Stay away from drug addiction.
ಬುಕ್ಕಾಪಟ್ಟಣ: ಮಾದಕ ವ್ಯಸನ ಎಂಬುದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ಬೇರು ಸಮೇತ ಕಿತ್ತು ಎಸೆಯುವ ಕೆಲಸ ಮಾಡಬೇಕಿದೆ ಎಂದು ಶಿರಾ ನಗರ ಠಾಣೆ ಪಿಎಸ್ಐ ರೇಣುಕಾ ಯಾದವ್ ತಿಳಿಸಿದರು.
ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಹೂಯಿಲ್ ದೊರೆ ಶ್ರೀ ಶಾರದಾ ಇಂಟರ್ ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ನಶೆಮುಕ್ತ ಶಿರಾ ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನ ಬಹಳಷ್ಟು ಹೆಚ್ಚಾಗಿದ್ದು, ಅದರಲ್ಲಿಯೂ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಪ್ರೌಢಶಾಲೆ ಮುಗಿಸಿ ಕಾಲೇಜು ಹಂತಕ್ಕೆ ಬರುವ ಯುವಕರು ಹಾಗೂ ಯುವತಿಯರು ದುಶ್ಚಟಗಳ ದಾಸರಾಗುತ್ತಾರೆ. ಬೀಡಿ, ಸಿಗರೇಟು ಮದ್ಯಪಾನ, ಧೂಮಪಾನ, ಗಾಂಜಾ ಇನ್ನಿತರ ಮಾದಕ ವ್ಯಸನಗಳನ್ನು ತೆಗೆದುಕೊಂಡು ಅಮಲಿನಲ್ಲಿ ತೇಲಾಡುತ್ತಾರೆ. ಇಂತಹ ವ್ಯಸನಿಗಳಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ನಶೆಯಲ್ಲಿ ತಮ್ಮ ಮೇಲೆ ತಮಗೆ ಹಿಡಿತವಿಲ್ಲದೆ ಕೊಲೆ, ಸುಲಿಗೆ, ಅತ್ಯಾಚಾರದ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಅವುಗಳಿಂದ ದೂರವಿದ್ದು, ಅಂತಹ ಕೃತ್ಯಗಳಲ್ಲಿ ಭಾಗವಹಿಸುವಿಕೆ ಅರಿವಿಗೆ ಬಂದರೆ ಅಂತಹವರ ಮಾಹಿತಿಯನ್ನು ಪೊಲೀಸರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ ಹೆಚ್ಚಾಗುತ್ತಿದ್ದು, ಇಂತಹ ಟನೆಗಳು ಕಂಡು ಬಂದಲ್ಲಿ ಕಾನೂನು ರೀತಿಯಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗುವುದು ಹಾಗೂ ಕೃತ್ಯಕ್ಕೆ ಸಹಕರಿಸಿದ ಎಲ್ಲರೂ ಸಹ ಕಾನೂನು ರೀತಿಯ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಜಿ.ರಂಗನಾಥ್ ಮಾತನಾಡಿ, ಮಾದಕ ವ್ಯಸನ ಸಮಾಜಕ್ಕೆ ಅಂಟಿದ ಶಾಪವಾಗಿದ್ದು, ಮಕ್ಕಳನ್ನು ಹೆತ್ತು ಹೊತ್ತು ಪಾಲನೆ ಮಾಡಿದ ಪಾಲಕರು ತಮ್ಮ ಮಕ್ಕಳನ್ನು ಕಣ್ಣ ಮುಂದೆ ಈ ರೀತಿ ದುಶ್ಚಟಗಳಿಗೆ ದಾಸರಾಗಿ ನಿಲ್ಲುವುದನ್ನು ನೋಡಲು ಸಾಧ್ಯವೇ? ಎಲ್ಲಮಕ್ಕಳು ಸಹ ತಮ್ಮ ತಂದೆ&ತಾಯಿಗಳ ಹೆಸರು ಉಳಿಸುವಂತಹ ಕೆಲಸ ಮಾಡಬೇಕು ಎಂದರು.
ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಬಾಲಕೃಷ್ಣ, ಪ್ರೋಬೇಷನರಿ ಪಿಎಸ್ಐ ಅಮಿತಾ, ಶಾಲೆಯ ಪ್ರಾಂಶುಪಾಲ ನವೀನ್ ಕುಮಾರ್, ಬುಕ್ಕಾಪಟ್ಟಣ ಪೊಲೀಸ್ ಉಪಠಾಣೆ ಹೆಡ್ ಕಾನ್ಸ್ಟೇಬಲ್ ರಂಗನಾಥ್ ಹಾಗೂ ಸಿಬ್ಬಂದಿ ಇದ್ದರು.