ತುಮಕೂರಿನಲ್ಲಿ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಕೆ.ಸಿ.ನರಸಿಂಹಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿ.ಆರ್​.ನರಸಿಂಹಮೂರ್ತಿ, ಎಚ್​.ನಾಗರಾಜು, ಎಚ್​.ಎನ್​.ಸುರೇಶ್​, ಡಾ.ಎಚ್​.ಎನ್​.ಚಂದ್ರಕುಮಾರ್​ ಮತ್ತಿತರರು ಇದ್ದರು.  
ತುಮಕೂರು

24 ಸಾವಿರ ಬ್ಯಾಕ್​ ಲಾಗ್​ ಹುದ್ದೆ ಭರ್ತಿ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಎಸ್ಸಿ, ಎಸ್ಟಿ ನೌಕರರ 6ನೇ ರಾಜ್ಯಮಟ್ಟದ
  • ಬೆಂಗಳೂರಲ್ಲಿ ಐಕ್ಯತಾ ಸಮಾವೇಶ
  • ಸಿಎಂ ಡಿ.ಕೆ. ಶಿವಕುಮಾರ್​, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ
ತುಮಕೂರು-:

ರಾಜ್ಯದಲ್ಲಿ 2,84,724 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದರಲ್ಲಿ ಸುಮಾರು 24 ಸಾವಿರ ಬ್ಯಾಕ್​ಲಾಗ್​ ಹುದ್ದೆಗಳು ಭರ್ತಿಯಾಗದೆ ಉಳಿದಿವೆ ಎಂದು ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಕೆ.ಸಿ.ನರಸಿಂಹಮೂರ್ತಿ ಹೇಳಿದರು.

ಮಂಜೂರಾಗಿರುವ ಸುಮಾರು 7.75 ಲಕ್ಷ ಸರ್ಕಾರಿ ಹುದ್ದೆಗಳ ಪೈಕಿ 4 ಲಕ್ಷ ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಬ್ಯಾಕ್​ ಲಾಗ್​ ಹುದ್ದೆಗಳನ್ನು ಭರ್ತಿ ಮಾಡುವುದರ ಜತೆಗೆ ಎಸ್ಸಿ, ಎಸ್​ಟಿ ನೌಕರರಿಗೆ ಮೀಸಲಾತಿ, ಬಡ್ತಿ ಹಾಗೂ ಜೇಷ್ಠತೆಯಲ್ಲಿ ಆಗುತ್ತಿರುವ ತಾರತಮ್ಯ ನಿವಾರಿಸುವುದು ಸೇರಿದಂತೆ ಬೆಂಗಳೂರಿನಲ್ಲಿ ನಡೆಯಲಿರುವ ಐಕ್ಯತಾ ಸಮಾವೇಶದಲ್ಲಿ ಹಲವು ಬೇಡಿಕೆಗಳ ಕುರಿತು ಗಂಭೀರ ಚರ್ಚೆ ನಡೆಸಲಾಗುವುದು ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರಿ ಎಸ್ಸಿ, ಎಸ್​ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶವನ್ನು ಆ. 28 ರಂದು ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ ಪ್ಯಾಲೇಸ್​ನಲ್ಲಿ ಆಯೋಜಿಸಲಾಗಿದ್ದು ಸಂವಿಧಾನದ ಆಶಯಗಳು ಹಾಗೂ ಸವಲತ್ತುಗಳು ಸಮುದಾಯದ ಎಲ್ಲಾ ನೌಕರರಿಗೂ ತಲುಪಿಸಬೇಕೆಂಬ ಉದ್ದೇಶ ಈ ಸಮಾವೇಶದ್ದಾಗಿದೆ. 15 ಅಂಶಗಳ ಬೇಡಿಕೆಯ ಮನವಿ ಪತ್ರವನ್ನು ಈ ಸಂದರ್ಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್​ಗೆ ಸಮಾವೇಶದಲ್ಲಿ ಸಲ್ಲಿಸಲಾಗುವುದು ಎಂದರು.
ಸಿದ್ದರಾಮಯ್ಯ ದಿಕ್ಸೂಚಿ ಭಾಷಣ: ಐಕ್ಯತಾ ಸಮಾವೇಶವನ್ನು ಸಿಎಂ ಡಿ.ಕೆ. ಶಿವಕುಮಾರ್​ ಉದ್ಘಾಟಿಸಲಿದ್ದು, ಡಿಸಿಎಂ ಡಾ. ಜಿ. ಪರಮೇಶ್ವರ್​ ಅಧ್ಯಕ್ಷತೆ ವಹಿಸುವರು. ಮಾಜಿ ಸಿಎಂ ಸಿದ್ದರಾಮಯ್ಯ ದಿಕ್ಸೂಚಿ ಭಾಷಣ ಮಾಡುವರು. ಸಚಿವರಾದ ಸತೀಶ್​ ಜಾರಕಿಹೊಳಿ, ಕೆ.ಎಚ್​. ಮುನಿಯಪ್ಪ, ಪ್ರಿಯಾಂಕ್​ ರ್ಖಗೆ ಸೇರಿದಂತೆ ಶಾಸಕರು, ಮಠಾಧೀಶರು, ದಲಿತ ಹಾಗೂ ಹಿಂದುಳಿದ ಸಮುದಾಯಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ನರಸಿಂಹಮೂರ್ತಿ ತಿಳಿಸಿದರು.
ಈ ಸಮಾವೇಶಕ್ಕೆ ರಾಜ್ಯಾದ್ಯಂತ ಸುಮಾರು 30 ಸಾವಿರಕ್ಕು ಹೆಚ್ಚು ಎಸ್ಸಿ-/ಎಸ್ಟಿ ನೌಕರರು, ಅಧಿಕಾರಿಗಳು ಹಾಗೂ ಹಿತೈಷಿಗಳು ಆಗಮಿಸಲಿದ್ದಾರೆ. ತುಮಕೂರು ಜಿಲ್ಲೆಯಿಂದ 1 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂವಿಧಾನದ ಆಶಯಗಳು, ಎಸ್ಸಿ/ಎಸ್​ಟಿ ನೌಕರರು ಮತ್ತು ಅಧಿಕಾರಿಗಳ ಜವಾಬ್ದಾರಿ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಹಾಗೂ ಸಾಂವಿಧಾನಿಕ ಹಕ್ಕುಗಳ ಕುರಿತು ಮೂಡುತ್ತಿರುವ ಅಪಪ್ರಚಾರ ಮತ್ತು ಗೊಂದಲಗಳನ್ನು ಸರಿಸಿ, ಶೋಷಿತ ಹಾಗೂ ದಮನಿತ ವರ್ಗಗಳಿಗೆ ಕಾನೂನುಬದ್ಧ ಹಕ್ಕುಗಳು ಮತ್ತು ಸೌಲಭ್ಯಗಳು ತಲುಪುವಂತೆ ಜಾಗೃತಿ ಮೂಡಿಸುವ ಉದ್ದೇಶವೂ ಸಮಾವೇಶದ್ದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಬಿ.ಆರ್​. ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಎಚ್​. ನಾಗರಾಜು, ಖಜಾಂಚಿ ಎಚ್​.ಎನ್​. ಸುರೇಶ್​, ಉಪಾಧ್ಯಕ್ಷ ಡಾ. ಎಚ್​.ಎನ್​. ಚಂದ್ರಕುಮಾರ್​, ಲಕ್ಷ್ತ್ರಿ್ಮನರಸಯ್ಯ, ಗೋಪಿನಾಥ್​, ಹನುಮಂತರಾಜು, ಕೋಟೆಕಲ್ಲಯ್ಯ ಮತ್ತಿತರರು ಹಾಜರಿದ್ದರು.