ಶಿರಾ: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗುರುಪುರ ಸಮೀಪ ಕುರಿ ಮೇಯಿಸಲು ತೆರಳಿದ್ದ ಶಿರಾ ಭಾಗದ ಕುರಿಗಾಹಿಗಳಾದ ಗೋವಿಂದರಾಜು ಮತ್ತು ಜುಂಜಣ್ಣ ಅವರ ಮೇಲೆ ದುಷ್ಕರ್ಮಿಗಳು ನಾಡಬಂದೂಕಿನಿಂದ ಗುಂಡಿನ ದಾಳಿ ನಡೆಸಿ, ಕುರಿಗಳನ್ನು ಕಳವು ಮಾಡಿದ್ದಾರೆ.
ಗಾಯಗೊಂಡ ಕುರಿಗಾಹಿಗಳು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳುಗಳನ್ನು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಭೇಟಿ ಮಾಡಿ, ಸಮರ್ಪಕ ಹಾಗೂ ತುರ್ತು ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿದರು. ಈ ವೇಳೆ ಆಸ್ಪತ್ರೆಯ ಆರ್ಎಂಒ ಡಾ. ನಯಾಜ್ ಹಾಗೂ ವೈದ್ಯ ಡಾ. ವಿನೋದ್ ಅವರೊಂದಿಗೆ ಚರ್ಚಿಸಿ, ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹುಣಸೂರು ವೃತ್ತ ನಿರೀಕ್ಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ರಾಜೇಶ್ ಗೌಡ, ದಾಳಿಗೆ ಕಾರಣರಾದವರನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಿ, ಕುರಿಗಾಹಿಗಳಿಗೆ ತಕ್ಷಣವೇ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಗಾಯಾಳುಗಳಿಗೆ ತಕ್ಷಣ ಸೂಕ್ತ ಪರಿಹಾರ ಘೋಷಿಸಬೇಕು. ರಾಜ್ಯದ ವಿವಿಧ ಜಿಲ್ಲೆಗಳಿಗೆ ವಲಸೆ ಹೋಗುವ ಕುರಿಗಾಹಿಗಳ ಜೀವ, ಆಸ್ತಿ ಮತ್ತು ಜೀವನೋಪಾಯದ ರಕ್ಷಣೆಗೆ ಪೊಲೀಸ್ ಇಲಾಖೆ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ದುಷ್ಕರ್ಮಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಡಾ. ರಾಜೇಶ್ ಗೌಡ ಸರ್ಕಾರಕ್ಕೆ ಒತ್ತಾಯಿಸದರು.