ತುಮಕೂರು ಜಿಲ್ಲೆಯ ನೊಣವಿನಕೆರೆ ಸೋಮೇಕಟ್ಟೆ ಶ್ರೀಕಾಡ ಸಿದ್ದೇಶ್ವರ ಮಠದ ಅಜ್ಜಯ್ಯನ ಜಾತ್ರಾ ಮಹೋತ್ಸವದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ 
ತುಮಕೂರು

ಅಜ್ಜಯ್ಯನವರ ಆಶಿರ್ವಾದದಿಂದ ಸರ್ಕಾರಕ್ಕೆ ಶಕ್ತಿ ಬಂದಿದೆ

ಪ್ರಮುಖ ಮುಖ್ಯಾಂಶಗಳು

  • ಅಜ್ಜಯ್ಯನ ಮಾರ್ಗದರ್ಶನದಲ್ಲಿ ನನ್ನ ಬದುಕು
  • ಭಕ್ತ ಹಾಗೂ ಭಗವಂತನ ನಡುವೆ ಜಾತಿಯಿಲ್ಲ
  • ಮನೆಯಂತೆ ಮಠವನ್ನೂ ಕಾಪಾಡಬೇಕು
ತುಮಕೂರು: "ಗುರುವೇ ಸಾಕ್ಷಾತ್ ದೇವರು, ಗುರುವೇ ನಮ್ಮೆಲ್ಲರ ಪಾಲಕನು ಎಂದು ನಂಬಿದ್ದೇವೆ. ಅಜ್ಜಯ್ಯನವರ ಮಾರ್ಗದರ್ಶನದಲ್ಲಿಯೇ ನಾನು ಬದುಕುತ್ತಿರುವುದು.‌ ಅವರ ಶಕ್ತಿಯಿಂದಲೇ ಇಲ್ಲಿಯವರೆಗೆ ಬೆಳೆದುಕೊಂಡು ಬಂದಿರುವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನೊಣವಿನಕೆರೆ ಸೋಮೇಕಟ್ಟೆ ಶ್ರೀ ಕಾಡ ಸಿದ್ದೇಶ್ವರ ಮಠದ ಅಜ್ಜಯ್ಯನ ಜಾತ್ರಾ ಮಹೋತ್ಸವದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.
"ಅಜ್ಜಯ್ಯನವರ ಶಕ್ತಿ ಪ್ರಯೋಗ ಆಗದೇ ಇದ್ದಿದ್ದರೆ ಈ ರಾಜ್ಯದಲ್ಲಿ ನಮ್ಮ ಸರ್ಕಾರಕ್ಕೆ ಶಕ್ತಿಯುತ ಮಾರ್ಗದರ್ಶನ ಸಾಧ್ಯ ಆಗುತ್ತಾ ಇರಲಿಲ್ಲ. ಮುಂದಕ್ಕೆ ಏನಾಗುತ್ತದೆ ಎಂದು ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಅವರ ಮಾರ್ಗದರ್ಶನ, ನಿರ್ಣಯದಂತೆ ನಾವು ನಡೆಯುತ್ತಿದ್ದೇವೆ‌. ಮುಂದಿ‌ನ ಕಾಲ, ತೀರ್ಮಾನಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಶ್ರೀಗಳ ಮಾರ್ಗದರ್ಶನ, ಆಶೀರ್ವಾದ ಪಡೆದುಕೊಂಡು ಹೋಗಲು ಬಂದಿದ್ದೇನೆ. ನಿಮಗೂ ನಮಗೂ ಖಂಡಿತವಾಗಿ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ" ಎಂದರು.
"ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ಒಳ್ಳೆ ಕೆಲಸ ಮಾಡೋಣ. ನಾನು ಈ ಮಠದ ಭಕ್ತ. ಎಲ್ಲೆಲ್ಲಿ ಏನೇನು ಸಿಗುತ್ತದೆ ಎಂದು ನಾನು ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ತೆಗೆದುಕೊಂಡಾಗ ನಕ್ಕಿದ್ದಾರೆ. ಕೆಲವರು ಸಂತೋಷ ಪಟ್ಟಿದ್ದಾರೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಸದಾ ಮುಖ್ಯ" ಎಂದರು.
"ಬೇಕಾದಷ್ಟು ಜನ ನನ್ನನ್ನು ಕೇಳುತ್ತಾರೆ. ನೀನು ಒಕ್ಕಲಿಗ ಆದರೆ ಈ ಮಠಕ್ಕು ನಿನಗೂ ಏನು ಸಂಬಂಧ ಎನ್ನುತ್ತಾರೆ. ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧದಲ್ಲಿ ಯಾವುದೇ ಜಾತಿ ಬರುವುದಿಲ್ಲ. ಮಾನವಧರ್ಮಕ್ಕೆ ಜಯವಾಗಲಿ, ಮಾನವಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಮಾತಿನಂತೆ ನಾವು ನಡೆಯುತ್ತಿದ್ದೇವೆ. ನಾವು ಹುಟ್ಟುವಾಗ ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ" ಎಂದರು.
