ತಿಪಟೂರಿನಲ್ಲಿ "ಜನಸ್ಪಂದನ' ಟ್ರಸ್ಟ್ ವತಿಯಿಂದ 20 ವಿದ್ಯಾರ್ಥಿಗಳಿಗೆ "ಸಂವಿಧಾನ ಚಾಂಪಿಯನ್' ಬಿರುದು ಜತೆಗೆ ತಲಾ ನಗದು ಹಾಗೂ ಬೆಳ್ಳಿ ಪದಕವನ್ನು ನೀಡಲಾಯಿತು. ಸಿ.ಬಿ.ಶಶಿಧರ್, ಾಝಿಯಾ, ಸೋಮಶೇಖರ್, ದಿಲಾವರ್ ರಾಮದುರ್ಗ, ವೇಣು ಹೆಣ್ಣೂರು, ಶ್ರೀಕಾಂತ್ ಕೆಳಹಟ್ಟಿ ಮತ್ತಿತರರು ಇದ್ದರು.
- ಜನಸ್ಪಂದನ ಟ್ರಸ್ಟ್ ವತಿಯಿಂದ ಕಾರ್ಯಾಗಾರ
- ಜಿಲ್ಲೆಯ 50 ಕಾಲೇಜುಗಳ 100 ಶಿಬಿರಾರ್ಥಿಗಳು
- ಟ್ರಸ್ಟ್ ಜತೆಗೆ ತುಮಕೂರು ವಿವಿ ಸಹಯೋಗ
ತಿಪಟೂರು: ನಗರದ ಜನಸ್ಪಂದನ ಟ್ರಸ್ಟ್ ಹಾಗೂ ತುಮಕೂರು ವಿವಿ ಸಹಯೋಗದಲ್ಲಿ ಜಿಲ್ಲೆಯ 50 ಕಾಲೇಜುಗಳ 100 ವಿದ್ಯಾರ್ಥಿಗಳಿಗಾಗಿ ಸಂವಿಧಾನ ಅರಿವು ಬಗ್ಗೆ ಆಯೋಜಿಸಿದ್ದ ಎರಡು ದಿನ ಕಾರ್ಯಾಗಾರದಲ್ಲಿ ಭಾಗವಹಿಸಿ ಉತ್ತಮ ಶಿಬಿರಾರ್ಥಿ ಎನ್ನಿಸಿಕೊಳ್ಳುವ 20 ವಿದ್ಯಾರ್ಥಿಗಳಿಗೆ "ಸಂವಿಧಾನ ಚಾಂಪಿಯನ್' ಬಿರುದು ಜತೆಗೆ ತಲಾ ನಗದು ಹಾಗೂ ಬೆಳ್ಳಿ ಪದಕವನ್ನು "ಜನಸ್ಪಂದನ' ಟ್ರಸ್ಟ್ ವತಿಯಿಂದ ನೀಡಲಾಯಿತು.
ನಗರದ ಜನಸ್ಪಂದನ ಟ್ರಸ್ಟ್ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಪದಕ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್, ಸಂವಿಧಾನದ ಮಹತ್ವ ಮತ್ತು ಇದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಮ್ಮ ಟ್ರಸ್ಟ್ ವತಿಯಿಂದ ಸಂಪನ್ಮೂಲ ವ್ಯಕ್ತಿಗಳ ಜೊತೆಗೂಡಿ ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವದ ಬಗ್ಗೆ ಆಯೋಜಿಸಿದ್ದ 2 ದಿನಗಳ ಶಿಬಿರ ಯಶಸ್ವಿಯಾಗಿದೆ ಎಂದರು.
