ತುಮಕೂರಿನ ಕೆಇಬಿ ಇಂಜಿನಿಯರ್ಸ್ ಸಂಘದ ಆವರಣದಲ್ಲಿ ಬರೀ ಕೈಯಲ್ಲಿ ಮಲದ ಗುಂಡಿ ಸ್ವಚ್ಛಗೊಳಿಸಿದ ಕಾರ್ಮಿಕರು.
- ಡಿಸಿಎಂ ತವರಿನಲ್ಲಿ ಅನಿಷ್ಠ ಪದ್ಧತಿ ಜೀವಂತ
- ಕೆಇಬಿ ಸಭಾಂಗಣದಲ್ಲಿ ಆವರಣದಲ್ಲಿ ಘಟನೆ
- ತಲೆಯ ಮೇಲೆ ಮಲಹೊತ್ತ ವೀಡಿಯೋ ವೈರಲ್
ತುಮಕೂರು: ಜಿಲ್ಲಾ ಕೇಂದ್ರ ತುಮಕೂರಿನ ಸರ್ಕಾರದ ಅಧೀನದಲ್ಲಿರುವ ಕೆಇಬಿ ಇಂಜಿನಿಯರ್ಸ್ಗಳ ಸಂಘದ ಆವರಣದ ಮಲದ ಗುಂಡಿಯಿಂದ ಬರಿಕೈಯಲ್ಲಿ ತ್ಯಾಜ್ಯವನ್ನು ಟ್ರಾಕ್ಟರ್ಗೆ ತುಂಬಿಸುತ್ತಿದ್ದ ಅಮಾನವೀಯ ಘಟನೆ ನಡೆದಿದೆ.
ಕೆಪಿಟಿಸಿಎಲ್ ಇಲಾಖೆ ಅಧಿಕಾರಿಗಲೇ ನಾಲ್ವರು ಕಾರ್ಮಿಕರನ್ನು ಕರೆತಂದು ಅವರಿಂದ ಮಲ ಹೊರುಸುವಂತಹ ಕೆಲಸ ನೀಡುವ ಮೂಲಕ ಜಿಲ್ಲೆಯಲ್ಲಿ ಅನಿಷ್ಟ ಪದ್ಧತಿ ಜೀವಂತವಾಗಿದೆ ಎಂಬುದನ್ನು ತೋರಿಸಿದ್ದಾರೆ. ಕಾರ್ಮಿಕರು ತಲೆಯ ಮೇಲೆ ಮಲಹೊರುವ ದೃಶ್ಯವನ್ನು ಕೆಲವರು ಚಿತ್ರಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತುಮಕೂರಿನ ನಂದೀಶ್, ಅರುಣ, ಮಧುಗಿರಿ ಮೂಲದ ಮೂರ್ತಿ ನಾಯ್ಕ, ನವೀನ ಕಾರ್ಮಿಕರನ್ನು ಚರಂಡಿ ಸ್ವಚ್ಚಗೊಳಿಸುವ ನೆಪದಲ್ಲಿ ಕರೆತಂದು ಮಲದ ಗುಂಡಿ ಸ್ವಚ್ಛಗೊಳಿಸಲು ನಿಯೋಜಿಸಿರುವ ಇಂಜಿನಿಯರ್ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪೌರ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.
ಕೆಇಬಿ ಇಂಜಿನಿಯರ್ಸ್ ಸಂಘದಿಂದ ಹೊರಬಂದು ನಿಂತಿದ್ದ ಮಲ ಬಾಚಲು ಕಾರ್ಮಿಕರನ್ನು ಬಳಸಿಕೊಳ್ಳಲಾಗಿದ್ದು ಬರಿಗೈ, ಬರಿಮೈನಲ್ಲಿ ಶೌಚ ಗುಂಡಿಯ ಮಲಹೊತ್ತು ಕಾರ್ಮಿಕರು ಟ್ರಾಕ್ಟರ್ಗೆ ತುಂಬಿದ್ದಾರೆ. ಕಳೆದ ಮೂರು ದಿನಗಳಿಂದಲೂ ಇಂತಹ ಕೆಲಸವನ್ನು ಇದೇ ಕಾರ್ಮಿಕರಿಂದ ಮಾಡಿಸಿದ್ದಾರೆ ಎನ್ನಲಾಗಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕಿದೆ.