"ಬೆವರು ಉಪ್ಪಾಗಿರುತ್ತದೆ, ರಕ್ತ ಕೆಂಪಾಗಿರುತ್ತದೆ. ಯಾವುದೇ ಮನುಷ್ಯನ ರಕ್ತವೂ ಕೆಂಪಾಗಿಯೇ ಇರುತ್ತದೆ. ಬಡವ, ಶ್ರೀಮಂತ ಆದರೂ ಯಾವುದೇ ಬದಲಾವಣೆ ಇರೋದಿಲ್ಲ. ಮಾನವ ತತ್ವಕ್ಕೆ ಶಕ್ತಿ ತುಂಬುವ ಕೆಲಸವನ್ನು ವೀರ ಗಂಗಾಧರ ಅಜ್ಜನವರು ಮಾಡಿದ್ದಾರೆ.
"ಅಂಗಕ್ಕೆ ಆಚಾರವೆ ಆಶ್ರಯ. ಆಚಾರಕ್ಕೆ ಪ್ರಾಣವೆ ಆಶ್ರಯ. ಪ್ರಾಣಕ್ಕೆ ಜ್ಞಾನವೆ ಆಶ್ರಯ. ಜ್ಞಾನಕ್ಕೆ ಲಿಂಗವೆ ಆಶ್ರಯ. ಲಿಂಗಕ್ಕೆ ಜಂಗಮವೆ ಆಶ್ರಯ. ಗುರುವಿನಿಂದ ಪುಣ್ಯ, ಗುರುವಿನಿಂದ ಮುಕ್ತಿ ಜಗಕೆಲ್ಲಾ ಎಂದು ಸರ್ವಜ್ಞ ಹೇಳಿದ್ದಾರೆ. ಧರ್ಮ ಎಂದರೆ ಮನುಷ್ಯತ್ವ. ಈ ಧರ್ಮವನ್ನ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡುತ್ತಿದ್ದೇವೆ. ನಮ್ಮ ಸರ್ಕಾರವು ಇದೇ ದಾರಿಯಲ್ಲಿ ಕೆಲಸ ಮಾಡುತ್ತಿದೆ" ಎಂದು ಹೇಳಿದರು.
"ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕ್ತಿ ಎನ್ನುವ ಮಾತಿದೆ. ಜೀವನದಲ್ಲಿ ಕೇವಲ ಬುದ್ದಿವಂತಿಕೆ ಮಾತ್ರ ಇದ್ದರೆ ಸಾಲದು ಹೃದಯವಂತಿಕೆ ಇರಬೇಕು. ವೀರ ಗಂಗಾಧರ ಅಜ್ಜಯ್ಯ ನಮ್ಮೆಲ್ಲರ ಆರಾಧ್ಯದೈವ. ಇಂತಹ ಪವಿತ್ರವಾದ ಜಾತ್ರೆಯಲ್ಲಿ ಭಾಗವಹಿಸಿರುವುದೇ ನಮ್ಮೆಲ್ಲರ ಪುಣ್ಯ" ಎಂದರು.
"ನಾನು ಉಪಮುಖ್ಯಮಂತ್ರಿಯಾಗಿ ಇಂದಿಗೆ 1 ಸಾವಿರ ದಿನ. ಇದಕ್ಕೆ ಸಂಭ್ರಮಾಚರಣೆ ಆಯೋಜಿಸಲಾಗಿದೆ. ಜೊತೆಗೆ ಅಣೆಕಟ್ಟು ಸುರಕ್ಷತೆ ಕುರಿತಾಗಿ ನನ್ನ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಷ್ಟೇಲ್ಲಾ ಕೆಲಸಗಳ ಒತ್ತಡದ ನಡುವೆ ಅಜ್ಜಯ್ಯನ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ಎಂದುಕೊಂಡಿದ್ದೆ‌‌‌. ಆದರೂ ಅಜ್ಜಯ್ಯನ ಆಶೀರ್ವಾದ ಪಡೆದುಕೊಂಡು ಹೋಗೋಣ ಎಂದು ಬಂದಿದ್ದೇನೆ. 233 ವರ್ಷದಿಂದ ಈ ಆಚರಣೆ ನಡೆಯುತ್ತಾ ಬರುತ್ತಿದೆ. ಕಳೆದ 18 ವರ್ಷಗಳ ಪುಣ್ಯ ಸ್ಮರಣೆ ಆಚರಿಸಲಾಗುತ್ತಿದೆ" ಎಂದರು.
