ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಮಹಾಶಿವಯೋಗಿಗಳ ಜಯಂತಿ ಹಿನ್ನೆಲೆ ಶ್ರೀಮಠದ ದಾಸೋಹಕ್ಕೆ ಕೋಲಾರ ಜಿಲ್ಲೆ ಮುಳುಬಾಗಿಲು ಸುತ್ತಮುತ್ತಲಿನ ಗ್ರಾಮಸ್ಥರು 25ಟನ್​ ನಷ್ಟು ದವಸಧಾನ್ಯ, ಅಕ್ಕಿ, ಬೆಲ್ಲವನ್ನು ದೇಣಿಗೆ ರೂಪದಲ್ಲಿ ಸಲ್ಲಿಸಿರುವುದು.  
ತುಮಕೂರು

ಮುಳುಬಾಗಿಲು ಭಕ್ತರಿಂದ 7 ಟನ್​ ಬೆಲ್ಲ ಕೊಡುಗೆ

ಪ್ರಮುಖ ಮುಖ್ಯಾಂಶಗಳು

  • ಸಿದ್ದಗಂಗೆ ದಾಸೋಹಕ್ಕೆ ಹರಿದು ಬಂದ ದವಸಧಾನ್ಯ
  • ಟನ್​ಗಟ್ಟಲೇ ತರಕಾರಿ
  • ಭಕ್ತರು, ಹಳೇ ವಿದ್ಯಾರ್ಥಿಗಳ ಗೌರವ ಸಮರ್ಪಣೆ
ವಿಶೇಷ ವರದಿ
ತುಮಕೂರು: ಸಿದ್ದಗಂಗೆಯ ದಾಸೋಹಕ್ಕೆ ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕಿನ ಭಕ್ತರು 7 ಟನ್​ ಬೆಲ್ಲವನ್ನು ಕೊಡುಗೆ ನೀಡಿದ್ದಾರೆ. ಶಿವಕುಮಾರ ಶ್ರೀಗಳ ಜನ್ಮದಿನ ಹಿನ್ನೆಲೆ ಕೋಲಾರ ಜಿಲ್ಲೆಯ ಮುಳುಬಾಗಿಲು, ಕಸಬಾ ಹೋಬಳಿಯ ಸುತ್ತಮುತ್ತಲಿನ ಗ್ರಾಮದ ಶ್ರೀಮಠದ ಹಳೇ ವಿದ್ಯಾರ್ಥಿಗಳು, ಭಕ್ತರು ಒಟ್ಟಾರೆ 25 ಟನ್​ ದವಸಧಾನ್ಯ, ತರಕಾರಿಯನ್ನು ಸಂಗ್ರಹಿಸಿ ದಾಸೋಹಕ್ಕೆ ದೇಣಿಗೆ ರೂಪದಲ್ಲಿ ನೀಡಿ ಭಕ್ತಿ ಸಮರ್ಪಣೆ ಮಾಡಿದ್ದಾರೆ.
ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಬದುಕು ರೂಪಿಸಿದ ತ್ರಿವಿಧ ದಾಸೋಹಿ ಪೂಜ್ಯ ಶಿವಕುಮಾರ ಮಹಾಶಿವಯೋಗಿಗಳು ಅಂದರೆ ಶ್ರೀಮಠದ ಹಳೇ ವಿದ್ಯಾರ್ಥಿಗಳ ಪಾಲಿಗೆ ನಡೆದಾಡುವ ದೇವರು ಕಂಡಷ್ಟೇ ಭಕ್ತಿ, ಪ್ರೀತಿ. ಆರಾಧ್ಯದೈವನಿಗೆ ಗುರುವಂದನೆ ಸಲ್ಲಿಸಲು ಅವರ ಜನ್ಮದಿನದಂದ ನಾಡಿನೆಲ್ಲಡೆಯಿಂದ ಹರಿದುಬರುವ ಭಕ್ತರಿಗೆ ಶ್ರೀಮಠದಲ್ಲಿ ದಿನವಿಡೀ ದಾಸೋಹ ವ್ಯವಸ್ಥೆ ಮಾಡಲಾಗಿರುತ್ತೆ. ಈ ಮಹಾ ದಾಸೋಹಕ್ಕೆ ಉಪು$್ಪ, ಉಪ್ಪಿನಕಾಯಿ, ತರಕಾರಿ, ಅಕ್ಕಿ, ಸಕ್ಕರೆ, ಬೆಲ್ಲವನ್ನು ನೀಡಿ ಭಕ್ತರು ಗೌರವ ಸಮರ್ಪಣೆಯನ್ನು ಮಾಡುತ್ತಾರೆ.
