The role of teachers is important in shaping life. 
ತುಮಕೂರು

ಜೀವನ ರೂಪಿಸುವಲ್ಲಿ ಗುರುಗಳ ಪಾತ್ರ ಪ್ರಮುಖ

ತುರುವೇಕೆರೆ: ಭೂಲೋಕದಲ್ಲಿ ಕಣ್ಣಿಗೆ ಕಾಣುವ ದೇವರೆಂದರೆ ನಮಗೆ ಜೀವ ಕೊಟ್ಟ ತಂದೆ&ತಾಯಿ, ಜೀವನ ಕೊಟ್ಟ ಗುರುಗಳು ಮಾತ್ರ ಎಂದು ನಿವೃತ್ತ ಅಧ್ಯಾಪಕ ಆನಂದ್​ ವಾಡೇಕರ್​ ಅಭಿಪ್ರಾಯಪಟ್ಟರು.
ತಾಲೂಕಿನ ದಂಡಿನಶಿವರದ ಸರ್ಕಾರಿ ಪ್ರೌಢಶಾಲೆಯಲ್ಲಿ 1998-&99ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು ಇಂದು ಉತ್ತಮ ಹಂತದಲ್ಲಿದ್ದಾರೆ, ಪ್ರಗತಿಪರ ರೈತರಾಗಿದ್ದಾರೆ. ನೂರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಕೆಲವರು ರಾಜಕಾರಣಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಿನಲ್ಲಿ ಭೂಮಿಗೆ ಭಾರವಾಗದೇ, ಸಮಾಜಕ್ಕೆ ಹೊರೆಯಾಗದೇ ಜೀವನ ಸಾಗಿಸುತ್ತಿದ್ದಾರೆ ಎಂಬುದೇ ತಮಗೆ ಸಂತಸ ಎಂದರು.
ಗುರುವಾದವರು ಪ್ರತಿ ದಿನವೂ ತಾನೊಬ್ಬ ವಿದ್ಯಾರ್ಥಿ ಎಂಬ ರೀತಿಯಲ್ಲೇ ಇರಬೇಕು. ನಿರಂತರ ಓದುವಿಕೆಯನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕನಿಗೆ ನಿವೃತ್ತಿ ಎಂಬುದೇ ಇಲ್ಲ. ತನ್ನ ಶಿಷ್ಯರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂಬ ಮಹತ್ತರ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲಿದೆ ಎಂದರು.
ನಿವೃತ್ತ ಪ್ರಾಂಶುಪಾಲೆ ಸುಧಾಮಣಿ ಮಾತನಾಡಿ, ಋಣ ತೀರಿಸಲಾಗದ್ದು ಯಾವುದಾದರೂ ಇದ್ದರೆ ಅದು ಗುರುವಿನ ಋಣ. ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ಬಾಳಿದರೆ ಶಿಷ್ಯ ತನ್ನ ಗುರುವಿಗೆ ಕೊಡುವ ಗುರುದಕ್ಷಿಣೆ ಎಂದರು. ಈ ವೇಳೆ ತಮಗೆ ವಿದ್ಯೆ ಕಲಿಸಿದ ಶಾರದಾ ಆನಂದ್​ ವಾಡೇಕರ್​, ಸೀತಮ್ಮ, ರಾಮಯ್ಯ, ಸಿ.ಕುಸುಮ, ರಂಗಪ್ಪ, ಕೋಮಲಾ ಹಾಗೂ ಸೈನಿಕ ದಿವಂಗತ ಬಸವೇಗೌಡರ ಪತ್ನಿ ಸವಿತಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಹಳೇ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಗ್ರಾಮ ದೇವತೆ ಹೊನ್ನಾದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ತಮ್ಮ ಶಿಕ್ಷಕರಿಗೆ ಜಯಘೋಷ ಹಾಕುತ್ತಾ ವೇದಿಕೆಗೆ ಕರೆತರಲಾಯಿತು.