ಸಮಾಜಕ್ಕೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು 20 ಚಾಂಪಿಯನ್ಗಳನ್ನು ನಾವು ಗುರುತಿಸಿದ್ದೇವೆ, ಭವಿಷ್ಯದಲ್ಲಿ ಇವರ ಸಂಖ್ಯೆ 200 ನಂತರ 2000 ಹೀಗೆ... ಬೆಳೆಯುವ ಮೂಲಕ ಸಮಾಜದಲ್ಲಿ ಸಂವಿಧಾನದ ಬಗ್ಗೆ ಮತ್ತಷ್ಟು ಅರಿವು ಮೂಡಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಉತ್ತಮ ಮತ್ತು ಅತ್ಯುತ್ತಮ ಎಂಬ ಎರಡು ವಿಭಾಗದ ಮೂಲಕ ಅತ್ಯುತ್ತಮ ವಿಭಾಗದಲ್ಲಿ ಆಯ್ಕೆಯಾದ 4 ವಿದ್ಯಾರ್ಥಿಗಳ ಪೈಕಿ ತಲಾ ಇಬ್ಬರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಬೆಳ್ಳಿ ಪದಕಹೊಂದಿದ ಪ್ರಶಂಸನಾ ಪತ್ರದ ಜೊತೆಗೆ ತಲಾ 5 ಸಾವಿರ ನಗದು, ಮತ್ತು ಉತ್ತಮ ವಿಭಾಗದಲ್ಲಿ ಆಯ್ಕೆಯಾದ 4 ಮಂದಿ ಪೈಕಿ ತಲಾ ಇಬ್ಬರಿಗೆ ಬೆಳ್ಳಿಪದಕದ ಪ್ರಶಂಸನಾ ಪತ್ರದ ಜೊತೆಗೆ ಎರಡೂವರೆ ಸಾವಿರ ನಗದು, ಮತ್ತು ಇತರೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಡೆಸಲಾದ ಸಂವಾದ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯ ನಿರ್ವಹಣೆ ತೋರಿದ 6 ವಿದ್ಯಾರ್ಥಿಗಳಿಗೆ ಬೆಳ್ಳಿಪದಕದ ಪ್ರಶಂಸನಾ ಪತ್ರ ನೀಡುವ ಮೂಲಕ ಅವರ ಸಾಧನೆ ಪ್ರೋತ್ಸಾಹಿಸುವ ಪ್ರಯತ್ನ ನಡೆದಿದೆ ಎಂದರು.
ನಮ್ಮ ದೇಶದ ಸಂವಿಧಾನದ ತಳಹದಿ ಗ್ರಹಿಸಲು ಪ್ರಯತ್ನಿಸಿದರೆ ಸಮಾನತೆಯ ಸತ್ವ ಗಮನಕ್ಕೆ ಬರುತ್ತದೆ. ಇದಕ್ಕೆ ನೆಲದ ಆಧ್ಯಾತ್ಮ, ಫಿಲಾಸಫಿ, ಅನುಭಾವ ಜಗತ್ತಿನ ಕೊಡುಗೆ ದಟ್ಟವಾಗಿ ಕಾಣಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಗ್ರಹಿಸುವುದಾದರೆ ಬುದ್ಧ ಬಿತ್ತಿದ ಸಮತ್ವ ಬೀಜಕ್ಕೆ, ಬಸವಣ್ಣ ಅರಿವಿನ ನೀರೆರೆದು ಬೆಳಸಿ ಹೆಮ್ಮರವಾಗಿಸಿದರು. ಅದರ ಸಲು ತೆಗೆಯಲು ಸೂತ್ರ ನೀಡಿದ್ದು ಡಾ.ಬಿ.ಆರ್.ಅಂಬೇಡ್ಕರ್. ಅದರಿಂದಲೇ ಕುವೆಂಪು ಅವರ ತತ್ವದ ಒಟ್ಟು ಸಾರವೇ ನಮ್ಮ ಸಂವಿಧಾನವಾಗಿದ್ದು ಇದನ್ನು ಇಂದಿನ ಯುವ ಪೀಳಿಗೆಯ ಅರಿವಿಗೆ ತರಲು ಕಾರ್ಯಾಗಾರ ನಡೆಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲೆ ೌಜಿಯಾಖಾನ್ ಮಾತನಾಡಿ, ದೇಶದಲ್ಲಿ ಸಂವಿಧಾನ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗುವಂತೆ ಮಾಡಿದೆ, ಸಂವಿಧಾನ ಎಲ್ಲಾ ವರ್ಗ, ಸಮುದಾಯಗಳಿಗಿಂತಲೂ ಮಹಿಳೆಯರಿಗೆ ಹೆಚ್ಚು ಅನುಕೂಲ ಮಾಡಿದ್ದು ಎಲ್ಲಾ ಮಹಿಳೆಯರು ಸಂವಿಧಾನದ ಬಗ್ಗೆ ಅರಿವು ಬೆಳೆಸಿಕೊಂಡಿರಬೇಕು ಎಂದರು.
ಚೌಡೇಶ್ವರಿ ಪತ್ತಿನ ಸಹಕಾರ ಸಂದ ಸಂಸ್ಥಾಪಕ ಸೋಮಶೇಖರ್ ಮಾತನಾಡಿದರು. ಸಮಾರಂಭದಲ್ಲಿ ಪತ್ರಕರ್ತ ದಿಲಾವರ್ ರಾಮದುರ್ಗ, ಶ್ರೀಕಾಂತ್ ಕೆಳಹಟ್ಟಿ, ದಲಿತ ಸಂಘಟನೆಯ ಮುಖಂಡರಾದ ಕುಪ್ಪಾಳು ರಂಗಸ್ವಾಮಿ, ಬಸವರಾಜು ಮತ್ತಿತತರರು ಇದ್ದರು.