ತುಮಕೂರಿನ ಸತ್ಯಮಂಗಲದಲ್ಲಿ ಎಂ.ಕೊಟ್ರೇಶ್​, ಡಾ.ಜೆ.ಸುಧಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಅಪ್ರಕಟಿತ ಶಾಸನ ಗುರುತಿಸಿ ಸಂಶೋಧಿಸಿದೆ.  
ತುಮಕೂರು

ಅಪರೂಪದ "ಜಾತ್ರೆ ವೀರಗಲ್ಲು' ಶಾಸನ ಪತ್ತೆ

ಪ್ರಮುಖ ಮುಖ್ಯಾಂಶಗಳು

  • ಸತ್ಯಮಂಗಲ ಗ್ರಾಮದಲ್ಲಿ ಅಪ್ರಕಟಿತ ಶಾಸನ
  • ಜಾತ್ರೆ, ಹಬ್ಬಗಳ ಉತ್ಸವದ ಇತಿಹಾಸ ಬಯಲು
  • 14ನೇ ಶತಮಾನದ ಶಾಸನದಲ್ಲಿ ಜಾತ್ರೆಯ ಸುಂದರ ದೃಶ್ಯ
ತುಮಕೂರು: ಇತಿಹಾಸದ ಪುಟಗಳಲ್ಲಿ ಅಡಗಿ ಹೋಗಿದ್ದ 14ನೇ ಶತಮಾನದ ಮಹತ್ವದ ಸಾಂಸತಿಕ ಮಾಹಿತಿಯನ್ನೊಳಗೊಂಡ ಅಪರೂಪದ ವೀರಗಲ್ಲು ಶಾಸನ ತುಮಕೂರು ಹೊರವಲಯದ ಸತ್ಯಮಂಗಲದಲ್ಲಿ ಪತ್ತೆಯಾಗಿದೆ.
ತುಮಕೂರು ವಿವಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ.ಕೊಟ್ರೇಶ್​ ಹಾಗೂ ಡಾ.ಜೆ.ಸುಧಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಈ ಅಪ್ರಕಟಿತ ಶಾಸನ ಗುರುತಿಸಿ ಸಂಶೋಧಿಸಿದೆ.
ತುಮಕೂರು ನಗರ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸತ್ಯಮಂಗಲದ ಹೊಸ ಬಡಾವಣೆಗಳು ನಿಮಾರ್ಣವಾಗುತ್ತಿವೆ. ಇಲ್ಲಿನ ಖಾಸಗಿ ಶಾಲೆಯ ಕಾಂಪೌಂಡ್​ ಪಕ್ಕದಲ್ಲಿ ಪತ್ತೆಯಾಗಿರುವ ಈ ವೀರಗಲ್ಲು ಒಟ್ಟು ಏಳು ಸಾಲುಗಳ ಬರಹ ಹೊಂದಿದೆ. ಶಾಸನದ ಮಾಹಿತಿಯಂತೆ ಇದು ವಿಜಯನಗರ ಸಾಮ್ರಾಜ್ಯದ ಉದಯಕ್ಕೂ ಪೂರ್ವದ ಕಾಲಘಟ್ಟದ್ದಾಗಿದ್ದಾರೆ.
ವಿಕ್ರಮ ಸಂವತ್ಸರದಲ್ಲಿ ವೀರನರಸಿಂಗದೇವನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದ್ದು ಅಂದು ಈ ಭಾಗವನ್ನು ಮುರುಗಲು ರಾಜ್ಯ ಎಂದು ಕರೆಯಲಾಗುತ್ತಿತ್ತು ಹಾಗೂ ಸಿಂಗೆಯ ದಂಡನಾಯಕರು ಇಲ್ಲಿನ ಪ್ರಧಾನಿಯಾಗಿದ್ದರು ಎಂಬ ಮಹತ್ವದ ಅಂಶಗಳು ಶಾಸನದಲ್ಲಿ ಉಲ್ಲೇಖವಾಗಿವೆ. ವಿಶೇಷವೆಂದರೆ ಶಾಸನದ ಐದನೇ ಸಾಲಿನಲ್ಲಿ "ಸತ್ಯಮಂಗಲ' ಎಂಬ ಗ್ರಾಮದ ಹೆಸರೇ ಇರುವುದು ಕುತೂಹಲಕಾರಿಯಾಗಿದೆ.
ಅದರಲ್ಲಿ ಕೆತ್ತಲಾಗಿರುವ ಸಾಂಸತಿಕ ಚಿತ್ರಣ ಈ ವೀರಗಲ್ಲಿನ ಅತ್ಯಂತ ಆಕರ್ಷಕ ಅಂಶವೆನ್ನಿಸಿದ್ದು, 14ನೇ ಶತಮಾನದಲ್ಲಿ ಸಾಮಾನ್ಯ ಜನರು ಹೇಗೆ ಜಾತ್ರೆ ಮತ್ತು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬುದಕ್ಕೆ ಇದು ಜಿವಂತ ಸಾಕ್ಷಿಯಂತಿದೆ. ಹೆಣ್ಣು ಮಕ್ಕಳು ಸಾಲಾಗಿ ತಲೆಯ ಮೇಲೆ ಕುಂಭ ಹೊತ್ತುಕೊಂಡು ಸಂಭ್ರಮದಿಂದ ಜಾತ್ರೆಗೆ ಹೊರಟಿರುವ ಸುಂದರ ದೃಶ್ಯವನ್ನು ಈ ಶಿಲೆಯಲ್ಲಿ ಕಡೆಯಲಾಗಿದೆ. ಶಾಸನದ ಕೊನೆಯ ಸಾಲುಗಳು ಯಾವುದೋ ದೇವಸ್ಥಾನದ ಜಾತ್ರೆಯ ಬಗ್ಗೆ ಮಾಹಿತಿ ನೀಡುತ್ತವೆಯಾದರೂ, ಅದು ಯಾವ ದೇವರ ಜಾತ್ರೆ ಎಂಬುದು ಸ್ಪಷ್ಟವಾಗಿಲ್ಲ.
ಶಾಸನದಲ್ಲಿ ಆತ "ಕಾದಿ ಸತ್ತ' ಎಂದು ಉಲ್ಲೇಖಿಸಲಾಗಿದ್ದು, ಆತ ಕೈಲಾಸವಾಸಿಯಾದ ಚಿತ್ರವನ್ನೂ ಇಲ್ಲಿ ಕೆತ್ತಲಾಗಿದೆ. ನಗರೀಕರಣದ ನಡುವೆ ಪತ್ತೆಯಾಗಿರುವ ಈ ಶಾಸನ ತುಮಕೂರು ಭಾಗದ ಅಂದಿನ ಸಾಮಾಜಿಕ ಭದ್ರತೆ ಮತ್ತು ಧಾರ್ಮಿಕ ಆಚರಣೆಗಳ ಮೇಲೆ ಹೊಸ ಬೆಳಕು ಚೆಲ್ಲಿದೆ. ಜನಸಾಮಾನ್ಯರು ಜಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶತ್ರುಗಳು ಅಥವಾ ದರೋಡೆಕೋರರು ಅಡ್ಡಿಪಡಿಸಿರಬಹುದು. ಆ ಸಮಯದಲ್ಲಿ ಜನರ ರಕ್ಷಣೆಗಾಗಿ ಹೋರಾಡಿ ವೀರಮರಣವನ್ನಪ್ಪಿದ ವೀರನ ಸ್ಮರಣಾರ್ಥ ಈ ವೀರಗಲ್ಲು ಸ್ಥಾಪಿಸಲಾಗಿದೆ.
ಪ್ರೊ.ಎಂ.ಕೊಟ್ರೇಶ್​
ಇತಿಹಾಸ ತಜ್ಞ