- ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಕ
- 3ನೇ ಬಾರಿಗೆ ಒಲಿದ ಹುದ್ದೆ
- ಜಯಚಂದ್ರಗೆ ತೀವ್ರ ನಿರಾಸೆ
ತುಮಕೂರು: ಹಿರಿಯ ಮುತ್ಸದ್ಧಿ ಟಿ.ಬಿ.ಜಯಚಂದ್ರರನ್ನು ಮತ್ತೊಮ್ಮೆ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಿಸಲಾಗಿದೆ. ಇದರೊಂದಿಗೆ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಂಪುಟ ಸೇರಬೇಕೆಂಬ ಟಿಬಿಜೆ ಕನಸು ಭಗ್ನಗೊಂಡಿದೆ.
2023ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಜಯಚಂದ್ರ ದೆಹಲಿ ವಿಶೇಷ ಪ್ರತಿನಿಧಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಡಿಕೆಶಿ ಸಂಪುಟ ಸೇರಲು ಇನ್ನಿಲ್ಲದ ಕಸರತ್ತು ನಡೆಸಿದ್ದ ಜಯಚಂದ್ರ ವರಿಷ್ಠರ ಮುಂದೆ ತಮ್ಮ ರಾಜಕೀಯ ಜೀವನದಲ್ಲಿನ ಕೊನೆಯ ಅವಕಾಶಕ್ಕಾಗಿ ದುಂಬಾಲುಬಿದ್ದಿದ್ದರು. ಇದ್ಯಾವುದಕ್ಕು ಹೈಕಮಾಂಡ್ ಮಣೆಹಾಕಿಲ್ಲ. ಹಿರಿತನ ಆಧರಿಸಿ ಸಂಪುಟದರ್ಜೆ ಸ್ಥಾನಮಾನ ನೀಡಿ ವಿಶೇಷ ಪ್ರತಿನಿಧಿ ಸ್ಥಾನವನ್ನು ನೀಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಹಾಗಾಗಿ, ಮೂರನೇ ಬಾರಿಗೆ ದೆಹಲಿ ವಿಶೇಷ ಪ್ರತಿನಿಧಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.
ರಾಜ್ಯ ಸರ್ಕಾರದಲ್ಲಿ ಮತ್ರಿಯಾಗಬೇಕೆಂಬ ಜಯಚಂದ್ರರ ಹಂಬಲ ಅಂತ್ಯಗೊಂಡಂತಾಗಿದೆ. ಅವರ ಅಭಿಮಾನಿಗಳು, ಕುಂಚಿಟಿಗ ಸಮಾಜದವರಲ್ಲಿ ತೀವ್ರ ನಿರಾಸೆ ತಂದಿದೆ. ರಾಜಕೀಯ ಜೀವನದ ಕೊನೆಯ ಚುನಾವಣೆ ಎಂದು ಘೋಷಿಸಿದ್ದರು. ತುಮಕೂರು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿರುವ ಕುಂಚಿಟಿಗ ಸಮುದಾಯದ ಪ್ರಭಾವಿ ನಾಯಕರೆನಿಸಿದ್ದ ಜಯಚಂದ್ರಗೆ ಹಿರಿಯೂರು ಬೈಎಲೆಕ್ಷನ್ ಚುನಾವಣೆ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನ ನೀಡುವಂತೆ ಕೂಗು ಎದ್ದಿತ್ತು.
ಮೂರನೇ ಸಲ ಜಯಚಂದ್ರ ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಕವಾಗಿದ್ದು ಏಳನೇ ಬಾರಿ ಶಾಸನಸಭೆಯನ್ನು ಜಯಣ್ಣ ಪ್ರತಿನಿಧಿಸುತ್ತಿದ್ದು ಸಂಪುಟ ದರ್ಜೆ ಸಚಿವರಿಗೆ ಅನ್ವಯಿಸುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ.
ಈ ಹಿಂದೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕೃಷಿ ಸಚಿವ ಸ್ಥಾನ ಕಳೆದುಕೊಂಡಿದ್ದ ಟಿಬಿಜೆ ಅವರನ್ನು ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಿಸಲಾಗಿತ್ತು. ನಂತರ 2023ರಲ್ಲಿ ಪರಮೇಶ್ವರ್, ಕೆ.ಎನ್.ರಾಜಣ್ಣಗೆ ಸಚಿವ ಸ್ಥಾನ ನೀಡಿದ್ದರಿಂದ ಜಯಚಂದ್ರ ಸಂಪುಟ ಸೇರುವ ಅವಕಾಶ ಕೈತಪ್ಪಿತ್ತು. ಆಗ ದೇಹಲಿ ವಿಶೇಷ ಪ್ರತಿನಿಧಿಸ್ಥಾನ ನೀಡಿ ಸಮಾಧನಗೊಳಿಸಲಾಗಿತ್ತು.