ಈ ಬಾರಿ ಮುಳುಬಾಗಿಲಿನ ಸುತ್ತಮುತ್ತಲಿನ ಕಳ್ಳೀಪುರ, ಗೊಲ್ಲಹಳ್ಳಿ, ರಾಮಸಂದ್ರ, ಉರುಟಿಅಗ್ರಹಾರ, ವೇಮಗಲ್ಲು, ಕೋಲಾರ ನಗರದ ಭಕ್ತರು 7ಟನ್​ ಬೆಲ್ಲ, 5 ಕ್ವಿಂಟಾಲ್​ ರವೆ, 5 ಕ್ವಿಂಟಾಲ್​ ಹೆಸರುಬೇಳೆ, 15 ಕ್ವಿಂಟಾಲ್​ ಉಪು$್ಪ, 50 ಕ್ವಿಂಟಾಲ್​ ಅಕ್ಕಿ, 30 ಕ್ವಿಂಟಾಲ್​ ರಾಗಿ ಹಾಗೂ ತರಕಾರಿ, ಇತರೆ ಪದಾರ್ಥಗಳು ಎಲ್ಲವೂ ಸೇರಿ 25 ಟನ್​ ನಷ್ಟು ದವಸಧಾನ್ಯ ಹಾಗೂ ಇತರೆ ಪದಾರ್ಥಗಳನ್ನು ದಾಸೋಹಕ್ಕೆ ನೀಡಿ ಶ್ರೀಮಠದೆಡೆಗೆ ಅಪಾರ ಭಕ್ತಿ, ಪ್ರೀತಿಯನ್ನು ಮೆರೆದಿದ್ದಾರೆ.
ಶ್ರೀಮಠದ ದಾಸೋಹಕ್ಕೆ ದೇಣಿಗೆ ರೂಪದಲ್ಲಿ ಭಕ್ತರು ನೀಡಿರುವ ದವಸಧಾನ್ಯ, ತರಕಾರಿಯನ್ನು ಸದ್ವಿನಿಯೋಗಿಸಲಾಗುವುದು. ಪರಮಾತ್ಮ ಕೃಪೆಯಿಂದ ಹಾಗೂ ಶ್ರೀ ಸಿದ್ದಗಂಗಾ ಗುರುಪರಂಪರೆಯು ನಿಮಗೆ ಹಾಗೂ ನಿಮ್ಮ ಸತ್ಕಾರ್ಯಕ್ಕೆ ಶ್ರಮಿಸಿದ ಎಲ್ಲಾ ಕುಟುಂಬವರ್ಗಕ್ಕೆ ಸನ್ಮಂಗಳ ಉಂಟುಮಾಡಲಿ.
ಶ್ರೀ ಸಿದ್ದಲಿಂಗ ಸ್ವಾಮೀಜಿ
ಅಧ್ಯಕ್ಷರು, ಸಿದ್ದಗಂಗಾಮಠ
ಟನ್​ಗಟ್ಟಲೆ ತರಕಾರಿ
ಮೈಸೂರು ಭಾಗದ ಭಕ್ತರು 2&3 ಟನ್​ ನಷ್ಟು ತರಕಾರಿ ಹಾಗೂಚಿಕ್ಕಬಳ್ಳಾಪುರ ಜಿಲ್ಲೆಯಿಂದಲು 4&5 ಟನ್​ ತರಕಾರಿಯನ್ನು ಶ್ರೀಮಠದ ದಾಸೋಹಕ್ಕೆ ಕಳುಹಿಸಿದ್ದಾರೆ. ಶ್ರೀಗಳ ಜನ್ಮದಿನ ಹಿನ್ನೆಲೆಯಲ್ಲಿ ದವಸ, ಧಾನ್ಯ, ಅಕ್ಕಿ, ಸಕ್ಕರೆಯನ್ನು ಭಕ್ತರು ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಾರೆ.