Revival of Purasamma lake 
ತುಮಕೂರು

ಪುರಸಮ್ಮನ ಕೆರೆಗೆ ಮರುಜೀವ

ಬುಕ್ಕಾಪಟ್ಟಣ: ಕೆರೆ&ಕುಂಟೆ ಬಾವಿಗಳು ಅಂತರ್ಜಲದ ಮೂಲಗಳಾಗಿವೆ. ಅವುಗಳ ಸದ್ಬಳಕೆ ಹಾಗೂ ಮೇಲ್ವಿಚಾರಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವಿಣ್​ ಕುಮಾರ್​ ತಿಳಿಸಿದರು.
ಹೋಬಳಿಯ ರಂಗನಾಥಪುರದ ಪುರಸಮ್ಮನ ಕೆರೆಯನ್ನು ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಅಡಿಯಲ್ಲಿ ಪುನಶ್ಚೇತನ ಮಾಡಿ ಹಾಗೂ ಹೂಳುತ್ತಿಸುವ ಕಾರ್ಯ ಮುಗಿಸಿ ಕೆರೆಯನ್ನು ಕೆರೆ ಸಮಿತಿ ಹಾಗೂ ಗ್ರಾಪಂಗೆ ಹಸ್ತಾಂತರಿಸಿ ಮಾತನಾಡಿ, ನಮ್ಮ ಹಿರಿಯರು ವೈಜ್ಞಾನಿಕ ವಿಧಾನಗಳ ಮೂಲಕ ನೀರನ್ನು ಸಂಗ್ರಹಿಸಿ ಅವುಗಳನ್ನು ಬಳಕೆ ಮಾಡುವ ಕೆಲಸ ಮಾಡುತ್ತಿದ್ದರು. ಕಾಲಕಾಲಕ್ಕೆ ಅದರ ಹೂಳೆತ್ತಿಸುವ ಮೂಲಕ ಕೆರೆಗಳ ನೀರು ಸಂಗ್ರಹ ಮಟ್ಟ ಹೆಚ್ಚಿಸಿ ಅಂತರ್ಜಲ ಅಭಿವೃದ್ಧಿಪಡಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವೆಲ್ಲವೂ ಸಹ ನಿಂತುಹೋಗಿದ್ದು, ಕೆರೆಗಳು ಮಲೀನಗೊಂಡಿವೆ ಹಾಗೂ ಹೂಳುಗಳು ತುಂಬಿಕೊಂಡು ಕೆರೆಗಳ ನೀರಿನ ಸಂಗ್ರಹಮಟ್ಟ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆರೆಯನ್ನು ಗ್ರಾಮಾಭಿವೃದ್ಧಿ ಯೋಜನೆಯಿಂದ 18 ಲಕ್ಷ ಹಾಗೂ ಗ್ರಾಮಸ್ಥರ ಸಹಕಾರದಿಂದ 18 ಲಕ್ಷ ಒಟ್ಟಾರೆ 36 ಲಕ್ಷ ರೂಪಾಯಿಗಳಲ್ಲಿ ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗಿದೆ ಎಂದರು.
ಶಿರಾ ವಲಯ ಮೇಲ್ವಿಚಾರಕಿ ಇಂದಿರಾ, ಬುಕ್ಕಾಪಟ್ಟಣ ಕಂದಾಯ ನಿರೀಕ್ಷಕ ಪವನ್​ ಕುಮಾರ್​, ಹೂವಿಲ್​ ದೊರೆ ಗ್ರಾಪಂ ಪಿಡಿಒ ಕನಕಪ್ಪ ಹನುಮಪ್ಪ ಮೇಲಸಕ್ರಿ, ಕೆರೆ ಸಮಿತಿ ಅಧ್ಯಕ್ಷ ರಂಗನಾಥಪ್ಪ, ಸೇವಾ ಪ್ರತಿನಿಧಿಗಳಾದ ನಾಗರಾಜು, ಲತಾ, ಕೆರೆ ಸಮಿತಿ ಪದಾಧಿಕಾರಿಗಳಾದ ಶಾಂತಕುಮಾರ್​, ಕುಮಾರ್​ ನಾಯ್ಕ, ರಾಜಣ್ಣ ಇದ್ದರು.