ರೈಲ್ವೆ ಹಾಗೂ ಹೆದ್ದಾರಿ ಯೋಜನೆಗಳಿಗೆ ಮಣ್ಣು ಕೊರತೆಯಾಗಿರುವ ಬಗ್ಗೆ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.
- ಕೆರೆಯಿಂದ ಮಣ್ಣು ಬಳಸಲು ಟಿಬಿಜೆ ಆಗ್ರಹ
- ಅಮೃತ್ ಸರೋವರ್ ಯೋಜನೆಯಲ್ಲಿದೆ ಅವಕಾಶ
- ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ರಾಯಲ್ಟಿ ಚಿಂತೆ
ತುಮಕೂರು: ತುಮಕೂರು&ದಾವಣಗೆರೆ ರೈಲ್ವೆ ಕಾಮಗಾರಿಗೆ ಅಗತ್ಯವಾದ ಮಣ್ಣು ಹೊಂದಿಸುವುದೇ ಸಮಸ್ಯೆಯಾಗಿದೆ, ಕೆರೆಗಳಲ್ಲಿ ಮಣ್ಣು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಡೆಯೊಡ್ಡುತ್ತಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಆದರೆ, ಕೇಂದ್ರ ಸರ್ಕಾರ 2022ರಲ್ಲಿ ಜಾರಿಗೊಳಿಸಿರುವ ಅಮೃತ್ ಸರೋವರ್ ಯೋಜನೆಯಲ್ಲಿ ಜಿಲ್ಲೆಯ 78 ಕರೆಗಳ
ಪುನಶ್ಚೇತನಕ್ಕೆ ಗಣಿ ಮತ್ತು ಭೂವಿಜ್ಞಾನ ಕಾಯ್ದೆ ಕಾಯ್ದೆಯಲ್ಲಿ ಮಾಡಿರುವ ಸಡಿಲಿಕೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಮಾಡಿಕೊಳ್ಳದೆ ಇಲಾಖೆ ಅಧಿಕಾರಿಗಳು ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಶಿರಾ ಶಾಸಕ ಟಿ.ಬಿ.ಜಯಚಂದ್ರ ತಕರಾರು ಎತ್ತಿದ್ದಾರೆ.
ಶಿರಾ ತಾಲೂಕು ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಅಮೃತ್ ಸರೋವರ್ ಯೋಜನೆಯಡಿ ರಾಜಧನ ವಿನಾಯಿತಿಯೊಂದಿಗೆ ಸೇರ್ಪಡೆಗೊಳಿಸಿ, ರೈಲ್ವೆ ಹಾಗೂ ಹೆದ್ದಾರಿ ಕಾಮಗಾರಿಗಳು ಸುಲಲಿತವಾಗಿ ಜರುಗಲು ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರಕ್ಕೂ ಮನವಿ ಸಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ.
ರೈತರು ಜಮೀನುಗಳಿಗೆ ಮಣ್ಣು ಬಳಸಿಕೊಳ್ಳಲು ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಯಾವುದೇ ಅಭ್ಯಂತರವಿಲ್ಲ, ಆದರೆ, ಕೆರೆಯಲ್ಲಿ ಮದರ್ ಸಾಯಿಲ್ ತೆಗೆಯಲು ಅವಕಾಶ ಇಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾನೂನು ಮುಂದಿಡುತ್ತಿರುವ ಶಾಸಕರು ಹಾಗೂ ಜಿಲ್ಲಾಡಳಿತದ ನಡುವೆ ಜಟಾಪಟಿಗೆ ಕಾರಣವಾಗಿದೆ.
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಸೋಮವಾರ ಮಹತ್ವದ ಸಭೆ ಕೂಡ ನಡೆಸಲಾಗಿದ್ದು ಶಾಸಕ ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಬಿ.ವಿ.ಅಶ್ವಿಜಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿ ಚರ್ಚಿಸಿದ್ದಾರೆ. ಆಯಾ ಗ್ರಾಪಂಗಳಿಂದ ಮನವಿಯನ್ನು ಜಿಪಂಗೆ ಸಲ್ಲಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.
ಅಮೃತ್ ಸರೋವರ್ ಯೋಜನೆಯಲ್ಲಿ ಏನಿದೆ?
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಮೃತ್ ಸರೋವರ್ ಯೋಜನೆಯಲ್ಲಿ ಆಯ್ಕೆಯಾದ ಕೆರೆ ಪುನಶ್ಚೇತನಗೊಳಿಸಲು ಅವಕಾಶವಿದ್ದು ಅಧಿಸೂಚನೆ ಮಾಡುವ ಅಧಿಕಾರ ಕೆರೆಯ ಉಸ್ತುವಾರಿ ಹೊಂದಿರುವ ಇಲಾಖೆ ವ್ಯಾಪ್ತಿಯಲ್ಲಿದೆ. ಈ ಯೋಜನೆಯಲ್ಲಿ ಕೆರೆಗಳ ಮಣ್ಣನ್ನು ತೆಗೆಯಲು ಆಯಾ ಇಲಾಖೆ ಅಥವಾ ಪ್ರಾಧಿಕಾರ ಅಧಿಸೂಚಿಸಿ, ದೊರೆಯುವ ಮಣ್ಣನ್ನು ರೈಲ್ವೆ ಕಾಮಗಾರಿಗಳಿಗೆ ಬಳಸಿಕೊಳ್ಳಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದಲ್ಲಿ, ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು-1994ರ ನಿಯಮ-ದಂತೆ ರೈಲ್ವೆ ಕಾಮಗಾರಿಗಳಿಗೆ ಬಳಸಿಕೊಳ್ಳುವ ಮಣ್ಣಿನ ಪ್ರಮಾಣಕ್ಕೆ ಖನಿಜ ರವಾನೆ ಪರವಾನಗಿ ಪಡೆಯಲು ಹಾಗೂ ರಾಜಧನ, ಹೆಚ್ಚುವರಿ ಪಾವತಿ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ವಂತಿಕೆ ಪಾವತಿಗೆ ವಿನಾಯಿತಿ ನೀಡಲು ಅವಕಾಶವಿದೆ.
ಅಲ್ಲದೆ, ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ರಾಜಧನ ಪಾವತಿ, ಹೆಚ್ಚುವರಿ ಪಾವತಿ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಧಿಯಿಂದ ಮತ್ತು ಅಮೃತ ಸರೋವರ ಯೋಜನೆಯಡಿಯಲ್ಲಿ ಅಧಿಕೃತವಾಗಿ ಹೂಳು ತೆಗೆಯಲಾದ ಕೆರೆಗಳು, ಸರೋವರಗಳು ಮತ್ತು ಕೊಳಗಳಿಂದ ಮಣ್ಣು ಅಥವಾ ಹೂಳು ರವಾನೆ ಪರವಾನಗಿ ಪಡೆಯುವುದರಿಂದ ವಿನಾಯಿತಿ ಪಡೆಯಲು ಅವಕಾಶ ಪಡೆದಿದೆ. ಹಾಗಾಗಿ, ಶಿರಾ ತಾಲೂಕು ಕೆರೆಗಳ ಮಣ್ಣು ಪಡೆಯಲು ಜಿದ್ದಾಜಿದ್ದಿ ಆರಂಭವಾಗಿದೆ.
ಚಿತ್ರದುರ್ಗ&-ದಾವಣಗೆರೆ ರೈಲ್ವೆ ಕಾಮಗಾರಿಗೆ ಅವಶ್ಯವಿರುವ ಮಣ್ಣಿನ ಪೂರೈಕೆಗಾಗಿ ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿ ತರೂರು ಗ್ರಾಪಂ ವ್ಯಾಪ್ತಿಯ ಬಾಳಬಸವನಹಳ್ಳಿ ಕೆರೆಯಲ್ಲಿ 2026 ಜನವರಿಯಿಂದ ಜೂನ್ವರೆಗೂ 1.50 ಲಕ್ಷ ಮೆಟ್ರಿಕ್ ಟನ್ ಹೂಳು ಮಣ್ಣು ತೆಗೆಯಲು ಈಗಾಗಲೇ ಸರ್ಕಾರ ಅನುಮತಿ ನೀಡಿದೆ. ಕಾಮಗಾರಿಗೆ ಅಗತ್ಯವಿರುವ ಮಣ್ಣು ಬಯಸಿ ಅರ್ಜಿ ಸಲ್ಲಿಸಿದರೆ ಅಮೃತ್ ಸರೋವರ್ ಯೋಜನೆಯಲ್ಲಿ ಅವಕಾಶ ನೀಡಲು ಸರ್ಕಾರ ಕೂಡ ಸಿದ್ಧವಿದೆ.
ಶಿರಾ ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಕಾಮಗಾರಿಗಳಿಗೆ ಮಣ್ಣಿನ ಅವಶ್ಯಕತೆ ಹೆಚ್ಚಿದ್ದು, ಅಮೃತ್ ಸರೋವರ್ ಯೋಜನೆಯಡಿ ಕೆರೆಗಳನ್ನು ತ್ವರಿತವಾಗಿ ಗುರುತಿಸಿ ಅಧಿಸೂಚನೆ ಹೊರಡಿಸಬೇಕಿದೆ. ಜಿಲ್ಲಾಧಿಕಾರಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿ, ಕೆರೆಗಳಲ್ಲಿನ ಮಣ್ಣು ಹಾಗೂ ಹೂಳೆತ್ತುವ ಕುರಿತು ಪ್ರಸ್ತಾವನೆಗಳನ್ನು ತಕ್ಷಣ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದ್ದೇನೆ.