ಸೊಗಡುಶಿವಣ್ಣ 
ತುಮಕೂರು

ಹೇಮೆ ನೀರು ಬಿಡಲು ಸೊಗಡು ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಹೇಮಾವತಿ ಜಲಾಶಯದಿಂದ ನೀರು ಹರಿಸಿ
  • ಜಿಲ್ಲೆಯಲ್ಲಿ ಕುಡಿಯುವ ನೀರಿಗು ತತ್ವಾರ
  • 10 ದಿನ ಗಡುವು ನೀಡಿದ ಶಿವಣ್ಣ
ತುಮಕೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ತತ್ವಾರ ಎದುರಾಗಿರುವ ಹಿನ್ನೆಲೆ ತತ್​ಕ್ಷಣ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದಿಂದ ನೀರು ಹರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ಇನ್ನೂ 10 ದಿನಗೊಳಗೆ ನೀರು ಹರಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಎಚ್ಚರಿಸಿದರು.
ಹೇಮೆ ನೀರು ಹರಿಸಲು ಜಲಸಂಪನ್ಮೂಲ ಖಾತೆ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್​ಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ಇತ್ತೀಚೆಗೆ ತಾವು ನೀರಾವರಿ ತಜ್ಞರ ಜತೆ ಗೊರೂರು ಜಲಾಶಯಕ್ಕೆ ಭೇಟಿ ನೀಡಿದ್ದು, ಜಲಾಶಯದಲ್ಲಿ ಒಟ್ಟು 17.90 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ 5 ಟಿಎಂಸಿ ಡೆಡ್​ ಸ್ಟೋರೇಜ್​ ಬಿಟ್ಟು ಉಳಿದ 12 ಟಿಎಂಸಿ ನೀರು ಇದ್ದು ಜಿಲ್ಲೆಗೆ ಕುಡಿಯುವ ನೀರಿನ ಉದ್ದೇಶಕ್ಕೆ ಹರಿಸಬೇಕು ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಳೆ ಅಭಾವದ ಕಾರಣ ಜನ, ಜಾನುವಾರು, ಪ್ರಾಣಿಪಕ್ಷಿಗಳಿಗೂ ಕುಡಿಯುವ ನೀರಿನ ಸಮಸ್ಯೆಯಾಗಿದೆ. ತುಮಕೂರು ಶಾಖಾ ನಾಲೆ ಮುಖಾಂತರ ತುರ್ತಾಗಿ ಹೇಮಾವತಿ ನೀರು ಹರಿಸಿ ಪರಿಸ್ಥಿತಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಜಿಲ್ಲೆಗೆ 25.03 ಟಿಎಂಸಿ ಹೇಮೆ ನೀರು ಹಂಚಿಕೆಯಾಗಿದ್ದು ಈವರೆಗೆ ಕಳೆದ 18 ವರ್ಷಗಳಲ್ಲಿ ಒಮ್ಮೆಯು ಜಿಲ್ಲೆಯ ಪಾಲಿನ ಸಂಪೂರ್ಣ ನೀರು ಪಡೆಯಲಾಗಿಲ್ಲ. ಅಲ್ಲದೆ, ತುಮಕೂರು ನಾಲಾವಲಯದ ಒಂದೇಒಂದು ಎಕರೆ ಜಮೀನನ್ನು ಅಚ್ಚುಕಟ್ಟು ಪ್ರದೇಶವೆಂದು ಘೋಷಿಸಿಲ್ಲ, ಅಲ್ಲದೆ ಈ ಬಗ್ಗೆ ಗೆಜೆಟ್​ನಲ್ಲೂ ನೋಟಿಫಿಕೇಶನ್​ ಆಗಿಲ್ಲ ಎಂದು ಸೊಗಡು ಶಿವಣ್ಣ ಹೇಳಿದರು.
ಡಿಸಿ ಕಚೇರಿ ಮುಂದೆ ಪ್ರತಿಭಟನೆ: ಜಲಸಂಪನ್ಮೂಲ ಸಚಿವರು ಆದ ಡಿ.ಕೆ.ಶಿವಕುಮಾರ್​ಗೆ ಹೇಮೆ ನೀರು ಹರಿಸುವಂತೆ ಪತ್ರ ಬರೆದು ಒತ್ತಾಯಿಸಲಾಗಿದೆ. 10 ದಿನದೊಳಗೆ ಹೇಮೆ ನೀರು ಜಿಲ್ಲೆಗೆ ಹರಿಯದಿದ್ದರೆ ಹೋರಾಟ ಅನಿವಾರ್ಯ. ಸೊಗಡುಶಿವಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಪ್ರಭಾಕರ್​ ಮ್ಯಾಸನಾಯಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಕೆ.ಪಿ.ಮಹೇಶ್​ ಹಾಜರಿದ್ದರು.
ಎತ್ತಿನಹೊಳೆ ದಾರಿತಪ್ಪಿಸುವ ಹೇಳಿಕೆ
ಎತ್ತಿನಹೊಳೆ ಯೋಜನೆಯ ಮುಖ್ಯ ಇಂಜಿನಿಯರ್​ ಇತ್ತೀಚೆಗೆ ಕೆಲವು ಜನಪ್ರತಿನಿಧಿಗಳ ಜತೆ ತುಮಕೂರಿನಲ್ಲಿ ಸಭೆ ನಡೆಸಿ, 2026ರಲ್ಲಿ ಬಾಕಿ ಇರುವ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸಿ, ನಾಲೆಯಲ್ಲಿ ನೀರು ಹರಿಸುವುದಾಗಿ ಹೇಳಿಕೆ ಕೊಟ್ಟಿರುತ್ತಾರೆ. ಇದು ಸಾಧ್ಯವೇ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಕೇಂದ್ರದ ಅರಣ್ಯ ಇಲಾಖೆಯಿಂದ ಹಸಿರು ನಿಶಾನೆ ದೊರೆತಿದೆ ಅಷ್ಟೇ. ಇನ್ನೂ ಬೈರಗೊಂಡ್ಲುವಿನ ಬಳಿ ಬರ್​ ಡ್ಯಾಂನಿರ್ಮಾಣಕ್ಕೆ ಮೀನ ಮೇಷ ಎಣಿಸಲಾಗುತ್ತಿದೆ. ಈ ವರ್ಷದ ಕೊನೆಯಲ್ಲಿ ಎತ್ತಿನಹೊಳೆ ಯೋಜನೆಯ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ನೀರು ಹರಿಸುವ ಹೇಳಿಕೆ ನೀಡಿರುವುದು ಜನರನ್ನು ದಾರಿ ತಪ್ಪಿಸುವ ಹೇಳಿಕೆಯಾಗಿದೆ ಎಂದು ಶಿವಣ್ಣ ಆರೋಪಿಸಿದರು.