ಮೃತ ಬಾಲಕ ಧನುಷ್​ 
ತುಮಕೂರು

ಪಿಲ್ಲರ್​ ಕಂಬ ಬಿದ್ದು ವಿದ್ಯಾರ್ಥಿ ಸಾವು

ತುಮಕೂರು ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಪಿಲ್ಲರ್​ ಕಂಬ ಬಿದ್ದು ವಿದ್ಯಾರ್ಥಿ ಸಾವು

ಹಂದನಕೆರೆ:

ಬೆಳಗಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಡೇರಿ ಕಟ್ಟಡದ ಪಿಲ್ಲರ್​ ಕುಸಿದು 4ನೇ ತರಗತಿ ವಿದ್ಯಾರ್ಥಿ ಧನುಷ್​ (10)ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

ಈತ ಗ್ರಾಪಂ ಮಾಜಿ ಸದಸ್ಯ ಆನಂದಮೂರ್ತಿ ಅವರ ಪುತ್ರನಾಗಿದ್ದು, ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ಶಾಲೆಗೆ ಬಂದಿದ್ದ. ಶಾಲೆಯ ಪಕ್ಕದಲ್ಲೇ ಇದ್ದ ಹಾಲಿನ ಡೇರಿ ಬಳಿ ಆಟವಾಡುತ್ತಿದ್ದಾಗ ಕಂಬ ಉರುಳಿ ಬಿದ್ದು, ದುರಂತ ಸಂಭವಿಸಿದೆ.
ಧನುಷ್​ ಜತೆ ಆಟವಾಡುತ್ತಿದ್ದ ಆತನ ಸ್ನೇಹಿತರು ಕ್ಷಣಾರ್ಧದಲ್ಲಿ ಅಲ್ಲಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಡೇರಿಯಲ್ಲಿ ಇದ್ದ 3 ಕಂಬಗಳ ಜತೆಗೆ ವಾಸ್ತು ಕಾರಣಕ್ಕೆ ನಿರ್ಮಿಸಿದ್ದ ಈ ಕಂಬವನ್ನು ಕಬ್ಬಿಣವಿಲ್ಲದೆ ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಏಕಾಏಕಿ ಉರುಳಿ ಬೀಳಲು ಕಾರಣ ಎನ್ನಲಾಗಿದೆ.
ಮತಿಟ್ಟದಲ್ಲಿ ಸರ್ಕಾರಿ ಶಾಲೆಯಿದ್ದರೂ ಗುಣಮಟ್ಟದ ಶಿಕ್ಷಣವಿದೆ ಎಂಬ ಕಾರಣಕ್ಕೆ ಧನುಷ್​ ಸೇರಿ ಮತಿಟ್ಟದ ಮಕ್ಕಳು ಬೆಳಗಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರವೇಶ ಪಡೆದು ಪ್ರತಿದಿನ ಆಟೋರಿಾದಲ್ಲಿ ಶಾಲೆಗೆ ಬರಲು ವ್ಯವಸ್ಥೆ ಮಾಡಿಕೊಂಡಿದ್ದರು. ವಿದ್ಯಾರ್ಥಿಯ ಸಾವಿನ ಸುದ್ದಿ ಗ್ರಾಮದಲ್ಲಿ ಹರಡಿದ ಕೂಡಲೇ ಮತಿಟ್ಟ, ಬೆಳಗಿಹಳ್ಳಿಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು.
ಧನುಷ್​ ಸಹೋದರ ಇದೇ ಶಾಲೆಯಲ್ಲಿ ಓದಿದ್ದು, ಈಗ ಕುಣಿಗಲ್​ ತಾಲೂಕು ಹುಲಿಯೂರುದುರ್ಗ ಮುರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಗೆ ಹೋದ ಕೆಲಹೊತ್ತಿನಲ್ಲಿಯೇ ಮಗ ಮೃತಪಟ್ಟ ಸುದ್ದಿ ಕೇಳಿದ ತಂದೆ, ತಾಯಿ ಆಘಾತಕ್ಕೊಳಗಾಗಿದ್ದಾರೆ.

ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಹಂದನಕೆರೆ ಪೊಲೀಸ್​ ಸಬ್​ಇನ್​ಸ್ಪೆಕ್ಟರ್​ ಚಿತ್ತರಂಜನ್​, ಬಿಇಒ ಕಾಂತರಾಜು ಸ್ಥಳ ಪರಿಶೀಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಾಲೆಯ ಪಕ್ಕದಲ್ಲೇ ಇಷ್ಟೊಂದು ಅಪಾಯಕಾರಿ ಸ್ಥಿತಿಯಲ್ಲಿ ಕಟ್ಟಡವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದೆ ದುರಂತಕ್ಕೆ ಕಾರಣ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದರು. ಅಲ್ಲದೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿದರು.

