ತುಮಕೂರಿನಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಆಯೋಜಿಸಿದ್ದ ದಣ ಭಾರತ ಎಂಎಸ್​ಎಂಇ ಸಮಾವೇಶವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು. ಜಿ.ಬಿ.ಜ್ಯೋತಿಗಣೇಶ್​, ಬಿ.ಆರ್​.ಗಣೇಶ್​ರಾವ್​, ಪ್ರೊ.ಎಂ.ವೆಂಕಟೇಶ್ವರಲು, ನಿಂಗಣ್ಣ ಎಸ್​.ಬಿರದಾರ್​, ಎಸ್​.ಎಂ.ಹುಸೇನ್​, ಆರ್​.ಕೇಶವಮೂರ್ತಿ, ವೈ.ದಿನೇಶ್​ ಕುಮಾರ್​, ಆರ್​.ದೊರೈ, ಸದಾಶಿವ ಆರ್​.ಅಮಿನ್​ ಮತ್ತಿತರರು ಇದ್ದರು.  
ತುಮಕೂರು

ರಾಜ್ಯದಲ್ಲಿ ಸಣ್ಣ ಕೈಗಾರಿಕಾ ನೀತಿ ಜಾರಿಗೆ ಸಿಎಂ ಜತೆ ಚರ್ಚೆ

ಪ್ರಮುಖ ಮುಖ್ಯಾಂಶಗಳು

  • ದೇಶದ ಆರ್ಥಿಕತೆಗೆ ಎಂಎಸ್​ಎಂಇ ಕೊಡುಗೆ
  • ಕೈಗಾರಿಕೆಗಳಿಗೆ ಎಐ ತಂತ್ರಜ್ಞಾನ
  • ದಕ್ಷಿಣ ಭಾರತ ಎಂಎಸ್​ಎಂಇ ಸಮಾವೇಶ
ತುಮಕೂರು: ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ಸಣ್ಣ ಕೈಗಾರಿಕೆಗಳ ಬೆಳವಣಿಗೆ ಪೂರಕವಾಗಿ ಪ್ರತ್ಯೇಕ ನೀತಿ ಜಾರಿಗೆ ಸಿಎಂ ಜತೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ದಕ್ಷಿಣ ಭಾರತ ಎಂಎಸ್​ಎಂಇ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ವ್ಯವಸ್ಥೆಗೆ ಶೇ.30ರಷ್ಟು ಕೊಡುಗೆಯನ್ನು ಸಣ್ಣ ಕೈಗಾರಿಕೆಗಳು ನೀಡುತ್ತಿದ್ದು ಈ ಕೈಗಾರಿಕಾ ವಲಯವನ್ನು ಮತ್ತಷ್ಟು ಬಲಪಡಿಸಲು ತಂತ್ರಜ್ಞಾನ ಅಳವಡಿಕೆ ಅನಿವಾರ್ಯ ಎಂದರು.
ರಾಜ್ಯದಲ್ಲಿ 24 ಲಕ್ಷ ಸಣ್ಣ ಕೈಗಾರಿಕೆಗಳಲ್ಲಿ 2.5 ಕೋಟಿ ಜನ ದುಡಿಯುತ್ತಿದ್ದಾರೆ. ಈ ಕೈಗಾರಿಕೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಬೆಳೆಸಿದ್ದೇ ಆದಲ್ಲಿ ದೇಶದ ಆರ್ಥಿಕತೆಗೆ ಇನ್ನೂ ಹೆಚ್ಚಿನ ಕೊಡಗೆ ಕೊಡಬಹುದಾಗಿದೆ. ಚೀನಾ ಮಾದರಿಯಂತೆ ನಮ್ಮಲ್ಲು ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ತುಮಕೂರು ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿದ್ದು, ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ವಸಂತ ನರಸಾಪುರ ಕೈಗಾರಿಕಾ ಹಬ್​ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಕೈಗಾರಿಕೆಗಳಿಗೆ ಎಐ ತಂತ್ರಜ್ಞಾನ: ಸಣ್ಣ ಕೈಗಾರಿಕೆಗಳನ್ನು ದೊಡ್ಡ ದೊಡ್ಡ ಕೈಗಾರಿಕೆಗಳು ಕೊಂದು ಹಾಕಿಬಿಟ್ಟಿವೆ. ಇದು ಕೈಗಾರಿಕಾ ವಲಯಕ್ಕೆ ದೊಡ್ಡ ಹಿನ್ನೆಡೆ ಎನಿಸಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಭಾರತದಲ್ಲಿ ಸಣ್ಣ ಕೈಗಾರಿಕೆಗಳನ್ನು ಸದೃಢಗೊಳಿಸಲು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅತ್ಯವಶ್ಯ. ಹಾಗಾಗಿ ಸಣ್ಣ ಕೈಗಾರಿಕೆಗಳು ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಸಿಕೊಂಡು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಬಹುದು ಎಂದು ಪರಮೇಶ್ವರ ತಿಳಿಸಿದರು.
ಕೈಗಾರಿಕೆ ಸ್ಥಾಪನೆಗೆ ರಾಜ್ಯ ಪ್ರಾಶಸ: ರಾಜ್ಯದಲ್ಲಿ ಕೈಗಾರಿಕಾ ಸ್ಥಾಪನೆಗೆ ಪ್ರಾಶಸವೆನಿಸಿದೆ. ತುಮಕೂರು ಅಂತಾರಾಷ್ಟ್ರೀಯ ಭೂಪಟದಲ್ಲಿ ತನ್ನ ಛಾಪು ಮೂಡಿಸಿದ್ದು ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶ ಇದೆ. ಶೈಕ್ಷಣಿಕ ಜಿಲ್ಲೆ ತುಮಕೂರನ್ನು ಕೈಗಾರಿಕಾ ಹಬ್​ ಆಗಿ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ. ಹೇಮಾವತಿ, ಎತ್ತಿನಹೊಳೆ ಯೋಜನೆಯಡಿ ಕೈಗಾರಿಕೆಗಳಿಗೆ ನೀರು ಸಹ ಒದಗಿಸಲಾಗಿದೆ. ಶಿರಾ&ತುಮಕೂರು ಮಧ್ಯೆ 2 ಸಾವಿರ ಎಕರೆ ಏರ್​ಪೋರ್ಟ್​ ನಿರ್ಮಾಣಕ್ಕೆ ಜಾಗವನ್ನು ಕೊಡಲು ಸಿದ್ಧವಿದ್ದೇವೆ ಎಂದು ಪರಮೇಶ್ವರ್​ ಹೇಳಿದರು.
ನಗರ ಶಾಸಕ ಜ್ಯೋತಿ ಗಣೇಶ್​, ತುಮಕೂರು ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು , ಕಾಶಿಯಾ ಅಧ್ಯಕ್ಷ ಬಿ.ಆರ್​.ಗಣೇಶ್​ರಾವ್​, ಉಪಾಧ್ಯಕ್ಷ ನಿಂಗಣ್ಣ ಎಸ್​.ಬಿರದಾರ್​, ಪ್ರಧಾನಕಾರ್ಯದರ್ಶಿ ಎಸ್​.ಎಂ.ಹುಸೇನ್​, ಆರ್​.ಕೇಶವಮೂರ್ತಿ, ವೈ.ದಿನೇಶ್​ ಕುಮಾರ್​, ಆರ್​.ದೊರೈ, ಕಾಸಿಯಾ ದಣಭಾರತ ಪ್ಯಾನೆಲ್​ ಛೇರ್ಮನ್​ ಸದಾಶಿವ ಆರ್​.ಅಮಿನ್​, ಪಿ.ಎಸ್​.ಶ್ರೀಕಂಠ ದತ್ತ, ಕೆ.ಆನಂದರಾವ್​, ಕೆನರಾಬ್ಯಾಂಕ್​ ಪ್ರಾದೇಶಿಕ ಮುಖ್ಯಸ್ಥ ಗಂಗೇಶ್​ ಗುಂಜಾನ್​, ಎಸ್​ಬಿಐ ಪ್ರಾದೇಶಿಕ ವ್ಯವಸ್ಥಾಪಕ ಪಿ. ಶ್ರೀರಾಮ್​ ಉಪಸ್ಥಿತರಿದ್ದರು.