ತುಮಕೂರಿನ ಸಿದ್ಧಾರ್ಥನಗರದಲ್ಲಿ ಶಿಕ್ಷಣ ಭೀಷ್ಮ ಡಾ. ಎಚ್.ಎಂ. ಗಂಗಾಧರಯ್ಯ, ಧರ್ಮಪತ್ನಿ ಗಂಗಮಾಳಮ್ಮ ಹಾಗೂ ಡಾ. ಜಿ. ಶಿವಪ್ರಸಾದ್ ಅವರ ಪುಣ್ಯಸಂಸ್ಮರಣೆ ಅಂಗವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಪತ್ನಿ ಕನ್ನಿಕಾಪರಮೇಶ್ವರಿ ವಿಶೇಷ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು.
- ಶಿಕ್ಷಣ ಭೀಷ್ಮ ಡಾ. ಎಚ್.ಎಂ. ಗಂಗಾಧರಯ್ಯ ಪುಣ್ಯಾನುಮೋದನಾ
- ತುಮಕೂರು ಬಿಜಿಎಸ್ ವೃತ್ತದಲ್ಲಿ ಅನ್ನಸಂತರ್ಪಣೆ
- ಗೃಹ ಸಚಿವ ಡಾ.ಜಿ.ಪರಮೇಶ್ವರ ದಂಪತಿ ಭಾಗಿ
ತುಮಕೂರು: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಶಿಕ್ಷಣ ಭೀಷ್ಮ ಡಾ. ಎಚ್.ಎಂ. ಗಂಗಾಧರಯ್ಯ ಅವರ 30ನೇ ಹಾಗೂ ಧರ್ಮಪತ್ನಿ ಗಂಗಮಾಳಮ್ಮನವರ 22ನೇ ಹಾಗೂ ಡಾ. ಜಿ. ಶಿವಪ್ರಸಾದ್ ಅವರ 8ನೇ ಪುಣ್ಯಸಂಸ್ಮರಣೆಯನ್ನು ಸಿದ್ದಾರ್ಥನಗರ (ಗೊಲ್ಲಹಳ್ಳಿ)ದಲ್ಲಿ ಶುಕ್ರವಾರ ನೆರವೇರಿಸಲಾಯಿತು.
ಬಿಜಾಪುರದ ಬೌದ್ಧ ಭಿಕ್ಕು ಬಂತೇಜಿ ಮಹಾಸಂಘದ ಬೌದ್ಧ ಬಿಕ್ಕುಗಳ ಸಮ್ಮುಖದಲ್ಲಿ ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಗಧರಯ್ಯ ಹಾಗೂ ಧರ್ಮಪತ್ನಿ ಗಂಗಮಾಳಮ್ಮ ಹಾಗೂ ಡಾ.ಶಿವಪ್ರಸಾದ್ ಪುಣ್ಯಾನುಮೋದನಾ ಸ್ಮರಣೆ ಮತ್ತು ನುಡಿ ನಮನವನ್ನು ಸಲ್ಲಿಸಲಾಯಿತು. ಈ ವೇಳೆ ಗೌರವ ಪೂರ್ವಕವಾಗಿ ಒಂದು ನಿಮಿಷಗಳ ಕಾಲ ಮೌನ ಆಚರಿಸಿ, ಪ್ರಾರ್ಥಿಸಲಾಯಿತು.
ಹಿರಿಯರ ಸಮಾಧಿಗೆ ಧಾರ್ಮಿಕ ಕೈಂಕರ್ಯಗಳನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಆದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಕನ್ನಿಕಾಪರಮೇಶ್ವರಿ ಕೈಗೊಂಡರು.
ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಚ್.ಕೆ.ಕುಮಾರಸ್ವಾಮಿ, ಆಡಳಿತಾಧಿಕಾರಿ ನಂಜುಂಡಪ್ಪ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಸಾಹೇ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಶ್ರೀ ಸಿದ್ಧಾರ್ಥ ವೈದ್ಯಕಿಯ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪ್ರಭಾಕರ್, ಪರೀಕ್ಷಾಂಗ ನಿಯಂತ್ರಕ ಡಾ. ಗುರುಶಂಕರ್ ಹಾಗೂ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್.ರವಿಪ್ರಕಾಶ್ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಬೋಧಕ-ಬೋಧಕೇತರ ವರ್ಗ ಸೇರಿದಂತೆ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು, ಅಧ್ಯಾಪಕರು ಮತ್ತಿತರರು ಭಾಗವಹಿಸಿದ್ದರು.
ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಧರಯ್ಯ,ಗಂಗಮಾಳಮ್ಮಹಾಗು ಡಾ.ಜಿ.ಶಿವಪ್ರಸಾದ್ ಪುಣ್ಯಸಂಸ್ಮರಣೆ ಅಂಗವಾಗಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಮಿನರ್ವ ಮಂಜುನಾಥ್ ( ಕಟ್ಟೆ ಮಂಜು) ನೇತೃತ್ವದಲ್ಲಿ ತುಮಕೂರಿನ ಬಿಜಿಎಸ್ ವೃತ್ತದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಎಜುಕೇಷನ್ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಡಾ.ಸಂಜೀವಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಪಾಲಿಕೆ ಮಾಜಿ ವಿರೋಧಪಕ್ಷದ ನಾಯಕ ಕೆ.ಕುಮಾರ್, ಹರ್ತಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಸ್.ದಿನೇಶ್, ಗ್ರಾಮಾಂತರ ಕಾಂಗ್ರೆಸ್ ಮುಖಂಡರಾದ ಕೆಂಪಣ್ಣ, ನ್ಯಾತೇಗೌಡ, ಪೈಲ್ವಾನ್ ಮಹೇಶ್, ಮಿನರ್ವ ಮಂಜುನಾಥ್ ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಮಿನರ್ವ ಮಂಜುನಾಥ್, ಶಿಕ್ಷಣ ಭೀಷ ಡಾ.ಎಚ್.ಎಂ.ಗಂಗಾಧರಯ್ಯ ಅವರ ಸ್ಮರಣಾರ್ಥ ಅನ್ನದಾನ ಮಾಡಬೇಕೆಂಬುದು ನನ್ನ ಬಹುದಿನದ ಕನಸು. ನಾನು ಓದಿದ್ದು ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ,ಸಿದ್ದಾರ್ಥ ವಿದ್ಯಾರ್ಥಿನಿಲಯದಲ್ಲಿ ಅನ್ನ ತಿಂದು. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಜೀವನಕ್ಕಾಗಿ ಹೊಟೇಲ್ ಉದ್ಯಮ ನಡೆಸುತ್ತಿದ್ದು, ನನ್ನ ಕೈಲಾದ ಸೇವೆಯನ್ನು ಅನ್ನ ಸಂತರ್ಪಣೆ ಮೂಲಕ ಮಾಡಬೇಕೆಂಬ ಕನಸಿಂದು ನನಸಾಗಿದೆ. ಇದನ್ನು ಪ್ರತಿವರ್ಷ ಮುಂದುವರೆಸಿಕೊಂಡು ಹೋಗುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.