ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವದಲ್ಲಿ ಸಹಸ್ರಾರು ಜನರು ಭಾಗಿಯಾದರು.  
ತುಮಕೂರು

ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಸಿದ್ದಗಂಗಾಮಠದಲ್ಲಿ ಭಕ್ತ ಸಾಗರ
  • ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಉತ್ಸವ
  • ಜಿಲ್ಲಾಡಳಿತ ಭಾಗಿ
ತುಮಕೂರು-: ಸಿದ್ದಗಂಗಾ ಕ್ಷೇತ್ರದ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಹಾರಥೋತ್ಸವವು ವೈಭವಯುತವಾಗಿ ಜರುಗಿತು. ನಾಡಿನ ಮೂಲೆಮೂಲೆಯಿಂದ ಹರಿದಬಂದಿದ್ದ ಭಕ್ತರು ಭಕ್ತಿಭಾವದಲ್ಲಿ ಮಿಂದೆದ್ದರು.
ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ 10 ದಿನಗಳು ನಡೆಯಲಿರುವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾಮಹೋತ್ಸವದ ಮಾ ಬಹುಳ ಚತುರ್ದಶಿ ಸೋಮವಾರ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ಜರುಗಿತು. ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಧ್ಯಾಹ್ನ 12ಕ್ಕೆ ಸರಿಯಾಗಿ ಶುಭ ಅಭಿಜಿನ್​ ಲಗ್ನದಲ್ಲಿ ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹಾಗೂ ಶ್ರೀಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ರಥೋತ್ಸವದಲ್ಲಿ ಶ್ರೀಕ್ಷೇತ್ರದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್​, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತೆ ಬಿ.ಶುಭ, ಉಪವಿಭಾಗಾಧಿಕಾರಿ ನಾಹಿದಾ ಜಮ್​ ಜಮ್​, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಿ.ಎಸ್​.ಸಚ್ಚಿದಾನಂದ್​, ಜಿಲ್ಲಾಧ್ಯಕ್ಷ ಡಾ.ಎಸ್​.ಪರಮೇಶ್​, ವಿವಿಧ ಮಠಾಧೀಶರುಗಳು ಸೇರಿದಂತೆ ಅನೇಕ ಗಣ್ಯರು, ಸಹಸ್ರಾರು ಭಕ್ತಾದಿಗಳು ಸ್ವಾಮಿಯ ಉತ್ಸವವನ್ನು ಸಾಕ್ಷೀಕರಿಸಿದರು.
ಇದಕ್ಕೂ ಮುನ್ನ ರಥಕ್ಕೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ, ಕಳಸಗಳ ಆರಾಧನೆ, ರಥಾಂಗ ಪೂಜೆ ಸೇರಿ ಧಾರ್ಮಿಕ ವಿಧಾನಗಳನ್ನು ಸಲ್ಲಿಸಿ ಆರಾಧ್ಯ ದೈವ ಸಿದ್ದಲಿಂಗೇಶ್ವರಸ್ವಾಮಿಯನ್ನು ರಥಕ್ಕೆ ಕೂರಿಸಿ ರಾಜೋಪಚಾರ ಮತ್ತು ಅಷ್ಟೋತ್ತರ ಪೂಜೆ ನೆರವೇರಿಸಲಾಯಿತು. ರಥದ ಮುಂಭಾಗದಲ್ಲಿ ಜಯಾದಿ ಹೋಮ, ಗಣ ಹೋಮ, ಮೃತ್ಯುಂಜಯ ಹೋಮ ಮಾಡಲಾಯಿತು.
ಜಾನಪದ ಕಲಾತಂಡಗಳ ಮೆರಗು: ಡೊಳ್ಳು ಕುಣಿತ, ನಂದಿಧ್ವಜ, ಕರಡಿಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ರಥೋತ್ಸವವಕ್ಕೆ ಮತ್ತಷ್ಟು ಮೆರಗು ನೀಡಿದವು. ರಥವನ್ನು ಅಭೂತಪೂರ್ಣ ವಸ್ತ್ರಗಳಿಂದ ಸುವರ್ಣ ಕಲಶದೊಂದಿಗೆ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು.
ಮುಗಿಲುಮುಟ್ಟಿದ ಹಷೋರ್ದ್ಘಾರ: ಮಧ್ಯಾಹ್ನ 12ಕ್ಕೆ ಭಕ್ತರ ಜಯಘೋಷಗಳೊಂದಿಗೆ ರಥದ ಗಾಲಿಗಳು ಉರಳಲಾರಂಭಿಸಿದವು. ರಥದತ್ತ ಬಾಳೆಹಣ್ಣು, ದನವ ತೂರಿ ಇಷ್ಟಾರ್ಥ ಸಿದ್ಧಿಗೆ ಭಕ್ತರು ಮನದಲ್ಲಿ ಪ್ರಾರ್ಥಿಸಿ, ಭಕ್ತ ಸಮರ್ಪಿಸಿದರು. 12.30ಕ್ಕೆ ಮಠದ ಸಂಸತ ಪಾಠಶಾಲಾ ಮುಂಭಾಗ ಬರುತ್ತಿದ್ದಂತೆ ಹಷೋರ್ದ್ಘಾರ ಮುಗಿಲುಮುಟ್ಟಿದವು. ನಂತರ ಸಂಜೆ ತೇರನ್ನು ಮತ್ತೆ ಸ್ವಸ್ಥಾನಕ್ಕೆ ಎಳೆಯಲಾಯಿತು.
ದಾಸೋಹ ವ್ಯವಸ್ಥೆ
ರಥೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಹಲವು ಸಂಘ ಸಂಸ್ಥೆಗಳಿಂದ ಪಾನಕ, ಮಜ್ಜಿಗೆ, ಹೆಸರು ಬೇಳೆಯನ್ನು ವಿತರಿಸಲಾಯಿತು. ನಾಡಿನ ವಿವಿಧೆಡೆಯಿಂದ ಪಾಲ್ಗೊಂಡಿದ್ದ ಸಹಸ್ರಾರು ಮಂದಿ ಭಕ್ತಾದಿಗಳಿಗೆ ಶ್ರೀಮಠದ ವತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಕೀರು, ಮಾಲ್ದಿ, ಚಿತ್ರಾನ್ನ, ಅನ್ನಸಾರು, ಮಜ್ಜಿಗೆ ಪ್ರಸಾದಕ್ಕಿತ್ತು.