ತುಮಕೂರಿನಲ್ಲಿರುವ ವಾಟರ್ ಟ್ಯಾಂಕ್
- 15 ಓವರ್ಹೆಡ್ ಟ್ಯಾಂಕ್ಗಳ ತುರ್ತು ಅಗತ್ಯ
- ಸರ್ವೇ, ವಿನ್ಯಾಸದಲ್ಲಿಯೇ ಪಾಲಿಕೆ ಕಾಲಹರಣ
- ಶೇ.20ರಷ್ಟು ಭಾಗದಲ್ಲಿ ಯುಜಿಡಿ ಸಂಪರ್ಕವಿಲ್ಲ
ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಜಲ ಸಂಗ್ರಹಗಾರ ಇಲ್ಲದಿರುವುದು ಕುಡಿಯುವ ನೀರು ಪೂರೈಕೆಗೂ ತೊಂದರೆಯನ್ನುಂಟುಮಾಡಿದೆ.
ಪ್ರಸ್ತುತ ತುಮಕೂರು ನಗರದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ವಾಸವಿದ್ದು 44 ಓವರ್ಹೆಡ್ ಟ್ಯಾಂಕ್ ಮಾತ್ರ ಲಭ್ಯವಿದೆ, ತುರ್ತಾಗಿ ಕನಿಷ್ಟ 15 ಟ್ಯಾಂಕ್ಗಳಾದರೂ ನಗರದಲ್ಲಿ ಅವಶ್ಯವಿದ್ದು ಓವರ್ಹೆಡ್ ಟ್ಯಾಂಕ್ ಹಾಗೂ ಏರು ಕೊಳವೆ ಮಾರ್ಗದ ಬಗ್ಗೆ ವಿಸತ ಅಂದಾಜು ಪಟ್ಟಿ ತಯಾರಿಸಲು ಬಾಕಿ ಪ್ರದೇಶಗಳಲ್ಲಿ ಸರ್ವೇ ನಡೆಸಿ ವಿನ್ಯಾಸ ಮಾಡಬೇಕಿದೆ.
ಸರ್ವೇ ಹಾಗೂ ಅಂದಾಜುಪಟ್ಟಿ ವಿನ್ಯಾಸ ತಯಾರಿಸಲು 22.80ಲಕ್ಷ ರೂ. ಗಳನ್ನು ತುಮಕೂರು ಮಹಾನಗರ ಪಾಲಿಕೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀಡಿ ವರ್ಷಗಳೇ ಕಳೆದರೂ ಪಾಲಿಕೆಗೆ ಕ್ರಿಯಾಯೋಜನೆ ತಯಾರಿಸಲು ಸಾಧ್ಯವೇ ಆಗಿಲ್ಲ, ನಗರದಲ್ಲಿ ನೀರಿನ ಬವಣೆ ನೀಗಿಸಲು 2026&27ನೇ ಸಾಲಿನಲ್ಲಿ ಪಾಲಿಕೆ ವತಿಯಿಂದಲೇ ನಿರ್ಮಿಸಲು ಉದ್ದೇಶಿಸಿರುವ ಎರಡು ಓವರ್ಹೆಡ್ ಟ್ಯಾಂಕ್ ತುರ್ತಾಗಿ ನಿರ್ಮಾಣ ಮಾಡಿ ಜನರಿಗೆ ನೀರು ಒದಗಿಸಬೇಕಿದೆ.
ಪ್ರಸ್ತುತ ತುಮಕೂರು ನಗರದಲ್ಲಿ 613ಕಿಮೀ ಉದ್ದದ ಒಳಚರಂಡಿ ಕೊಳವೆ ಮಾರ್ಗಗಳಿದ್ದು ನಗರದ ಹೊರವಲಯದ ಪ್ರದೇಶದ ಬಹಳಷ್ಟು ಮನೆಗಳಿಗೆ ಯುಜಿಡಿ ಸಂಪರ್ಕವೇ ಇಲ್ಲ. ಇಂತಹ ಮನೆಗಳು ಪ್ರತೇಕ ಸೋಕ್ಪಿಟ್ ನಿರ್ಮಿಸಿಕೊಂಡು ತ್ಯಾಜ್ಯವನ್ನು ಬಿಡುತ್ತಿದ್ದಾರೆ ಹಾಗಾಗಿ, ನಗರದಲ್ಲಿ ಇನ್ನೂ ಶೇ.20ರಷ್ಟು ಭಾಗದಲ್ಲಿ ಒಳಚರಂಡಿ ಸಂಪರ್ಕ ಕಲ್ಪಿಸಬೇಕಿದ್ದು ಇದಕ್ಕೆ ಅಗತ್ಯವಾಗಿರುವ 50ಕೋಟಿ ರೂ. ಅನುದಾನವನ್ನು ರಾಷ್ಟ್ರೀಯ ಹಸಿರುವ ನ್ಯಾಯ ಮಂಡಳಿ ಪಾಲಿಕೆಗೆ ಬಿಡುಗಡೆ ಮಾಡಿದೆ.
50 ಕೋಟಿ ರೂ. ಅನುದಾನದಲ್ಲಿ 28.51ಕಿಮೀ ಒಳಚರಂಡಿ ನಿರ್ಮಿಸುವ ಮೂಲಕ ಸುಮಾರು 4000 ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸುವ ಜತೆಗೆ ಭೀಮಸಂದ್ರದ 24.57 ಎಂಎಲ್ಡಿ ಸಾಮರ್ಥ್ಯದ ಎ್ಎಎಲ್ ಮಾದರಿ ಎಸ್ಟಿಪಿ ಟಕದ ಪುನಶ್ಚೇತನ ಕಾಮಗಾರಿಯ ಸಂಬಂಧಪಟ್ಟ ಸರ್ವೆ, ವಿನ್ಯಾಸ ಕೆಲಸದಲ್ಲಿಯೇ ಕಾಲಹರಣವಾಗುತ್ತಿದೆ.
ಒಳಚರಂಡಿ ನಿರ್ಮಾಣಕ್ಕೆ ಜಾಗದ ಸಮಸ್ಯೆ!
ಬಯಲು ಶೌಚಮುಕ್ತ ಜಿಲ್ಲೆ, ತುಮಕೂರು ಸ್ಮಾರ್ಟ್ಸಿಟಿ ಎಂದೆಲ್ಲಾ ಬೀಗುವ ನಡುವೆ ತುಮಕೂರು ಮಹಾನಗರದ ಶೇ.20ರಷ್ಟು ಪ್ರದೇಶದಲ್ಲಿ ಇಂದಿಗೂ ಯುಜಿಡಿ ಸಂಪರ್ಕವಿಲ್ಲ ಎಂಬುದನ್ನು ನಗಾಭಿವೃದ್ಧಿ ಇಲಾಖೆಯ ಅಂಕಿ, ಅಂಶಗಳೇ ಬಯಲು ಮಾಡುತ್ತಿವೆ. ನಗರದಲ್ಲಿ ಶೇ.100ರಷ್ಟು ಒಳಚರಂಡಿ ಸಂಪರ್ಕ ಸಾಧಿಸಲು 51 ಕಡೆಗಳಲ್ಲಿ ಜಾಗದ ಸಮಸ್ಯೆ ಎದುರಾಗಿದೆ.
ನಗರದ 51 ಜಾಗಗಳನ್ನು ಬ್ಲಾಕ್ಸ್ಪಾಟ್ಗಳಾಗಿ ಗುರುತಿಸಲಾಗಿದ್ದು ರಾಷ್ಟ್ರೀಯ ಹಸಿರುವ ನ್ಯಾಯ ಮಂಡಳಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಯಲ್ಲಿ 31 ಬ್ಲಾಕ್ಸ್ಪಾಟ್ಗಳನ್ನು ಸರಿಪಡಿಸಲು ಮುಂದಾಗಿದ್ದು 2026ರ ಅಂತ್ಯಕ್ಕೆ ಈ ಕಾಮಗಾರಿ ಪೂರ್ಣಗೊಳಿಸಿ, ಆ ಭಾಗದ ಎಲ್ಲಾ ಮನೆಗಳ ಮಲಿನ ನೀರನ್ನು ಯುಜಿಡಿಗೆ ಹರಿಸುವ ಭರವಸೆ ನೀಡಲಾಗಿದೆ.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಲ್ಲಿ ಪಾಲಿಕೆ ವ್ಯಾಪ್ತಿಯ 50ಕಿಮೀ ಉದ್ದದ ರಸ್ತೆಗಳ 100.06 ಚರಂಡಿ ಅಭಿವೃದ್ಧಿ ಕಾಮಗಾರಿ ಹಾಗೂ ಎಸ್ಸಿಪಿ, ಟಿಎಸ್ಪಿ ಅನುದಾನದಲ್ಲಿ 22.51ಕಿಮೀ ರಸ್ತೆ, 45.02ಕಿಮೀ ಚರಂಡಿ ಅಭಿವೃದ್ಧಿ ಕಾಮಗಾರಿಗಳೂ ಕುಂಟುತ್ತ ಸಾಗಿದ್ದು ನಗರವಾಸಿಗಳಿಗೆ ವಾಸಕ್ಕೆ ಯೋಗ್ಯ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ.
ತುಮಕೂರಿನಲ್ಲಿ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದ್ದು ಈಗಿರುವ ಮೂಲ ಸೌಕರ್ಯಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ, ಕುಡಿಯುವ ನೀರು, ಯುಜಿಡಿ, ಮಳೆ ನೀರಿನ ಚರಂಡಿ ಒದಗಿಸುವುದು ನಗರದ ಸುಸ್ಥಿರ ಅಭಿವೃದ್ಧಿಗೆ ಅನಿವಾರ್ಯವಾಗಿದೆ. 24/7 ಕುಡಿಯುವ ನೀರು ಯೋಜನೆ ಅನುಷ್ಟಾನವಾಗಲು ಮೈದಾಳ ಕೆರೆಯಿಂದ ತುಮಕೂರಿಗೆ 15 ಎಂಎಸ್ಡಿ ಕುಡಿಯುವ ನೀರಿನ ಸರಬರಾಜು ಮಾರ್ಗ ನಿರ್ಮಾಣ, ವಿದ್ಯಾನಗರದಲ್ಲಿ ಜಲಶುದ್ಧೀಕರಣ ಟಕ ನಿರ್ಮಾಣ, 15 ಓವರ್ಹೆಡ್ ಟ್ಯಾಂಕ್ ನಿರ್ಮಾಣ ಹಾಗೂ ಈಗಾಗಲೇ ಗುರುತಿಸಿರುವ 51 ಬ್ಲಾಕ್ ಸ್ಪಾಟ್ಗಳಲ್ಲಿ ಒಳಚರಂಡಿ ವ್ಯವಸ್ಥೆ ಜತೆಗೆ ಮಳೆ ನೀರಿನ ಚರಂಡಿ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ತುಮಕೂರಿಗೆ ಹೇಮಾವತಿಯಿಂದ 1.135ಟಿಎಂಸಿ ನೀರು ಹಂಚಿಕೆಯಾಗಿದ್ದು 35 ವಾರ್ಡ್ಗಳಲ್ಲಿಯೂ ಪಾಲಿಕೆ ವತಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಒಬ್ಬರಿಗೆ ಪ್ರತಿದಿನ 135ಲೀ. ನೀರು ಒದಗಿಸಲಾಗುತ್ತಿದೆ. 2021ರ ಜನಗಣತಿಯಂತೆ ತುಮಕೂರಿನಲ್ಲಿ 3.50ಲಕ್ಷ ಜನಸಂಖ್ಯೆ ಅಂದಾಜಿಸಿ 30 ಎಂಎಲ್ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗುವುದು, ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ ನಿಧಿ ಬಳಸಿಕೊಂಡು ಮಳೆ ನೀರು ಚರಂಡಿಗಳ ಡಿಸೀಲ್ಟಿಂಗ್ ಹಾಗೂ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು.