ತುಮಕೂರು ಜಿಪಂ ಸಭಾಂಗಣದಲ್ಲಿ ಶಿರಾ, ಪಾವಗಡ ತಾಲೂಕಿಗೆ ಸಂಬಂಧಿಸಿದಂತೆ ದಿಶಾ ಸಮಿತಿ ಸಭೆಯನ್ನು ಗೋವಿಂದ ಎಂ.ಕಾರಜೋಳ ನಡೆಸಿದರು. 
ತುಮಕೂರು

ದ್ವಿಭಾಷ ಶಿಕ್ಷಣ ನೀತಿಯಿಂದ ಬಡಮಕ್ಕಳಿಗೆ ಅನ್ಯಾಯ!

ಪ್ರಮುಖ ಮುಖ್ಯಾಂಶಗಳು

  • ಸಂಸದ ಗೋವಿಂದ ಕಾರಜೋಳ ಅಭಿಮತ
  • ಕೇಂದ್ರದ ನೀತಿ ಎಂಬ ಮಾತ್ರಕ್ಕೆ ವಿರೋಧ ಸಲ್ಲ
  • ತ್ರಿಭಾಷೆ ಸೂತ್ರವಿದ್ದರಷ್ಟೇ ಜಾಗತಿಕ ಅವಕಾಶ
ತುಮಕೂರು: ಕೇಂದ್ರದ ತ್ರಿಭಾಷಾ ನೀತಿ ಶಿಕ್ಷಣ ನೀತಿ ವಿರೋಧಿಸುತ್ತಿರುವ ರಾಜ್ಯ ಸರ್ಕಾರ ದ್ವಿಭಾಷಾ ಸೂತ್ರ ಜಾರಿಗೊಳಿಸುವುದರಿಂದ ಬಡವರ ಮಕ್ಕಳು ಅವಕಾಶ ವಂಚಿತರಾಗಲಿದ್ದಾರೆ, ತ್ರಿಭಾಷಾ ನೀತಿಯಿಂದ ಪ್ರಪಂಚೆದೆಲ್ಲೆಡೆ ಅವಕಾಶ ಪಡೆಯಲು ಸಾಧ್ಯವಾಗಲಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ಪ್ರತಿಪಾದಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಶಿರಾ ಹಾಗೂ ಪಾವಗಡ ತಾಲೂಕುಗಳ "ಕೇಂದ್ರ ಪುರಸತ ಯೋಜನೆಗಳ ಪ್ರಗತಿ ಪರಿಶೀಲನಾ(ದಿಶಾ) ಸಭೆ'ಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೇರೆ ಪಕ್ಷದ ಸರ್ಕಾರವಿದ್ದ ಮಾತ್ರಕ್ಕೆ ಕೇಂದ್ರದ ನೀತಿ ವಿರೋಧಿಸುವುದು ಸರಿಯಲ್ಲ, ಕೇಂದ್ರದ ರೂಪಾಯಿ ಎಂದು ವಿಧಾನಸೌಧದಲ್ಲಿ ಬೇರೆ ಕರೆನ್ಸಿ ಪ್ರಿಂಟ್​ ಮಾಡಲು ಸಾಧ್ಯವೇ ಎಂದು ರಾಜ್ಯ ಸರ್ಕಾರದ ನಡೆ ಟೀಕಿಸಿದರು.
ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರಿಗೆ ಹೊಟ್ಟೆಪಾಡಿಗೆ, ಅವರ ಕುಟುಂಬ ಸಾಕಲು ಮಾತ್ರ ಸರ್ಕಾರದ ಉದ್ಯೋಗ ಬೇಕು ಆದರೆ, ಅವರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಅಂತಹ ಶಿಕ್ಷಕರನ್ನು ಜನರು ತಡೆದು ನಿಲ್ಲಿಸಿ ಪ್ರಶ್ನಿಸಬೇಕು. ಸರ್ಕಾರಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.
ದಿಶಾ ಸಮಿತಿ ಸದಸ್ಯ ವೈ.ಎಚ್​.ಹುಚ್ಚಯ್ಯ ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲೂಕು ಹಂದನೆಕೆರೆಯಲ್ಲಿ ಸರ್ಕಾರದ ಅನುದಾನಿತ ಡಿವಿಪಿ ಶಾಲೆಯಲ್ಲಿ ಶಿಕ್ಷಕರಿಗೆ ಪ್ರಸ್ತುತ ಶೈಕ್ಷಣಿಕ ವರ್ಷದ ಅರಂಭದಿಂದಲೂ ವೇತನವನ್ನು ಬಿಡುಗಡೆ ಮಾಡಿಲ್ಲ. ಸಂಬಳವಿಲ್ಲದೆ ಶಿಕ್ಷಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ, ಅನ್ಯಾಯವಾಗುತ್ತಿದ್ದರೂ ಕಳೆದ 2 ವರ್ಷದಿಂದ ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದೇನೆ ಎಂದರು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಗಮನ ಸೆಳೆದರು. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ ಎಂದು ಡಿಸಿ ಭರವಸೆ ನೀಡಿದರು.
ಪ್ರಸ್ತುತ ಆರ್ಥಿಕ ವರ್ಷ ಅಂತ್ಯದಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಬಡವರು, ಶೋಷಿತ ಸಮುದಾಯಗಳ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬವಾಗದಂತೆ ಕೆಲಸ ನಿರ್ವಹಿಸಲು ಇದೇ ಸಂದರ್ಭದಲ್ಲಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಬಿ.ವಿ.ಅಶ್ವಿಜ ಇದ್ದರು.