ಶುಭ ಕಲ್ಯಾಣ್​  
ತುಮಕೂರು

2 ತಿಂಗಳ ಪಡಿತರ ವಿತರಣೆ

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್​ , ಸೆಪ್ಟೆಂಬರ್​ ತಿಂಗಳ ಆಹಾರಧಾನ್ಯ
  • 2 ಬಾರಿ ಬಯೋಮೆಟ್ರಿಕ್​
  • ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸೂಚನೆ
ತುಮಕೂರು:

ಆಗಸ್ಟ್​, ಸೆಪ್ಟೆಂಬರ್​ 2 ತಿಂಗಳ ಪಡಿತರ ಆಹಾರಧಾನ್ಯವನ್ನು ಆಗಸ್ಟ್​ನಲ್ಲಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್​ ತಿಳಿಸಿದರು.

ಪ್ರತಿ ಅಂತ್ಯೋದಯ ಪಡಿತರ ಚೀಟಿ(ಎಎವೈ)ಗೆ ತಿಂಗಳಿಗೆ 21 ಕೆ.ಜಿ.ಯಂತೆ 42 ಕೆ.ಜಿ. ರಾಗಿ ಹಾಗೂ 14 ಕೆ.ಜಿ.ಯಂತೆ 28 ಕೆ.ಜಿ. ಅಕ್ಕಿ ಹಾಗೂ ಆದ್ಯತಾ(ಕೇಂದ್ರ) ಪಡಿತರ ಚೀಟಿ(ಪಿಎಚ್​ಎಚ್​)ಯ ಪ್ರತಿ ಸದಸ್ಯರಿಗೆ ತಿಂಗಳಿಗೆ 3 ಕೆ.ಜಿ.ಯಂತೆ 6 ಕೆ.ಜಿ. ರಾಗಿ ಹಾಗೂ 2 ಕೆ.ಜಿ.ಯಂತೆ 4 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುವುದು. ಆದ್ಯತಾ(ರಾಜ್ಯ) ಪಡಿತರ ಚೀಟಿ(ಪಿಎಚ್​ಎಚ್​.)ಯ ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆ.ಜಿ.ಯಂತೆ ಒಟ್ಟು 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುವುದು.
2 ಕಂತುಗಳಲ್ಲಿ ಪಡಿತರ: ಜಿಲ್ಲೆಯ ಪಡಿತರ ಚೀಟಿದಾರರು ಆಗಸ್ಟ್​ ಹಾಗೂ ಸೆಪ್ಟೆಂಬರ್​ ತಿಂಗಳ ಪಡಿತರವನ್ನು ಈ ತಿಂಗಳಲ್ಲಿಯೇ ಒಟ್ಟಿಗೆ 2 ಕಂತುಗಳಲ್ಲಿ ಪಡೆಯಬೇಕಾಗಿರುವುದರಿಂದ ಕಡ್ಡಾಯವಾಗಿ 2 ಬಾರಿ ಬಯೋಮೆಟ್ರಿಕ್​ ನೀಡಿ ಪಡಿತರವನ್ನು ಪಡೆಯಬೇಕು. ಈ ಕಾರ್ಯಕ್ಕಾಗಿ ಪ್ರತಿ ದಿನ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಆಹಾರ ಇಲಾಖೆಯ ಸರ್ವರ್​ ಲಭ್ಯಗೊಳಿಸಿರುವುದರಿಂದ ಪಡಿತರ ಚೀಟಿದಾರರು ಬಯೋಮೆಟ್ರಿಕ್​ ನೀಡಿ ಆ.31ರೊಳಗಾಗಿ ಪಡಿತರ ಪಡೆಯುವಂತೆ ಶುಭಕಲ್ಯಾಣ್​ ಮಾಹಿತಿ ನೀಡಿದರು.
ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದು. ಕಾಳಸಂತೆಯಲ್ಲಿ ಅನಧಿಕೃತವಾಗಿ ಆಹಾರ ಧಾನ್ಯವನ್ನು ದಾಸ್ತಾನು, ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸಹಾಯವಾಣಿ
ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ ಕೇಂದ್ರ ಸಹಾಯವಾಣಿ ಸಂಖ್ಯೆ: 1967ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಅಥವಾ ಸಮೀಪದ ಆಹಾರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದಾಗಿದೆ.