- ವಿದ್ಯುತ್ ಬಾಕಿ ಮೊತ್ತ 1.96 ಕೋ.ರೂ.,
- ವರ್ಷದ ಹಿಂದಿನ ಬಾಕಿ ಪಾವತಿಸದ ಸರ್ಕಾರ
- ಸಚಿವ ಎಂ.ಬಿ.ಪಾಟೀಲ್ ಬಿಲ್ ಪಾವತಿಸುವ ಭರವಸೆ
ತುಮಕೂರು: ಸಿದ್ದಗಂಗಾ ಮಠಕ್ಕೆ ಹೇಮಾವತಿ ನೀರು ಪೂರೈಸುವ ಹೊನ್ನೇನಹಳ್ಳಿ ಕೆರೆ ಪಂಪ್ಹೌಸ್ ವಿದ್ಯುತ್ ಬಿಲ್ ಅನ್ನು ಕೆಐಎಡಿಬಿ ವತಿಯಿಂದ ಪಾವತಿಸದ ಹಿನ್ನೆಲೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ವಿದ್ಯುತ್ ಬಿಲ್ ಪಾವತಿಸುವುದಾಗಿ ಭರವಸೆ ಕೊಟ್ಟಿದ್ದ ರಾಜ್ಯ ಸರ್ಕಾರವು ವರ್ಷವಾದರೂ ಪಾವತಿಸಿರಲಿಲ್ಲ.
ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಪೂರೈಸುವ ಪಂಪ್ ಹೌಸ್ ವಿದ್ಯುತ್ ಬಿಲ್ ಕಳೆದ ವರ್ಷದ ಬಾಕಿ 70 ಲಕ್ಷ ರೂ., ಪಾವತಿಸಿರಲಿಲ್ಲ. ಈ ಹಿನ್ನೆಲೆ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಆ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಬಿಲ್ ಪಾವತಿಸುವುದಾಗಿ ಭರವಸೆ ಕೊಟ್ಟಿದ್ದರು. ಕಳೆದ ವರ್ಷದ ಬಿಲ್ ಹಾಗೂ ಈ ವರ್ಷದ ವಿದ್ಯುತ್ ಬಿಲ್ ಸೇರಿದ್ದು ವಿದ್ಯುತ್ ಬಾಕಿ ಮೊತ್ತ 1.96 ಕೋ.ರೂ., ಬೆಳೆದಿತ್ತು!. ಇಷ್ಟೊಂದು ದೊಡ್ಡ ಮೊತ್ತದ ವಿದ್ಯುತ್ ಬಿಲ್ ಪಾವತಿಸದ ಪರಿಣಾಮ ಹೊನ್ನೇನಹಳ್ಳಿ ಪಂಪ್ ಹೌಸ್ ಸ್ತಬ್ದಗೊಂಡಿದ್ದು ಸಿದ್ದಗಂಗಾಮಠಕ್ಕೆ ನೀರು ಪೂರೈಕೆ ಬಂದ್ ಆಗಿತ್ತು.
ಕಳೆದ 6 ತಿಂಗಳಿಂದ ಹೊನ್ನೇನಳ್ಳಿಯಿಂದ ನೀರು ಬಾರದ ಕಾರಣ ದೇವರಾಯಪಟ್ಟಣ ಕೆರೆ ನೀರು ಪೂರೈಕೆ ಬಂದ್ ಆಗಿದೆ. ಹಾಗಾಗಿ, ದೇವರಾಯಪಟ್ಟಣ ಕೆರೆಯಿಂದ ಶ್ರೀಮಠಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಮಠಕ್ಕೆ ನೀರಿನ ಕೊರತೆ ಉದ್ಭವಿಸಲಿತ್ತು. ಫೆ.6 ರಿಂದ 20 ರವರೆಗು ಶ್ರೀಮಠದಲ್ಲಿ ಜಾತ್ರೆ ನಡೆಯಲಿದ್ದು ಈ ವೇಳೆ ಜನಜಾನುವಾರುಗಳಿಗೂ ನೀರಿನ ಅಭಾವ ಉಂಟಾಗುತ್ತಿತ್ತು. ಪ್ರತಿದಿನ 10 ಸಾವಿರ ವಿದಾರ್ಥಿಗಳ ಜತೆಗೆ ಪ್ರತಿನಿತ್ಯ ಸಾವಿರಾರು ಭಕ್ತರು ಮಠಕ್ಕೆ ಬರಲಿದ್ದು ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಇತ್ತು.
ಅರ್ಧಗಂಟೆಯಲ್ಲೇ ವಿದ್ಯುತ್ ಬಿಲ್ ಪಾವತಿ !
ವಿದ್ಯುತ್ ಬಿಲ್ ಪಾವತಿಸಿದ ಕಾರಣ ಸಿದ್ದಗಂಗಾಮಠಕ್ಕೆ ನೀರಿನ ವ್ಯತ್ಯಯ ಉಂಟಾಗಿದೆ ಎಂಬ ಸುದ್ದಿ ಖಾಸಗಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೆಐಎಡಿಬಿ ಅಧಿಕಾರಿಗಳು ಬಿಲ್ ಪಾವತಿಸಿದ್ದಾರೆ. ಕೇವಲ ಅರ್ಧ ಗಂಟೆಯಲ್ಲಿ ಬಿಲ್ ಪಾವತಿ ಮಾಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದು ಬರೋಬ್ಬರಿ 1 ಕೋಟಿ 96 ಲಕ್ಷ ರೂ., ಬಾಕಿ ಇದ್ದ ವಿದ್ಯುತ್ ಬಿಲ್ ಅನ್ನು ಆರ್ಟಿಜಿಎಸ್ ಮೂಲಕ ಗುರುವಾರ ಕೆಐಎಡಿಬಿ ಅಧಿಕಾರಿಗಳು ಪಾವತಿಸಿದ್ದಾರೆ.