ತುಮಕೂರು ಸ್ಮಾರ್ಟ್ಸಿಟಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ನಡೆಸಿದರು. ಶುಭಕಲ್ಯಾಣ್, ಬಿ.ವಿ.ಅಶ್ವಿಜ ಇದ್ದರು.
- ಕುಡಿಯುವ ನೀರಿನ ಕುರಿತ ಪ್ರಗತಿ ಪರಿಶೀಲನಾ ಸಭೆ
- ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ
- ನೀರಿನ ಸಮಸ್ಯೆ ತಲೆದೋರದಂತೆ ಕ್ರಮವಹಿಸಿ
ತುಮಕೂರು: ಜಿಲ್ಲೆಯ ಕುಡಿಯುವ ನೀರಿಗೆ ಸಮಸ್ಯೆ ತಲೆದೋರಿರುವ 100 ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿದ್ದು ಈ ಹಳ್ಳಿಗಳಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಎದುರಾಗದಂತೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಸ್ಮಾರ್ಟ್ ಸಿಟಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, ಜಿಲ್ಲೆಯ ಪಾವಗಡ ಹೊರತುಪಡಿಸಿ ಎಲ್ಲಾ ತಾಲೂಕುಗಳೂ ಸೇರಿದಂತೆ 100 ಹಳ್ಳಿಗಳಲ್ಲಿ ಕುಡಿಯುವ ನೀರಿನ ತತ್ವಾರ ಎದುರಾಗಬಹುದೆಂದು ಗುರುತಿಸಲಾಗಿದ್ದು, ಈ ಹಳ್ಳಿಗಳಲ್ಲಿ ಈಗಾಗಲೇ ಟ್ಯಾಂಕರ್, ಖಾಸಗಿ ಬೋರ್ವೆಲ್ಗಳ ಮೂಲಕ ಹಾಗೂ ಸಮೀಪದ ನೀರಿನ ಲಭ್ಯತೆಯನುಸಾರ ಸರಬರಾಜಿಗೆ ಕ್ರಮಕೈಗೊಳ್ಳಲಾಗಿದೆ. ಇದಲ್ಲದೆ 4ನೇ ಹಂತವಾಗಿ ಈ ಮೂರೂ ಕ್ರಮಗಳು ಸಾಧ್ಯವಾಗದಿದ್ದಲ್ಲಿ ಕೊಳವೆಬಾವಿ ಕೊರೆಸಿ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ನೀರಿನ ಸಮಸ್ಯೆ ಎದುರಾದಾಗ ಕೊಳವೆಬಾವಿ ಕೊರೆಸಲು ಬೇಕಿರುವ ಅನುಮತಿಯನ್ನು ಜಿಲ್ಲಾಧಿಕಾರಿ ಅಥವಾ ಜಿಪಂ ಸಿಇಒ ತಕ್ಷಣ ನೀಡಬೇಕು. ಬೆಸ್ಕಾಂ ಅಧಿಕಾರಿಗಳು ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲು ಮೀನಮೇಷ ಎಣಿಸಬೇಡಿ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಗೆ ಯಾವುದೇ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸಭೆಯನ್ನು ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿಸಿದರು.
ಗ್ರಾನೈಟ್ ಪದರ, ಅಂತರ್ಜಲ ಕುಸಿತಕ್ಕೆ ಕಾರಣ: ಭಾರತೀಯ ಭೂವಿಜ್ಞಾನ ಸಮೀಕ್ಷೆ ವರದಿ ಪ್ರಕಾರ ಜಿಲ್ಲೆಯ ಬಹುತೇಕ ಎಲ್ಲಾ ಪ್ರದೇಶವು ಭೂಭಾಗದ ತಳಭಾಗದಲ್ಲಿ ಗ್ರಾನೈಟ್ ಪದರ ಇರುವುದನ್ನು ಪತ್ತೆಹಚ್ಚಿದ್ದು, ಈ ಕಾರಣದಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನೀರಿನ ಅಂತರ್ಜಲಮಟ್ಟ ಬೇಗ ಕುಸಿಯಲು ಕಾರಣವಾಗಿದೆ. ಇದರಲ್ಲಿ ಕೋಲಾರ ಹಾಗೂ ತುಮಕೂರು ಜಿಲ್ಲೆಗಳನ್ನು ಅತಿಹೆಚ್ಚು ನೀರಿನ ಶೋಷಣೆ ಮಾಡಿದ ಜಿಲ್ಲೆಗಳೆಂದು ಗುರುತಿಸಿದೆ. ಈ ಹಿಂದೆ ಕೋಲಾರ ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯದಂತೆ ರ್ನಿಬಂಧ ಹೇರಲಾಗಿತ್ತು. ಅಂತೆಯೇ, ತುಮಕೂರು ಜಿಲ್ಲೆಯಲ್ಲಿಯೂ ಅಂತಹ ಸ್ಥಿತಿ ನಿಮಾರ್ಣವಾದರು ಅಚ್ಚರಿಯಿಲ್ಲ. ಈ ಹಿನ್ನೆಲೆಯಲ್ಲಿ ಅಂತರ್ಜಲ ವೃದ್ಧಿಸಿಕೊಳ್ಳುವ ಹಾಗೂ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಯೋಜನೆಗಳನ್ನು ರೂಪಿಸುವಂತೆ ಪರಮೇಶ್ವರ್ ಸಲಹೆ ನೀಡಿದರು.
ಕಾಡ್ಗಿಚ್ಚು ಎಚ್ಚರ !: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿರುಬೇಸಿಗೆ ಕಾರಣ ಕಾಡ್ಗಿಚ್ಚು ಹಬ್ಬುವ ಸಂದರ್ಭವಿದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಇಲಾಖೆಯವರು ತಮ್ಮ ವ್ಯಾಪ್ತಿಯ ಘಟಕಗಳೊಂದಿಗೆ ಪರಿಶೀಲನೆ ನಡೆಸಿ ತೀವ್ರ ನಿಗಾವಹಿಸಬೇಕು. ಅಲ್ಲದೆ, ಜಿಲ್ಲೆಯ ಕೆಲವೆಡೆ ಚಿರತೆಯ ಕಾಟ ಹೆಚ್ಚಿರುವ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಬೋನುಗಳ ಇಟ್ಟುಕೊಳ್ಳುವಂತೆ ಸಭೆಯಲ್ಲಿ ತಿಳಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಬಿ.ವಿ. ಅಶ್ವಿಜ ಉಪಸ್ಥಿತರಿದ್ದರು.
ತುಮಕೂರು ನಗರಕ್ಕೆ ಜಲಮೂಲವಾದ ಬುಗಡನಹಳ್ಳಿ ಹೇಮಾವತಿ ಜಲಸಂಗ್ರಹಗಾರದಲ್ಲಿ ನೀರಿನ ಪ್ರಮಾಣದ ಆಧಾರದ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಗೊರೂರು ಹೇಮಾವತಿ ಜಲಾಶಯದಿಂದ ನೀರು ಹರಿಸುವಂತೆ ಈಗಾಗಲೇ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರೊಂದಿಗೆ ಚರ್ಚಿಸಲಾಗಿದೆ. ಜಿಲ್ಲಾಡಳಿತವು ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಿದ್ದು, ಕನಿಷ್ಠ 2 ಟಿಎಂಸಿ ನೀರು ಹರಿಸುವಂತೆ ಕೋರುವುದಾಗಿ ಪರಮೇಶ್ವರ್ ತಿಳಿಸಿದರು.
ಮಾರ್ಚ್ 17ರಂದು ಜಿಲ್ಲೆಯ ಶಿರಾ ಭಾಗದಲ್ಲಿ ಸುರಿದ ಭಾರಿ ಆಲಿಕಲ್ಲು ಮಳೆಯಿಂದಾಗಿ ಅಂದಾಜು ಸುಮಾರು 4ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ, ಅಡಿಕೆ, ರೇಷ್ಮೆ ಇತ್ಯಾದಿ ಬೆಳೆಗಳು ನಷ್ಟವಾಗಿವೆ. ಈ ಬಗ್ಗೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಲಾಯಿತು. ನಷ್ಟಕ್ಕೊಳಗಾದ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವ ಸಂಬಂಧ ಹಾಗೂ ವಿಪತ್ತು ನಿರ್ವಹಣೆ ನಿಧಿಯಿಂದ ರೈತರಿಗೆ ಪರಿಹಾರ ನೀಡುವ ಸಂಬಂಧ ಚರ್ಚಿಸಲಾಗಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.
ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ ತೋಟಗಾರಿಕೆ ಬೆಳೆ ಬೆಳೆದಿರುವ ರೈತರು ಸಂಕಷ್ಟಕ್ಕೀಡಾಗಿರುವುದು ಅತ್ಯಂತ ನೋವಿನ ವಿಚಾರ. ಸರ್ಕಾರ ಎಂದಿಗೂ ರೈತರ ಪರವಾಗಿ ನಿಲ್ಲಲಿದ್ದು, ಪರಿಹಾರ ಒದಗಿಸಲು ಸೂಕ್ತ ಕ್ರಮವಹಿಸಲಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದರು.