕಾರಣವಾಗುತ್ತಿದೆ.
ಐಯುಸಿಎನ್​ ಸಂಸ್ಥೆಯ ಕೆಂಪು ಪಟ್ಟಿಯ ಜಾಲಾರಿ
ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ(ಐಯುಸಿಎನ್​) ಕರ್ನಾಟಕದಲ್ಲಿ ಸಿಗುವ ಈ ಅಪರೂಪದ, ಅಮೂಲ್ಯವಾದ ಜಾಲಾರಿ ಮರವನ್ನು ವಿನಾಶದ ಅಂಚಿನಲ್ಲಿರುವ ಸಸ್ಯ ಎಂದು ಗುರುತಿಸಿ "ಕೆಂಪುಪಟ್ಟಿ'ಗೆ ಸೇರಿಸಿದೆ.
ಅರೆ ನಿತ್ಯಹರಿದ್ವರ್ಣ ಕಾಡಿನಲ್ಲಿರುವ ಕೆಂಪು ಪಟ್ಟಿಯ ಈ ಜಾಲಾರಿ ಸಸ್ಯದ ಉತ್ಪಾದಿಸುತ್ತದೆ ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸಲು ವಿಜ್ಞಾನ ಆಧಾರಿತ ಮಾನದಂಡಗಳು, ಪರಿಕರಗಳು ಮತ್ತು ಮಾರ್ಗದರ್ಶನವನ್ನು ಈ ಸಂಸ್ಥೆಯ ವತಿಯಿಂದಲೇ ಶೀಪಾರಸು ಮಾಡಿದ್ದರೂ ಸಂಬಂಧಪಟ್ಟ ಅರಣ್ಯ ಇಲಾಖೆಗೆ ಇದರ ಉಸಾಬರಿ ಬೇಡವಾಗಿದ್ದು ಜಿಲ್ಲೆಯಲ್ಲಿ ಬೀಜ ಸಂಗ್ರಹಿಸಿ ಕನಿಷ್ಟ ಸಸಿ ಮಾಡುವ ಕೆಲಸವನ್ನೂ ಈವರೆಗೂ ಮಾಡಿಲ್ಲ.
.
ಮಳೆ ಕಡಿಮೆಯಾಗಿ ಗುಡ್ಡಗಳಲ್ಲಿ ನೀರು ಸ್ವಾಭಾವಿಕವಾಗಿ ಹರಿಯುವುದೇ ಕಡಿಮೆಯಾಗಿದ್ದು ಹಾಗೂ ಕಾಡಿಗೆ ಬೀಳುವ ಬೆಂಕಿಯಿಂದ ಇಂತಹ ಅಪರೂಪದ ಮರಗಳ ಸಂತತಿಗೆ ಕುತ್ತು ಬಂದಿದೆ. ಜಲಾರಿ ಮರದಿಂದ ಬೀಜ ಸಂಗ್ರಹಿಸಿ ಸಸಿ ಮಾಡುವ ಮೂಲಕ ಅರಣ್ಯ ಇಲಾಖೆ ಈ ಮರಗಳ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕು. ಬೆಟ್ಟ ಗುಡ್ಡಗಳಲ್ಲಿ ಜಾಲಾರಿ ಹೂ ಕೋಯ್ಲು ಕಡ್ಡಾಯವಾಗಿ ನಿಷೇಧಿಸಬೇಕು.
ಎಸ್​.ಗಂಗಾಧರಯ್ಯ
ಕಥೆಗಾರ