ತುಮಕೂರು ಜಿಲ್ಲಾ ಸಹಕಾರ ಯೂನಿಯನ್​, ರಾಜ್ಯ ಸಹಕಾರ ಮಹಾಮಂಡಳ ಸಹಯೋಗದಲ್ಲಿ ಆಯೋಜಿಸಿದ್ದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 7 ಹಿರಿಯ ಸಹಕಾರಿಗಳಿಗೆ ಮಾಜಿ ಸಚಿವ ಕೆ.ಎನ್​.ರಾಜಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಎಚ್​.ವಿ.ವೆಂಕಟೇಶ್​, ಜಿ.ಬಿ.ಜ್ಯೋತಿಗಣೇಶ್​, ಎನ್​.ಗಂಗಣ್ಣ, ಬಿ.ಜಿ..ವೆಂಕಟೇಗೌಡ, ಜಿ.ಎಸ್​.ರಮಣರೆಡ್ಡಿ, ಕೆ.ಎಸ್​.ನವೀನ್​, ಎಸ್​.ಆರ್​.ಗೌಡ, ಸಿ.ವಿ.ಮಹಲಿಂಗಯ್ಯ ಮತ್ತಿತರರು ಇದ್ದರು.  
ತುಮಕೂರು

ಋಣಮುಕ್ತ ಯೋಜನೆ ಮರು ಜಾರಿ

ಪ್ರಮುಖ ಮುಖ್ಯಾಂಶಗಳು

  • ಡಿಸಿಸಿ ಬ್ಯಾಂಕ್​ ಅಧ್ಯಕ್ಷ, ಮಾಜಿ ಸಚಿವ ಕೆ.ಎನ್​.ರಾಜಣ್ಣ
  • ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
  • ಪಕ್ಷಾತೀತ, ಜಾತ್ಯಾತೀತ ಸಹಕಾರಿ ಆಂದೋಲನ
ತುಮಕೂರು: ಡಿಸಿಸಿ ಬ್ಯಾಂಕ್​ನಲ್ಲಿ ಮೃತ ರೈತರ ಸಾಲಮನ್ನಾ ಋಣಮುಕ್ತ ಯೋಜನೆಯನ್ನು ಮರು ಜಾರಿಗೊಳಿಸಿ 25 ಸಾವಿರ ರೂ.,ವರೆಗೆ ಆ ಕುಟುಂಬದ ಸಾಲ ಮನ್ನಾ ಮಾಡಲಾಗುವುದು ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷರು ಆದ ಮಾಜಿ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಹೇಳಿದರು.
ನಗರದ ಗುಬ್ಬೀವಿರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ಜಿಲ್ಲಾ ಸಹಕಾರ ಯೂನಿಯನ್​, ರಾಜ್ಯ ಸಹಕಾರ ಮಹಾಮಂಡಳ ಸಹಯೋಗದಲ್ಲಿ ಆಯೋಜಿಸಿದ್ದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಈ ಹಿಂದೆ ಋಣಮುಕ್ತ ಯೋಜನೆಯಡಿ ಮೃತ ರೈತರ ಕುಟುಂಬಕ್ಕೆ ಹೊರಯಾಗದಂತೆ ಸುಮಾರು 44 ಕೋಟಿ ರೂ.,ಗಳ ಸಾಲಮನ್ನಾ ಮಾಡಲಾಗಿತ್ತು.ಈ ಬಾರಿ ಸಾವನ್ನಪ್ಪಿದ ರೈತ ಕುಟುಂಬದ 25 ಸಾವಿರ ರೂ.,ವರೆಗೆ ಸಾಲಮನ್ನಾ ಮಾಡಲು ಡಿಸಿಸಿ ಬ್ಯಾಂಕ್​ ನಿರ್ಧರಿಸಿದೆ. ಈ ತಿಂಗಳ ಅಂತ್ಯದವರೆಗೂ ಅರ್ಜಿ ಸಲ್ಲಿಸಬಹುದು ಎಂದರು.
