ಕೆಪಿಎಸ್​ ಶಾಲೆಗೆ ಕುಂಕಮಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹಿಸಿ ಎಐಡಿಎಸ್​ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ತುಮಕೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಪತ್ರ ನೀಡಲಾಯಿತು. ಲಕ್ಕಪ್ಪ, ನರಸಿಂಹರಾಜು ಮತ್ತಿತರರು ಇದ್ದರು.  
ತುಮಕೂರು

ಕುಂಕುಮನಹಳ್ಳಿ ಶಾಲೆ ವಿಲೀನ ಬೇಡ

ಪ್ರಮುಖ ಮುಖ್ಯಾಂಶಗಳು

  • ಎಐಡಿಎಸ್​ಒ ಹೋರಾಟ
  • ಸಾರ್ವಜನಿಕ ಶಿಕ್ಷಣ ಉಳಿಸಿ
  • ಕೆಪಿಎಸ್​ ಜತೆ ಶಾಲೆಗಳ ವಿಲೀನಕ್ಕೆ ವಿರೋಧ
ತುಮಕೂರು: ಕೆಪಿಎಸ್​ ಶಾಲೆಗೆ ಕುಂಕಮಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಪೋಷಕರು ಎಐಡಿಎಸ್​ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ)ಗೆ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಎಐಡಿಎಸ್​ಒ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ರಾಜ್ಯ ಸರ್ಕಾರವು ಬಜೆಟ್​ನಲ್ಲಿ ಘೋಷಿಸಿರುವಂತೆ ಜೂನ್​ನಿಂದಲೇ ಹೊಸ ಕೆಪಿಎಸ್​ ಶಾಲೆಗಳನ್ನು ಆರಂಭಿಸಲಾಗಿದೆ. ಈ ಶಾಲೆಗಳ 3ರಿಂದ 5 ಕಿ.ಮೀ., ವ್ಯಾಪ್ತಿಯ ಶಾಲೆಗಳನ್ನು ವಿಲೀನಗೊಳಿಸಲಾಗುವುದೆಂದು ಕಳೆದ ಅಕ್ಟೋಬರ್​ನಲ್ಲಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆ ನಮ್ಮೂರ ಶಾಲೆ ಉಳಿಯಬೇಕು ಮತ್ತು ಕೆಪಿಎಸ್​ ಯೋಜನೆ ರದ್ದಾಗಬೇಕೆಂದು ಆಗ್ರಹಿಸಿ ಎಐಡಿಎಸ್​ಒ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣಉಳಿಸಿ ಸಮಿತಿ ರಚಿಸಿಕೊಂಡು ಕಳೆದ 5 ತಿಂಗಳಿಂದ ಗ್ರಾಮಸ್ಥರು ಹಾಗೂ ಪೋಷಕರು ಹೋರಾಟ ನಡೆಸಿದೆ. ಗ್ರಾಮಮಟ್ಟದಿಂದ ಆರಂಭಿಸಿ ಜಿಲ್ಲಾಮಟ್ಟದ ಹಾಗೂ ರಾಜ್ಯಮಟ್ಟದವರೆಗೂ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಡೆಸಲಾಗಿದೆ. ಜನಗಳ ತೀವ್ರ ವಿರೋಧದ ನಡುವೆಯು ಜನ ವಿರೋಧಿ ಕೆಪಿಎಸ್​ ಮ್ಯಾಗ್ನೆಟ್​ ನೀತಿಯನ್ನು ಜಾರಿಗೆ ತರುತ್ತಿರುವುದು ಖಂಡನೀಯ ಎಂದರು.
ಕುಂಕುಮಹಳ್ಳಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ನಮ್ಮೂರ ಶಾಲೆ ನಮ್ಮೂರ ಮಕ್ಕಳ ಜ್ಞಾನದ ಮಂದಿರವಾಗಿದೆ. ನಮ್ಮೂರ ಶಾಲೆಯನ್ನು ಮುಚ್ಚಲು ಅಥವಾ ವಿಲೀನಗೊಳಿಸಲು ನಮ್ಮ ಒಪ್ಪಿಗೆಯಿಲ್ಲ. ನಮ್ಮೂರ ಶಾಲೆಗೆ ಸಮರ್ಪಕ ಸೌಲಭ್ಯ ಹಾಗೂ ಶಿಕ್ಷಕರನ್ನು ನೀಡಿ ಅಭಿವೃದ್ಧಿ ಪಡಿಸಬೇಕೆಂಬುದು ನಮ್ಮೆಲ್ಲರ ಒಕ್ಕೊರಲ ಆಗ್ರಹವಾಗಿದೆ. ಯಾವುದೇ ಕಾರಣಕ್ಕೂ ನಮ್ಮೂರ ಶಾಲೆ ಮುಚ್ಚಬಾರದೆಂದು ಆಗ್ರಹಿಸುತ್ತೇವೆ ಎಂದು ಹೇಳಿದರು.
ಬೇಡಿಕೆಗಳು
* ಕೆಪಿಎಸ್​ ಮ್ಯಾಗ್ನೆಟ್​ ಯೋಜನೆ ಹಿಂಪಡೆಯಿರಿ
* ನಮ್ಮೂರ ಶಾಲೆ ವಿಲೀನ ಕೈಬಿಡಿ.
* ನಮ್ಮೂರ ಶಾಲೆಗೆ ಸಮರ್ಪಕ ಸೌಲಭ್ಯ ನೀಡಿ ಬಲಪಡಿಸಿ.
* ಕನ್ನಡ ಮಾಧ್ಯಮವನ್ನು ಉಳಿಸಿ. ಇಂಗ್ಲಿಷ್​ ಮಾಧ್ಯಮ್ಕಾಗಿ ಪ್ರತ್ಯೇಕ ಶಿಕ್ಷಕರ ನೇಮಕ ಮಾಡಿಕೊಳ್ಳಿ.