ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು. ಜಿ.ಬಿ.ಜ್ಯೋತಿಗಣೇಶ್, ಎಚ್.ಎಸ್.ರವಿಶಂಕರ್, ಕಲ್ಲೇಶ್, ರೇಣುಕಾರಾಧ್ಯಸ್ವಾಮಿ ಮತ್ತಿತರರು ಇದ್ದರು.
- ಸಿದ್ದಗಂಗಾ ಮಠಕ್ಕೆ ಭೇಟಿ
- ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್
- ಶಿಕ್ಷಕರು, ಪದವೀಧರರ ಕ್ಷೇತ್ರದ ಸಮಸ್ಯೆ ಅರಿವಿದೆ
ತುಮಕೂರು: ನಾನು ಮೂಲತ: ಸಂಘ ಪರಿವಾರದ ಕಾರ್ಯಕರ್ತ. ಪಕ್ಷದ ವರಿಷ್ಠರು ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ ಹೇಳಿದರು.
ಸಿದ್ದಗಂಗಾ ಮಠಕ್ಕೆ ಭೇಟಿ ಲಿಂಗೈಕ್ಯ ಶಿವಕುಮಾರ ಶಿವಯೋಗಿಗಳ ಗದ್ದುಗೆ ದರ್ಶನ ಮಾಡಿ ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಸುರೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಕೊಟ್ಟಿರುವ ಅವಕಾಶವನ್ನು ಬಳಸಿಕೊಂಡು ಪದವೀಧರರ ಸಮಸ್ಯೆ, ಹೋರಾಟಗಳಿಗೆ ಧ್ವನಿಯಾಗಿ ಕೆಲಸ ಮಾಡುವೆ. ಈ ನಿಟ್ಟಿನಲ್ಲಿ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಕೊಡಿಸಲು ಹಾಗೂ ಅವರ ಸಮಸ್ಯೆಗಳನ್ನು ನಿವಾರಿಸಲು ಶ್ರಮ ವಹಿಸಿ ಕೆಲಸ ಮಾಡುವ ಭರವಸೆ ನೀಡಿದರು.
ಪದವೀಧರರಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿಲ್ಲ. ಪದವೀಧರರನ್ನು ಉದ್ಯೋಗದ ಅವಕಾಶಗಳಿಂದ ವಂಚಿತರನ್ನಾಗಿ ಮಾಡುತ್ತಿದೆ. ಪದವೀಧರರಿಗೆ ವಯಸ್ಸು ಮೀರಿದ ಮೇಲೆ ನೇಮಕಾತಿಗೆ ಕರೆದರೆ ಉದ್ಯೋಗ ಸಿಗದೆ ವಂಚಿರಾಗುವರು. ಹಾಗಾಗಿ, ಪದವೀಧರರ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಶಿಕ್ಷಕರು, ಪದವೀಧರರ ಪರವಾಗಿ ಕೆಲಸ ಮಾಡುತ್ತಿದೆ. ನಾನು ಸಹ ಶಿಕ್ಷಕರು ಹಾಗೂ ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನ. ಪಕ್ಷ ನನಗೆ ಟಿಕೆಟ್ ನೀಡಿದ್ದು ತುಮಕೂರು ಜಿಲ್ಲೆಯ ಪ್ರವಾಸವನ್ನು ಇಂದಿನಿಂದ ಆರಂಭಿಸಿದ್ದೇನೆ. ನಾಡಿನ ಪುಣ್ಯಕ್ಷೇತ್ರಗಳಲ್ಲೊಂದಾದ ಸಿದ್ದಗಂಗೆಗೆ ಭೇಟಿ ನೀಡಿ ಹಿರಿಯ ಶ್ರೀಗಳ ಗದ್ದುಗೆ ದರ್ಶನ ಪಡೆದಿದ್ದೇನೆ. ಈ ಪುಣ್ಯಭೂಮಿಯಿಂದ ರಾಜಕೀಯ ಹೋರಾಟ ಆರಂಭಿಸಿದ್ದೆನೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ನಮ್ಮ ಪಕ್ಷ ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕೆ.ಎಂ.ಸುರೇಶ್ರನ್ನು ಘೋಷಣೆ ಮಾಡಿದೆ. ಅವರ ಗೆಲುವಿಗೆ ನಾನು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರುಗಳು ಶ್ರಮ ವಹಿಸಿ ಕೆಲಸ ಮಾಡುತ್ತೇವೆ. ಹಿಂದಿನಿಂದಲೂ ನಮ್ಮ ಪಕ್ಷ ಪದವೀಧರ, ಶಿಕ್ಷಕರ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. ಪದವೀಧರ, ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕ ಸ್ಪಂದಿಸುವ ಕೆಲಸ ನಿರಂತರ ಮಾಡಿಕೊಂಡು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್. ರವಿಶಂಕರ್, ಬಿಜೆಪಿ ಮುಖಂಡರಾದ ಕಲ್ಲೇಶ್, ರೇಣುಕಾರಾಧ್ಯಸ್ವಾಮಿ, ಅಪು$್ಪಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.