ಮಾವಿನ ತೋರಣ ಎಳೆದಾಗ ಬಿದ್ದ ಕಂಬ:

ಡೇರಿ ಉನ್ನತಿಗೆ ನಾಲ್ಕು ಕಂಬಗಳಿರಬೇಕು ಎಂದು ಕಬ್ಬಿಣದ ಸಲಾಕೆಯಿಲ್ಲದೆ, ಇಟ್ಟಿಗೆಯಿಂದ ಕಟ್ಟಿ ಸಿಮೆಂಟ್​ ಪ್ಲಾಸ್ಟಿಂಗ್​ ಮಾಡಿದ್ದ ಕಂಬ ಸಾಕಷ್ಟು ದಿನಗಳಿಂದ ಬೀಳುವ ಸ್ಥಿತಿಯಲ್ಲಿಯೇ ಇತ್ತು ಎನ್ನಲಾಗಿದೆ. ಅಪಾಯದ ಮುನ್ಸೂಚನೆ ಅರಿತಿದ್ದ ಸದಸ್ಯರು ಇತ್ತೀಚೆಗೆ ನಡೆದ ಡೇರಿ ಸಾಮಾನ್ಯಸಭೆಯಲ್ಲಿಯೂ ಕಂಬ ಬೀಳಿಸಲು ವಿಲ ಯತ್ನ ಕೂಡ ನಡೆಸಿದ್ದರು. ಅಂದು ಎಷ್ಟೇ ಜನರು ಅಲುಗಾಡಿಸಿದರೂ ಬೀಳದ ಕಂಬವು, ಕಂಬದ ತುದಿಯಲ್ಲಿ ಕಟ್ಟಿದ್ದ ಮಾವಿನ ತೋರಣದ ಹಗ್ಗ ಕೆಳಗೆ ಬಿದ್ದಿದ್ದನ್ನು ಮಕ್ಕಳೆಲ್ಲರೂ ಸೇರಿ ಎಳೆದಾಗ ಧನುಷ್​ ತಲೆಯ ಮೇಲೆಯೇ ಉರುಳಿಬಿದ್ದಿದೆ. ಮತಿಟ್ಟ ಕ್ಲಸ್ಟರ್​ನಲ್ಲಿ ಇದು ಎರಡನೇ ದುರಂತವಾಗಿದ್ದು, ಕಳೆದ ಜೂ.5ರಂದು ಸೈಯದ್​ಸಾಬ್​ ಪಾಳ್ಯದ ಸರ್ಕಾರಿ ಶಾಲೆ ವಿದ್ಯಾರ್ಥಿ ಕೂಡ ಕಟ್ಟೆಯಲ್ಲಿ ನೀರಿಗೆ ಬಿದ್ದು ಕೊನೆಯುಸಿರೆಳೆದಿದ್ದನು.

ಬೆಳಗಿಹಳ್ಳಿ ಶಾಲಾ ಆವರಣದಲ್ಲಿ ನಡೆದಿರುವ ಟನೆ ತಿಳಿದು ಆಘಾತವಾಗಿದೆ. ಎಳೆಯ ಪ್ರಾಯದ ಕಂದಮ್ಮ ಹೀಗೆ ದುರಂತ ಸಾವಿಗೀಡಾದುದ್ದು ದುರದೃಷ್ಟಕರ. ಮಗುವನ್ನು ಕಳೆದುಕೊಂಡ ಹೆತ್ತವರ ನೋವು , ಸಂಕಟವನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ನೊಂದ ಜೀವಗಳೊಂದಿಗೆ ನಾನಿದ್ದೇನೆ. ಮೃತನ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಬಾಲಕನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ.
- ಡಾ.ಜಿ.ಪರಮೇಶ್ವರ, ಡಿಸಿಎಂ
ಘಟನೆಗೆ ಸಂಬಂಧಪಟ್ಟಂತೆ ಸೂಕ್ತ ತನಿಖೆ ನಡೆಸಿ ಮುಂದಿನ ಎರಡು ದಿನದಲ್ಲಿ ವರದಿ ನೀಡುವಂತೆ ತಹಸೀಲ್ದಾರ್​ಗೆ ಸೂಚನೆ ನೀಡಿದ್ದೇನೆ. ತಾಂತ್ರಿಕ ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಶಾಲೆ, ಅಂಗನವಾಡಿ ಆವರಣದಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದರೂ ಇಂತಹ ದುರಂತ ಪದೇಪದೆ ವರದಿಯಾಗುವುದು ಒಳ್ಳೆಯದಲ್ಲ.
- ಸತ್ಯನಾರಾಯಣಶೆಟ್ಟಿ, ಸದಸ್ಯ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗ
=================
ಕಟ್ಟಡ ನಿರ್ಮಿಸಿ ಏಳೆಂಟು ವರ್ಷದ ನಂತರ ವಾಸ್ತು ಪ್ರಕಾರ 4 ಕಂಬಗಳಿರಬೇಕು ಎಂದು ಯಾರೋ ನೀಡಿದ ಸಲಹೆಯಂತೆ ಕಬ್ಬಿಣ ಉಪಯೋಗಿಸದೆ ಇಟ್ಟಿಗೆಯಿಂದ ಅವೈಜ್ಞಾನಿಕವಾಗಿ ಮತ್ತೊಂದು ಕಂಬ ನಿರ್ಮಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಶುಕ್ರವಾರ ನಡೆಯುವ ತುಮುಲ್​ ಆಡಳಿತ ಮಂಡಳಿ ಸಭೆಯಲ್ಲಿ ಟನೆಯ ಬಗ್ಗೆ ಚರ್ಚಿಸಿ ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲಾಗುವುದು.
- ಎ.ಆರ್​.ತಿಮ್ಮಾನಾಯಕ್​, ವ್ಯವಸ್ಥಾಪಕ ನಿರ್ದೇಶಕ, ತುಮುಲ್​
18 ಹುಳಿಯಾರು 3
18 ಹುಳಿಯಾರು 4
ಮಾಜಿ ಸಚಿವ ಮಾಧುಸ್ವಾಮಿ ಭೇಟಿ