"ಬೆಂಗಳೂರಿನ ರಾಜಾಜಿನಗರದಲ್ಲಿ ಎರಡು ಎಕರೆ ಪ್ರದೇಶವಿದ್ದು ಅಲ್ಲಿ ಅಜ್ಜಯ್ಯನ ಹೆಸರಿನಲ್ಲಿ ಗುರುಭವನ ನಿರ್ಮಾಣವಾಗುತ್ತಿದೆ. ಈ ಹಿಂದೆ ನಾನು ಆಶ್ರಮದ ಕಾರ್ಯಾಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೆ. ನನಗೆ ಬೇಕಾದವರು ಈ ಜವಾಬ್ದಾರಿ ನೀಡಿದ್ದರು. ಶ್ರೀಗಳು ಬೆಂಗಳೂರಿಗೆ ಬರಬೇಕು, ಅಲ್ಲಿನ ಜನರಿಗೂ ತಮ್ಮ ಹಿತವಚನಗಳನ್ನು ತಲುಪಿಸಬೇಕು ಎಂದು ಈಗ ಈ ಜವಾಬ್ದಾರಿಗೆ ರಾಜಿನಾಮೆ ನೀಡಿ ಸಂಪೂರ್ಣವಾಗಿ ಜವಾಬ್ದಾರಿಯನ್ನು ಸ್ವಾಮೀಜಿಯವರಿಗೆ ನೀಡಿದ್ದೇನೆ. ಅಜ್ಜಯ್ಯನ ಆಶೀರ್ವಾದದಿಂದ ಕೆಲಸ ಕೂಡ ಪ್ರಾರಂಭವಾಗುತ್ತಿದೆ" ಎಂದು ಹೇಳಿದರು.
"ಹತ್ತು, ನೂರು ರೂಪಾಯಿ ನೀಡುವಿರೋ ಗೊತ್ತಿಲ್ಲ. ಮಠವನ್ನು ಪೋಷಿಸಿದಂತೆ ಗುರುಭವನಕ್ಕೂ ನಿಮ್ಮ ಸೇವೆಯಿರಲಿ. ಬೇಡುವಾಗ ಬಿಕ್ಷುಕನಾಗು,‌ ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ ಎಂದು ಹಿರಿಯರು ‌ಹೇಳಿದ್ದಾರೆ. ಅದೇ ರೀತಿ ನಾನು ನಿಮ್ಮ ಬಳಿ ಉಪಮುಖ್ಯಮಂತ್ರಿಯಾಗಿ ಮನವಿ ಮಾಡುತ್ತಿಲ್ಲ. ಅಜ್ಜನ ಅನುಯಾಯಿಯಾಗಿ, ಭಕ್ತನಾಗಿ ನಿಮ್ಮ ಸೇವೆ ಈ ಮಠಕ್ಕೆ ಅವಶ್ಯವಾಗಿದೆ. ಕೈ ತುಂಬಿ ದಾನ ಮಾಡಿ ಗುರುಭವನ ಕಟ್ಟಲು ಕೈ ಜೋಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು" ಎಂದರು.
"ಸರಿಯಾಗಿ ಕೆಲಸ ಮಾಡಿದರೆ ಒಂದಷ್ಟು ಜನಕ್ಕೆ ತೃಪ್ತಿ ಸಿಗುತ್ತದೆ. ಒಂದಷ್ಟು ಜನಕ್ಕೆ ಪಾಠವಾಗುತ್ತದೆ. ಹಿರಿಯರು ಮನೆ ಹುಷಾರು, ಮಠ ಹುಷಾರು ಎಂದು ಕಿವಿ ಮಾತು ಹೇಳಿದ್ದಾರೆ. ನಮ್ಮ ಮನೆಯನ್ನು ಕಾಪಾಡಿದಂತೆ ಮಠವನ್ನೂ ಕಾಪಾಡಬೇಕು" ಎಂದು ಮನವಿ ಮಾಡಿದರು.
"ಅಜ್ಜನವರು ಲಿಂಗೈಕ್ಯ ಆದ ಸ್ಥಳದಲ್ಲಿಯೂ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಈ ಮಠದ, ಗುರುಗಳ ಪೀಠದ ಶಕ್ತಿ ಬಗ್ಗೆ ನಿಮಗೆಲ್ಲ ಅರಿವಿದೆ. ಈ ಶಕ್ತಿಯಿಂದ ಜನರು ನೆಮ್ಮದಿ ಪಡೆದು ಅಭಿವೃದ್ದಿಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದರು‌‌.
"ಗುರುಭವನದ ಭೂಮಿಪೂಜೆಯನ್ನು ಒಂದಷ್ಟು ಜನ ಸೇರಿ ಮಾಡಿದೆವು. ಕಟ್ಟಡ ಸಂಪೂರ್ಣವಾದ ನಂತರ ದೊಡ್ಡ ಕಾರ್ಯಕ್ರಮ ಮಾಡೋಣ. ಈ ಮಠ ಈ ಹಿಂದೆ ಹೇಗಿತ್ತು ಎಂದು ಎಲ್ಲರೂ ನೋಡಿದ್ದಾರೆ. ಈಗ ಹೇಗೆ ಬದಲಾವಣೆ ಆಗಿದೆ ಎಂಬುದು ತಿಳಿದಿದೆ. ಶಕ್ತಿ ಹಾಗೂ ನಂಬಿಕೆ ಇಲ್ಲದೇ ಇದ್ದರೆ ಈ ರೀತಿ ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ" ಎಂದು ಹೇಳಿದರು.