ತುಮಕೂರಿನ ಕಾಂಗ್ರೆಸ್​ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ 
ತುಮಕೂರು

ಕೇಂದ್ರ ಸಚಿವ ವಿ.ಸೋಮಣ್ಣ ವಿರುದ್ಧ ಎಸ್​ಪಿಎಂ ವಾಗ್ದಾಳಿ

ಡಾ.ಶ್ರೀಹರ್ಷ ಸೋರಲಮಾವು

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್​ ಬಗ್ಗೆ ಮಾತನಾಡುವಾಗ ಸಾಮಾನ್ಯ ಜ್ಞಾನವಿರಲಿ
  • ಎಐಸಿಸಿ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆ
  • ಗೆಲುವಿಗೆ ಕಾಂಗ್ರೆಸ್​ ನೆರವು ಹೇಳಿಕೆಗೆ ಖಂಡನೆ
ತುಮಕೂರು: ರಾಷ್ಟ್ರೀಯ ಪಕ್ಷವಾಗಿ ಇತಿಹಾಸ ಹೊಂದಿರುವ ಕಾಂಗ್ರೆಸ್​ ಪಕ್ಷದ ಮುಖಂಡು ನನ್ನ ಗೆಲುವಿಗೆ ಸಹಕಾರ ನೀಡಿದರು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಸರ್ಕಾರಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರೂ ನಮ್ಮ ಪಕ್ಷ ಹೇಳಿಕೆಯನ್ನು ಖಂಡಿಸದೇ ಸಹಿಸಿಕೊಂಡಿದ್ದು ನನಗೆ ಆಶ್ವರ್ಯ ಮೂಡಿಸಿತು ಎಂದು ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ ಬೇಸರಿಸಿದರು.
ನಗರದ ಕಾಂಗ್ರೆಸ್​ ಜಿಲ್ಲಾ ಕಚೇರಿಯಲ್ಲಿ ಬುಧವಾರ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್​ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜವಬ್ಧಾರಿಯುತ ಕೇಂದ್ರ ಮಂತ್ರಿ ಸರ್ಕಾರಿ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ನತೆಗೆ ಘಾಸಿಯಾಗುವಂತೆ ಹೇಳಿಕೆ ನೀಡಿದ್ದು ಸರಿಯಲ್ಲ ಎಂದರು.
ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್​ ಸಾಧನೆಯ ಇತಿಹಾಸ ಶುಭವಾಗಿಲ್ಲ ಹಾಗೆಂದಮಾತ್ರಕ್ಕೆ ಭವಿಷ್ಯದಲ್ಲಿಯೂ ಹಾಗೆಯೇ ಇರಬೇಕೆಂದಿಲ್ಲ, ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಲಾಗಿದ್ದು ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು, ಸಾಧ್ಯವಾದರೆ ಬಿಜೆಪಿ, ಜೆಡಿಎಸ್​ ಮುಖಂಡರ ಸಹಕಾರ ಪಡೆಯಬೇಕು ಎಂದರು.
ಲೋಕಸಭೆ ಚುನಾವಣೆಯಲ್ಲಿ ಏನು ನಡೆದಿದೆ ಎಂಬುದು ಎಲ್ಲರಿಗೂ ತಿಳಿದಿದೆ, ನಾನು ಎಂದೂ ಯಾರ ಬಗ್ಗೆಯೂ ದೂರುವ ಮಾತನಾಡಿಲ್ಲ ಆದರೆ, ಕೇಂದ್ರ ಸಚಿವ ವಿ.ಸೋಮಣ್ಣ ಕಾಂಗ್ರೆಸ್​ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾಯ, ವಾಚ, ಮನಸ್ಸು ನನ್ನ ಪರವಾಗಿ ಕೆಲಸ ಮಾಡಿದರು ಎಂದು ಸರ್ಕಾರಿ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ ಅವರಿಗೆ ಶೋಭೆ ತರುವಂತದ್ದಲ್ಲ ಎಂದರು.
ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್​ ಮಾತನಾಡಿ, ಗ್ರಾಮೀಣ ಬಡಜನರ ಬದುಕಿಗೆ ಆಸರೆಯಾಗಿದ್ದ ಮನರೇಗಾ ಕಾಯ್ದೆ ರದ್ದು ಮಾಡಿ, ಅದರ ಬದಲು ವಿಬಿ ಜಿ-ರಾಮ್​ ಜಿ ಹೆಸರಿನಲ್ಲಿ ಯೋಜನೆ ಹುಟ್ಟು ಹಾಕಿ, ಬಡ ಜನರ ಬದುಕು ಕಿತ್ತುಕೊಂಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ದೇಶವ್ಯಾಪ್ತಿ ಪ್ರತಿಭಟನೆ ನಡೆಸಲಿದೆ ಎಂದರು.
ಕಾಂಗ್ರೆಸ್​ ಯುವಕರಿಗೆ ಅವಕಾಶ ನೀಡಬೇಕೆಂಬ ಸದುದ್ದೇಶದಿಂದ ವಿಧಾನಪರಿಷತ್​ ಚುನಾವಣೆಯಲ್ಲಿ ಯುವಕರಿಗೆ ಅವಕಾಶ ನೀಡಿದೆ.
ಆಗ್ನೇಯ ಪದವಿಧರರ ಕ್ಷೇತ್ರದದಲ್ಲಿ ಶಶಿಹುಲಿಕುಂಟೆ ಮಠ್​ಅವರಿಗೆ ಟಿಕೇಟ್​ ನೀಡಿದ್ದು ತುಮಕೂರು ಜಿಲ್ಲೆಯಲ್ಲಿಯೂ ಅತೀ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಇತಿಹಾಸ ನಿರ್ಮಿಸಬೇಕು ಎಂದರು.
ಆಗ್ನೇಯ ಪದವಿಧರರ ಕ್ಷೇತ್ರದ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್​ ಮಾತನಾಡಿ, ಕಳೆದ 11 ವರ್ಷಗಳಿಂದ ಪಕ್ಷದ ಶಿಸ್ತಿನ ಶಿಫಾಯಿಯಾಗಿ,ಯುವ ಕಾಂಗ್ರೆಸ್​ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಚುನಾವಣೆಗೆ 10 ತಿಂಗಳ ಮುಂಚೆಯೇ ಟಿಕೆಟ್​ ನೀಡಿದ್ದು ಕ್ಷೇತ್ರ ಪ್ರವಾಸ ಮಾಡಲು ಅನುಕೂಲವಾಗಲಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಜೊತೆ ಕೈಜೋಡಿಸಿ, ಹೊಸ ಇತಿಹಾಸ ನಿಮಾರ್ಣಕ್ಕೆ ಸಹಕರಿಸಿ, ಪದವಿಧರರ ದ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಶಾಸಕರಾದ ಡಾ.ರಫೀಕ್​ಅಹ್ಮದ್​, ಷಫಿಅಹ್ಮದ್​, ಕೆ.ಎಸ್​.ಕಿರಣ್​ಕುಮಾರ್​ ಮಾತನಾಡಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಫೈಯಾಜ್​, ಮಹೇಶ್​, ಮುಖಂಡರಾದ ಇಕ್ಬಾಲ್​ ಅಹ್ಮದ್​, ಕೆಂಚಮಾರಯ್ಯ, ಆರ್​.ರಾಮಕೃಷ್ಣ ಮತ್ತಿತರರು ಇದ್ದರು.
ದೇಶದ ಒಬ್ಬ ಮಂತ್ರಿಯಾಗಿರುವ ವಿ.ಸೋಮಣ್ಣ ಸಾರ್ವಜನಿಕವಾಗಿ ಸರ್ಕಾರಿ ಕಾರ್ಯಕ್ರಮದಲ್ಲಿ ಚುನಾವಣೆಯಲ್ಲಿ ವಿರೋಧ ಪಕ್ಷದವರು ಸಹಾಯ ಮಾಡಿದರು ಎಂದು ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ. ರಾಷ್ಟ್ರೀಯ ಪಕ್ಷದ ಬಗ್ಗೆ ಕೇಂದ್ರದ ಸಚಿವ ಅಷ್ಟು ಕೀಳುಮಟ್ಟದ ಹೇಳಿಕೆ ನೀಡಿದ್ದು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ನನ್ನ ಸೋಲು ನಾನು ಒಪ್ಪಿಕೊಂಡಿದ್ದೇನೆ ಆದರೆ, ಪಕ್ಷದ ಬಗ್ಗೆ ಬೇರೊಬ್ಬರು ಮಾತನಾಡಿದ್ದನ್ನು ನಾವೆಲ್ಲರೂ ಖಂಡಿಸಬೇಕು.
ಎಸ್​.ಪಿ.ಮುದ್ದಹನುಮೇಗೌಡ
ಮಾಜಿ ಸಂಸದ