ಮಣ್ಣು ತುಂಬಲೆಂದು ಕರೆತಂದರು ಇಲ್ಲಿಗೆ ಬಂದು ನೋಡಿದಾಗ ಶೌಚ ಗುಂಡಿ ಎಂದು ತಿಳಿಯಿತು, ಹೊಟ್ಟೆ ಪಾಡಿಗಾಗಿ ಒಪ್ಪಿಕೊಂಡು ಈ ಕೆಲಸ ಮಾಡುತ್ತಿದ್ದೇವೆ. ಈ ಕೆಲಸ ಮಾಡಬಾರದು ಅಂತಾ ನಮಗೆ ಗೊತ್ತಿರಲಿಲ್ಲ, ಇನ್ಮುಂದೆ ಇಂತಹ ಕೆಲಸಕ್ಕೆ ಕರೆದರೆ ಹೊಗೊದಿಲ್ಲ ಎಂದ ಮುಗ್ಧ ಕಾರ್ಮಿಕರು. ಮಾತನಾಡಿದ್ದು ಡಿಸಿಎಂ ಡಾ.ಜಿ.ಪರಮೇಶ್ವರ ತವರು ತುಮಕೂರು ನಗರದಲ್ಲೆ ಇಂತಹ ಅನಿಷ್ಟ ಪದ್ದತಿ ಬೆಳಕಿಗೆ ಬಂದಿರುವುದು ತಲೆತಗ್ಗಿಸುವಂತಾಗಿದೆ.
ಕರಿಣ ಕ್ರಮಕ್ಕೆ ಪೌರಕಾರ್ಮಿಕರ ಸಂಘ ಆಗ್ರಹ:
ಕಾರ್ಮಿಕರ ಕೈಯಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಶೌಚಗುಂಡಿಯ ಮಲ ತೆಗೆಸಿ ಟ್ರ್ಯಾಕ್ಟರ್ಗೆ ತುಂಬಿಸುವ ಅಮಾನವೀಯ ಕೃತ್ಯವನ್ನು ಜಿಲ್ಲಾ ಪೌರಕಾರ್ಮಿಕರ ಸಂಘದ ಸಿಐಟಿಯು ಸುಬ್ರಹ್ಮಣ್ಯ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಲಹೊರುವ ಪದ್ಧತಿ ನಿಷೇಧಿಸಿದ್ದರೂ ಕಾನೂನು ತಿಳಿದ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಂಸ್ಥೆಗಳ ರ್ನಿಲಕ್ಷ್ಯದಿಂದ ಇಂತಹ ಕ್ರೌರ್ಯ ತುಮಕೂರು ನಗರದಲ್ಲಿ ಜರುಗಿರುವುದು ನಾಚಿಕೆಗೇಡು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲ ತೆರವು ಮಾಡುವ ಪದ್ಧತಿಯಲ್ಲಿ ತೊಡಗಿಸಲ್ಪಟ್ಟ ಕಾರ್ಮಿಕರಿಗೆ ಸಂಪೂರ್ಣ ಪುನರ್ವಸತಿ ಕಲ್ಪಿಸಬೇಕು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಸಂತ್ರಸ್ತರಿಗೆ ಶಾಶ್ವತ ಉದ್ಯೋಗ ಮತ್ತು ಸೂಕ್ತ ಪರಿಹಾರ ಸರ್ಕಾರ ನೀಡಬೇಕು ಎಂದು ಅಗ್ರಹಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ತುಮಕೂರು ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆ ನಡೆಸಿ, ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂತ್ರಸ್ತ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಕೆಂದು ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ , ಕರ್ನಾಟಕ ರಾಜ್ಯ ಮುನಿಸ ಪಲ್ ಕಾರ್ಮಿಕರ ಸಂಘ ಒತ್ತಾಯಿಸಿದೆ.