ಪಂಜಾಬ್-ಚತ್ತೀಸಘಡ ವಿರುದ್ಧ ಸೆಣಸಾಟ.
- ರಾಷ್ಟ್ರೀಯ ಖೋ ಖೋ ಚಾಂಪಿಯನ್ಶಿಪ್ಗೆ ಚಾಲನೆ
- ತುಮಕೂರು ವಿವಿ ಅಂಗಳದಲ್ಲಿ ಪಂದ್ಯಾವಳಿ
- ಉತ್ತರಾಖಂಡ್ ವಿರುದ್ಧ ಜಯ
ತುಮಕೂರು: ಆತಿಥೇಯ ಕರ್ನಾಟಕ ಪುರುಷರ ತಂಡ ರಾಷ್ಟ್ರೀಯ ಖೋ ಖೋ ಚಾಂಪಿಯನ್ಶಿಪ್ನಲ್ಲಿ ಶುಭಾರಂಭ ಮಾಡಿತು. ಜಿ ಗುಂಪಿನಲ್ಲಿ ಕರ್ನಾಟಕ ತಂಡವು 11-06 ಅಂಕಗಳ ಅಂತರದಿಂದ ಉತ್ತರಾಖಂಡ್ ತಂಡವನ್ನು ಮಣಿಸಿ ಲೀಗ್ ಪಂದ್ಯಾವಳಿ ಮೊಲದ ಪಂದ್ಯದಲ್ಲಿ ಗೆಲುವು ಸಾಧಿಸಿತು.
ತುಮಕೂರು ವಿಶ್ವವಿದ್ಯಾಲಯದ ಮಣ್ಣಿನ ಅಂಕಣದಲ್ಲಿ ಖೋ ಖೋ ಇಂಡಿಯಾ ವತಿಯಿಂದ ಆಯೋಜಿಸಿರುವ ಪುರುಷರ ಹಾಗೂ ಮಹಿಳೆಯರ ರಾಷ್ಟ್ರೀಯ ಖೋ ಖೋ ಚಾಂಪಿಯನ್ಷಿಪ್ ಪಂದ್ಯಾವಳಿಯ ಲೀಗ್ ಗುಂಪಿನ ಆರಂಭಿಕ ಪಂದ್ಯದಲ್ಲಿ ಆತಿಥೇಯ ಕರ್ನಾಟಕ, ಒರಿಸ್ಸಾ, ಚಂಡೀಘಡ, ಪಂಜಾಬ್ ತಂಡಗಳು ಪುರುಷರ ವಿಭಾಗದಲ್ಲಿ ಶುಭಾರಂಭ ಮಾಡಿದರು.
ಕರ್ನಾಟಕ ತಂಡವು 11-06 ಅಂಕಗಳ ಅಂತರದಿಂದ ಉತ್ತರಾಖಂಡ್ದ ವಿರುದ್ಧ ಜಯಗಳಿಸಿತು. ಕರ್ನಾಟಕ ಪರ ಮೌನೇಶ್, ಆಕಾಶ್ ಉತ್ತಮ ಆಟದ ಪ್ರದರ್ಶನ ನೀಡಿದರು. ಮಲ್ಲಿಕಾರ್ಜುನ್ 3 ಔಟ್ಗಳನ್ನು ಪಡೆದರು. ಉತ್ತರಾಖಂಡ್ದ ಪರ ವನಿಷ್ ಕುಮಾರ್ 4 ಔಟ್ಗಳನ್ನು ಪಡೆದರು.
ಇನ್ನುಳಿದಂತೆ ಒರಿಸ್ಸಾ ತಂಡ 17-14 ರಿಂದ ಹರ್ಯಾಣ ವಿರುದ್ಧ , ಚಂಡೀಘಡ 20-12 ರಿಂದ ಮಧ್ಯಭಾರತ್, ಪಂಜಾಬ್ ತಂಡ 17-15 ರಿಂದ ಚತ್ತೀಸ್ಘಡದ ವಿರುದ್ಧ ಜಯಗಳಿಸಿ ಶುಭಾರಂಭ ಮಾಡಿದವು.
ಮಹಿಳೆಯರ ವಿಭಾಗದಲ್ಲಿ ಪಂಜಾಬ್ ತಂಡ 15-02 ಅಂಕಗಳ ಅಂತರದಿಂದ ದೆಹಲಿ ವಿರುದ್ಧ ಭರ್ಜರಿ ಜಯದಾಖಲಿಸಿತು. ಹಿಮಾಚಲ ತಂಡ 15-12 ರಿಂದ ಮಧ್ಯಭಾರತ್ ವಿರುದ್ಧ, ಚಂಡೀಘಡದ 13-07 ಅಂಕಗಳಿಂದ ಪಾಂಡಿಚೇರಿ ವಿರುದ್ಧ, ಮಹಾರಾಷ್ಟ್ರ ತಂಡ 11-03 ಅಂತರದಿಂದ ತೆಲಾಂಗಣ ವಿರುದ್ಧ ಜಯಗಳಿಸಿ ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿವೆ.
ಭಾನುವಾರವು ಲೀಗ್ ಪಂದ್ಯಗಳು ನಡೆಯಲಿದ್ದು 8 ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ನಂತರ ನಾಕೌಟ್ ಮಾದರಿ ಪ್ರವೇಶ ಪಡೆಯಲಿವೆ.