ಸಾಲಮನ್ನಾದಂತಹ ಯೋಜನೆಗಳಿಂದ ಸಾಲ ಮರುಪಾವತಿ ವ್ಯವಸ್ಥೆಯೇ ಹಾಳಾಗಲಿದೆ. ಇದು ಸಹಕಾರಿ ಕ್ಷೇತ್ರದ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಎಚ್​.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಘೋಷಿಸಿದ್ದ ಐವತ್ತು ಸಾವಿರ ರೂ ಸಾಲದ ಸುಮಾರು 232 ಕೋಟಿ ರೂ ಇನ್ನು ಬಾಕಿ ಬರಬೇಕಿದೆ. ನಾನು ಸಚಿವನಾಗಿದ್ದರೆ ಅದನ್ನು ಬಿಡುಗಡೆಗೊಳಿಸಲು ವ್ಯವಸ್ಥೆ ಮಾಡುತ್ತಿದ್ದೆ. ಈ ಹಿಂದೆ ಸಿದ್ದರಾಮಯ್ಯ ಕಾಲದ ಸಾಲಮನ್ನಾ ಬಾಕಿಯನ್ನು ಸದನದಲ್ಲಿ ಚರ್ಚಿಸಿ ಅನುಮೋದನೆ ಪಡೆದು ಬಿಡುಗಡೆ ಮಾಡಿಸಿದ್ದೇ ಎಂದ ರಾಜಣ್ಣ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರಿ ಬ್ಯಾಂಕ್​, ಸಂ, ಸಂಸ್ಥೆಗಳಿಗೆ ಒಂದು ನೈಯಾ ಪೈಸೆ ಅನುದಾನ ಕೊಡದಿದ್ದರು ಅನಗತ್ಯವಾಗಿ ಸಹಕಾರಿ ಕ್ಷೇತ್ರಕ್ಕೆ ಕಿರುಕುಳ ನೀಡುತ್ತಿವೆ. ಇದು ತಪ್ಪಬೇಕು. ನಾನು ಮುಂದೆ ವಿಧಾನಸಭಾ ಚುನಾವಣೆಗೆ ನಿಲ್ಲುತ್ತೆನೋ ಇಲ್ಲವೋ ಗೊತ್ತಿಲ್ಲ. ಆದರೆ, ಸಕ್ರಿಯವಾಗಿ ಸಹಕಾರಿ ಆಂದೋಲನದಲ್ಲಿ ತೊಡಗಿಕೊಳ್ಳುತ್ತೇನೆ. ಸಹಕಾರಿ ಆಂದೋಲನ ಪಾತೀತ, ಜಾತ್ಯಾತಿತವಾಗಿರಬೇಕು. ಕಟ್ಟಕಡೆಯ ವ್ಯಕ್ತಿಗು ಇದರ ನೆರವನ್ನು ತಲುಪಿಸಬೇಕಿದೆ ಎಂದರು.
ಜನರಿಗೆ ಹೆಚ್ಚಿನ ಸಹಕಾರ ಮಾಡಬಹುದು ಎಂಬುದಕ್ಕೆ ನಮ್ಮಲ್ಲರ ನಾಯಕರಾದ ಕೆ.ಎನ್​.ರಾಜಣ್ಣನವರೇ ಸಾಕ್ಷಿ. ನಾನು ಸಹ ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ಪಡೆದು ಸಿಐಟಿ ಸಂಸ್ಥೆಯನ್ನು ಕಟ್ಟಿದೆ.13 ಸಾವಿರಕ್ಕೂ ಹೆಚ್ಚು ಜನರು ಅಲ್ಲಿಂದ ಪದವಿ ಪಡೆದು ಹೊರ ಹೋಗಿದ್ದಾರೆ. ಸಹಕಾರಿ ಕ್ಷೇತ್ರ ರೈತರಿಗೆ ಪೂರಕವಾದ ಹೈನುಗಾರಿಕೆ ಸೇರಿದಂತೆ ಎಲ್ಲಾ ರೀತಿಯ ವ್ಯವಸಾಯಗಾರರಿಗೂ ಸಾಲ ಸೌಲಭ್ಯ ಒದಗಿಸುತ್ತಿದೆ. ಹಲವರು ಎಲೆಮೆರೆ ಕಾಯಿಯಂತೆ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಂತಹವರನ್ನು ಗುರುತಿಸಿ, ಸಹಕಾರ ರತ್ನ ಪ್ರಶಸ್ತಿ ನೀಡುತ್ತಿರುವುದು ನಮ್ಮಗೆಲ್ಲರಿಗೂ ಸಂತೋಷ ತಂದಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಹೇಳಿದರು.
ಸಹಕಾರ ರತ್ನ ಪ್ರಶಸ್ತಿ: ಜಿಲ್ಲೆಯ ಹಿರಿಯ ಸಹಕಾರಿಗಳಾದ ಟಿ.ಕೆ.ನಂಜುಂಡಪ್ಪ, ಡಿ.ನಾಗರಾಜಯ್ಯ, ಕೆ.ಎ.ದೇವರಾಜು, ಕೆ.ಎನ್​.ಗೋವಿಂದರಾಜು, ಎಂ.ಎಸ್​.ವಿಶ್ವನಾಥ್​, ಕೆ.ಜಿ.ಜಗದೀಶ್​ ಮತ್ತು ಹೆಚ್​.ಆರ್​.ರೇವಣ್ಣ ಅವರುಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್​.ಗಂಗಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ಎಲ್ಲರನ್ನು ಸ್ವಾಗತಿಸಿದರು. ಜಿಲ್ಲಾ ಸಹಕಾರ ಯೂನಿಯನ್​ ಅಧ್ಯಕ್ಷ ಬಿ.ಜಿ..ವೆಂಕಟೇಗೌಡ, ಡಿಸಿಸಿ ಬ್ಯಾಂಕ್​ ಹಿರಿಯ ಸಲಹೆಗಾರ ಜಿ.ಎಸ್​.ರಮಣರೆಡ್ಡಿ, ಸಹಕಾರ ಮಹಾಮಂಡಲದ ಎಂ.ಡಿ. ಕೆ.ಎಸ್​.ನವೀನ್​, ತುಮುಲ್​ ನಿರ್ದೇಶಕರಾದ ಎಸ್​.ಆರ್​.ಗೌಡ, ಸಿ.ವಿ.ಮಹಲಿಂಗಯ್ಯ, ಶಾಂತಲರಾಜಣ್ಣ, ಬಿ.ಜಿ.ಕೃಷ್ಣಪ್ಪ, ಡಿಸಿಸಿ ಸಿಇಒ ಜಂಗಮಪ್ಪ ಮತ್ತಿತರರು ಉಪಸ್ಥಿತರಿದ್ದರು.
ಶಿವಕುಮಾರ ಶ್ರೀಗಳ ನೆನದ ರಾಜಣ್ಣ
ಸಿದ್ದಗಂಗಾ ಮಠದಲ್ಲೇ ನಾನು ಓದಿದ್ದು. 1984ರಲ್ಲಿ ಸಹಕಾರಿ ಚುನಾವಣೆಯೊಂದರಲ್ಲಿ ಷಡಕ್ಷರಿ ವಿರುದ್ಧ ಸ್ಪರ್ಧಿಸಿದ್ದಾಗ ಆ ಸಮಾಜದ ಮುಖಂಡರು ಶಿವಕುಮಾರ ಶ್ರೀಗಳ ಮೂಲಕ ಅವರ ಸಂಸ್ಥೆಯ ನಿರ್ದೇಶಕರಗಳ ಮತ ಪಡೆಯಲು ಒತ್ತಡ ಹಾಕಿದ್ದಾಗ ಅಂದು ಶ್ರೀಗಳು ಆ ಮತಗಳನ್ನು ನನಗೆ ಕೊಡಿಸಿದ್ದನ್ನು ನೆನಪಿಸಿಕೊಂಡು ಸಿದ್ದಗಂಗೆಯ ಶಿವಕುಮಾರ ಶ್ರೀಗಳ ಜತೆ ಅಂತಹ ವ್ಯತ್ಯಾಸವೇನು ಇರಲಿಲ್ಲ ಎಂಬ ಸತ್ಯವನ್ನು ರಾಜಣ್ಣ ಬಿಚ್ಚಿಟ್ಟರು.