ಮೆಟ್ಟುಪಾಳ್ಯಂ ಕ್ಷೇತ್ರದಿಂದ ಟಿವಿಕೆ ಪಕ್ಷದಿಂದ ಆಯ್ಕೆಯಾದ ತುರುವೇಕೆರೆ ಮೂಲದ ಸುನಿಲ್ ಆನಂದ್.
- ತಮಿಳುನಾಡು ವಿಧಾನಸಭೆ ಚುನಾವಣೆ
- ಮೆಟ್ಟುಪಾಳ್ಯಂ ಕ್ಷೇತ್ರದಿಂದ ಆಯ್ಕೆ
- ತುರುವೇಕೆರೆ ಹೊಡೆಕೆಘಟ್ಟದ ಸುನಿಲ್ ಆನಂದ್
ತುರುವೇಕೆರೆ: ದಳಪತಿ ವಿಜಯ್ ಸಾರಥ್ಯದ ಟಿವಿಕೆ ಪಕ್ಷದಿಂದ ಕನ್ನಡಕುವರನೊಬ್ಬ ತಮಿಳುನಾಡು ವಿಧಾನಸಭೆ ಪ್ರವೇಶಿಸಿದ್ದಾರೆ! ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹೊಡೆಕೆಘಟ್ಟದ ಕನ್ನಡಿಗ ಎನ್.ಸುನಿಲ್ ಆನಂದ್ಗೆ ಈ ಅದೃಷ್ಟ ಒಲಿದುಬಂದಿದೆ.
ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಸುನಿಲ್ ಆನಂದ್ ಮೊದಲಪ್ರಯತ್ನದಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದು ತಮಿಳು ನೆಲದಲ್ಲಿ ರಾಜಕೀಯ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಕಂಡಿದ್ದಾರೆ.
ಸುನಿಲ್ ಆನಂದ್ ಮೂಲತಃ ತಾಲೂಕಿನ ಹೊಡೆಕೆಘಟ್ಟದವರು. ಇದೇ ಗ್ರಾಮದ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡರ ಸಂಬಂಧಿಕರಾಗಿದ್ದು ಹತ್ತಾರು ವರ್ಷಗಳ ಹಿಂದೆಯೇ ಗ್ರಾಮತೊರೆದ ಸುನಿಲ್ ಆನಂದ್ರ ತಾತ ಹೆಚ್.ಎನ್.ಮುದ್ದೇಗೌಡ ಜೀವನೋಪಯಾಕ್ಕಾಗಿ ತಮಿಳುನಾಡಿನ ಮೆಟ್ಟುಪಾಳ್ಯಂ ದಾರಿ ಹಿಡಿದಿದ್ದರು. ಮುದ್ದೇಗೌಡ ಅವರ ಸಹೋದರ ನಂಜೇಗೌಡ ಸಹ ಅಲ್ಲಿಯೇ ವ್ಯಾಪಾರ ಆರಂಭಿಸಿ ಬದುಕು ಕಟ್ಟಿಕೊಳ್ಳುವುದರ ಜತೆಗೆ ತಾವು ದುಡಿದ ಪಾಲಿನಲ್ಲಿ ಒಂದಿಷ್ಟು ಸಮಾಜಸೇವೆಗೆ ಸಮರ್ಪಿಸಿದರು. ಈ ದಾನಧರ್ಮವು ಕುಟುಂಬವನ್ನು ಸ್ಥಳಿಯವಾಗಿ ರಾಜಕೀಯ ಮುಖಂಡರಾಗಿ ಬೆಳೆಯಲು ಕಾರಣವಾಯಿತು.
ಮುದ್ದೇಗೌಡರ ಮೊಮ್ಮಗ ಸುನಿಲ್ ಆನಂದ್ ಈಗ ರಾಜಕೀಯ ನೆಲೆ ಕಂಡುಕೊಳ್ಳಲು ಜನರೊಂದಿಗಿನ ಒಡನಾಟ ಕೈಹಿಡಿಯಿತು.
ಲೇಟ್.ನಾಗರಾಜ್ ಪುತ್ರ ಸುನಿಲ್ರನ್ನು ಗುರುತಿಸಿ ಟಿವಿಕೆ ಸಾರಥಿ ವಿಜಯ್ ಈ ಬಾರಿ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿದ್ದು ಅವರಿಗೆ ಅದೃಷ್ಟ ಕುಲಾಯಿಸುವಂತೆ ಮಾಡಿದೆ. ಮೊದಲ ಚುನಾವಣೆಯಲ್ಲೇ ಅತಿರಥ, ಮಹಾರಥರನ್ನು ಮಣಿಸಿ ತಮಿಳುನಾಡು ವಿಧಾನಸಭೆ ಪ್ರವೇಶಿಸುತ್ತಿದ್ದಾರೆ ಈ ಕನ್ನಡ ಕುವರ.
ಸುನಿಲ್ ತಾಯಿಯ ತಂದೆ ಲೇ.ಲಿಂಗಪ್ಪ ಮೈಸೂರಿನಲ್ಲಿ ಮೇಯರ್ ಆಗಿದ್ದರು. ಇಂದಿಗೂ ಮೈಸೂರಲ್ಲಿ ಅವರ ಹೆಸರಿನ ವೃತ್ತ ಇದೆ.