ತುಮಕೂರಿನಲ್ಲಿ ನಡೆದ ರಾಷ್ಟ್ರೀಯ ಖೋ ಖೋ ಚಾಂಪಿಯನ್ಶಿಪ್ನ ಪ್ರಥಮ ಆವೃತ್ತಿಯಲ್ಲಿ ಗೆದ್ದ ಆತಿಥೇಯ ಕರ್ನಾಟಕ ಪುರುಷರ ತಂಡಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಚಾಂಪಿಯನ್ ಪ್ರಶಸ್ತಿ ಪ್ರದಾನ ಮಾಡಿದರು. ತಹಸೀಲ್ದಾರ್ ರಾಜೇಶ್ವರ್, ಪಂದ್ಯಾವಳಿ ಸಂಟನೆಯ ಚಿನ್ನಮೂರ್ತಿ, ಶಿವಮೂರ್ತಿ, ಸುರೇಶ್ ಶರ್ಮ, ನರಸಿಂಹರಾಜು, ಗುರುಪ್ರಸಾದ್ ಮತ್ತಿತರರು ಇದ್ದರು.
- ಮಹಿಳೆಯರ ವಿಭಾಗದಲ್ಲಿ ತಮಿಳುನಾಡಿಗೆ ಪ್ರಶಸ್ತಿ
- ರಾಷ್ಟ್ರೀಯ ಖೋ ಖೋ ಚಾಂಪಿಯನ್ಶಿಪ್ಗೆ ತೆರೆ
- ಖೋ ಖೋ ಇಂಡಿಯಾ
ತುಮಕೂರು: ಆತಿಥೇಯ ಕರ್ನಾಟಕ ತಂಡವು ರಾಷ್ಟ್ರೀಯ ಖೋ ಖೋ ಚಾಂಪಿಯನ್ಶಿಪ್ ಪುರುಷರ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿತು.
ತುಮಕೂರು ವಿವಿ ಅಂಗಳದಲ್ಲಿ ಖೋ ಖೋ ಇಂಡಿಯಾ ವತಿಯಿಂದ ಕರ್ನಾಟಕ ಅಮೆಚೂರು ಖೋ ಖೋ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಹಿರಿಯರ ರಾಷ್ಟ್ರೀಯ ಖೋ ಖೋ ಚಾಂಪಿಯನ್ಶಿಪ್ನಲ್ಲಿ ಮಂಗಳವಾರ ಪ್ರಶಸ್ತಿ ಸುತ್ತಿನ ಅಂತಿಮ ಹಣಾಹಣಿಯಲ್ಲಿ ಕರ್ನಾಟಕ ತಂಡವು ರೋಚಕ ಗೆಲುವು ಸಾಧಿಸಿ ಪ್ರಥಮ ಆವೃತ್ತಿಯ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡವು 14-13 ಅಂಕಗಳ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಹೋರಾಟದಲ್ಲಿ ತಮಿಳುನಾಡು ವಿರುದ್ಧ ವಿರೋಚಿತ ಗೆಲುವು ಸಾಧಿಸಿ ಪ್ರಥಮ ಬಹುಮಾನ ಗೆದ್ದುಕೊಂಡಿತು. ಕರ್ನಾಟಕ ಪರ ಮೌನೇಶ್ (2 ನಿ, 30 ಸೆ., ಹಾಗೂ 5 ಅಂಕ) ಅದ್ಭುತ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಭೂಮಿಕೆ ನಿಭಾಯಿಸಿದರು. ಶಿವಪ್ಪ ಸಹ ಉತ್ತಮ ನಿರ್ವಹಣೆ ತೋರಿ ತಂಡದ ಗೆಲುವಿಗೆ ಸಹಕಾರಿಯಾಗಿ ನಿಂತರು. ತಮಿಳುನಾಡು ತಂಡದ ಪರ ಆರ್.ಶಿವ ಎರಡು ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದರು.
ತಮಿಳುನಾಡಿಗೆ ಪ್ರಶಸ್ತಿ: ಇದಕ್ಕು ಮುನ್ನ ಮಹಿಳೆಯರ ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವು 8-6 ಅಂಕಗಳಿಂದ ಪಂಜಾಬ್ ವಿರುದ್ಧ ಜಯಗಳಿಸಿ ಪ್ರಶಸ್ತಿಗೆ ಮುತ್ತಿಕ್ಕಿತು. ತಮಿಳುನಾಡ ಪರ ಪದ್ಮ ಮೊದಲ ಇನ್ನಿಂಗ್ಸ್ನಲ್ಲಿ 3 ನಿಮಿಷ, 2ನೇ ಇನ್ನಿಂಗ್ಸ್ನಲ್ಲಿ 2 ನಿ., 50 ಸೆಕೆಂಡ್ ಆಡಿ, 1 ಅಂಕಗಳಿಸಿದರು. ಮುಹಿಲರಸಿ (3 ನಿಮಿಷ , 1.40 ನಿ., ಹಾಗೂ 2 ಅಂಕ) ಉತ್ತಮ ನಿರ್ವಹಣೆ ತೋರಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಪುರುಷರ ವಿಭಾಗದಲ್ಲಿ ಟೂರ್ನಿಯುದ್ದಕ್ಕು ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಮೌನೇಶ್ ಶ್ರೇಷ್ಠ ಆಲ್ರೌಂಡರ್ ಪ್ರಶಸ್ತಿ ಪಡೆದರು. ಒರಿಸ್ಸಾ ತಂಡದ ಮೌನ ಬೆಹೆರಾ ಉತ್ತಮ ಅಟ್ಯಾಕರ್, ತಮಿಳುನಾಡಿನ ಆರ್.ಶಿವ ಉತ್ತಮ ಡಿೆಂಡರ್ ಪ್ರಶಸ್ತಿಗೆ ಭಾಜನರಾದರು.
ಮಹಿಳೆಯರ ವಿಭಾಗದಲ್ಲಿ ಪಂಜಾಬ್ನ ಖುಷ್ಪ್ರೀತ್ ಕೌರ್ ಶ್ರೇಷ್ಠ ಆಲ್ರೌಂಡರ್ ಪ್ರಶಸ್ತಿ ಗೆದ್ದುಕೊಂಡರು. ಕರ್ನಾಟಕದ ವೈ.ಸಾಹಿತ್ಯ ಉತ್ತಮ ಅಟ್ಯಾಕರ್ ಹಾಗೂ ತಮಿಳುನಾಡಿನ ಎಸ್.ತಾಮರೈ ಉತ್ತಮ ಡಿೆಂಡರ್ ಪ್ರಶಸ್ತಿ ಪಡೆದುಕೊಂಡರು.