Public deceived by Cauvery software
ತುರುವೇಕೆರೆ: ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿಗಳ ಮಾರಾಟ ಸೇರಿದಂತೆ ವಿವಿಧ ವಹಿವಾಟುಗಳನ್ನು ಕಾವೇರಿ ತಂತ್ರಾಂಶದ ಮೂಲಕ ಪೇಪರ್ ಲೆಸ್ ಮಾಡಲಾಗುತ್ತಿದ್ದು, ಇದು ಅಪಾಯದ ಮುನ್ಸೂಚನೆಯಾಗಿದೆ ಎಂದು ಜಿಲ್ಲಾ ಪತ್ರ ಬರಹಗಾರರ ಸಂಘದ ಸಂಘಟನಾಕಾರ ಬಿ.ಎನ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಸಂಘದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕಾವೇರಿ ತಂತ್ರಾಂಶ ಯೋಜನೆ ಜಾರಿಗೆ ಬಂದರೆ ಭೂ ಮಾಫಿಯಾದವರು ಮತ್ತು ಹ್ಯಾಕರ್ಸ್ಗಳಿಗೆ ರತ್ನಗಂಬಳಿ ಹಾಕಿಕೊಟ್ಟಂತಾಗುತ್ತದೆ ಎಂದರು.
ಕಾಗದ ರಹಿತ ಡಿಜಿಟಲ್ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಚಾಮರಾಜ ನಗರದಲ್ಲಿ ಜಾರಿಗೆ ತಂದಿದೆ. ಇದು ನಂತರ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈ ಕಾನೂನು ರಾಜ್ಯಾದ್ಯಂತ ಜಾರಿಗೆ ಬಂದಲ್ಲಿ ಸಾರ್ವಜನಿಕರ ಗೋಳು ಹೇಳತೀರದು. ಈಗಿರುವ ವ್ಯವಸ್ಥೆಯಲ್ಲೇ ನೂರಾರು ತೊಂದರೆಗಳು ಇವೆ. ಇವುಗಳನ್ನು ಬಗೆಹರಿಸಲೇ ಹರಸಾಹಸ ಮಾಡಲಾಗುತ್ತಿದೆ. ಈಗ ಪೇಪರ್ ಲೆಸ್ ವ್ಯವಸ್ಥೆ ಜಾರಿಗೆ ಬಂದರೆ ಸಾರ್ವಜನಿಕರ ಆತಂಕ ಮತ್ತಷ್ಟು ಹೆಚ್ಚುತ್ತದೆ ಎಂದರು.
ಆಸ್ತಿ ಮಾರಾಟಗೊಂಡ ಬಗ್ಗೆಯಾಗಲಿ, ಖರೀದಿ ಮಾಡಿಕೊಂಡಿರುವ ಬಗ್ಗೆಯಾಗಲೀ ಭೌತಿಕ ಪತ್ರ ನೀಡುವುದಿಲ್ಲ. ಸಹಿಯನ್ನು ಭೌತಿಕವಾಗಿ ಮಾಡದೇ ಈ - ಸಹಿ ಮಾಡಿಸುವುದರಿಂದ ಅಮಾಯಕರನ್ನು ವಂಚಿಸಲು ರಹದಾರಿಯಾಗಲಿದೆ. ವಂಚಕರಿಗೆ ಸಲೀಸು ಮಾಡಿಕೊಟ್ಟಂತೆ ಆಗುತ್ತದೆ. ಇದರಿಂದ ಸರ್ಕಾರಕ್ಕೆ ಲಾಭವೇನೂ ಇಲ್ಲ. ಆದರೆ ಜನ ಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದರು.
ಈ ತಂತ್ರಾಂಶವನ್ನು ಕೂಡಲೇ ರಾಜ್ಯಸರ್ಕಾರ ಹಿಂಪಡೆಯಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಹೋರಾಟ ಅನಿವಾರ್ಯವಾಗಲಿದೆ. ಈ ಕುರಿತು ನ್ಯಾಯಾಲಯದಲ್ಲೂ ಪ್ರಶ್ನೆ ಮಾಡುವವರಿದ್ದೇವೆ. ಈಗಿನ ವ್ಯವಸ್ಥೆಯಲ್ಲಿ ಮಾರಾಟಗಾರರು ಮತ್ತು ಕೊಳ್ಳುವವರು ಎದುರು ಇದ್ದರೇ ಮೋಸ ಮಾಡಲಾಗುತ್ತಿದೆ. ಇನ್ನು ಪೇಪರ್ ಲೆಸ್ ಅಥವಾ ಇ&ತಂತ್ರಾಂಶ ದಿಂದ ವಹಿವಾಟು ನಡೆದರೆ ಸಾಕಷ್ಟು ವಂಚನೆಗಳು ನಡೆದು ಸೈಬರ್ ಕ್ರೈಂ ಪೊಲೀಸರಿಗೆ ಹೆಚ್ಚು ಕೆಲಸ ಶುರುವಾಗಲಿದೆ ಎಂದು ಹೇಳಿದರು.
ನಿರ್ದೇಶಕರಾದ ಕೆ.ಗೋಪಿನಾಥ್, ಬಿ.ಎನ್.ಶಶಿಕುಮಾರ್, ಕೆ.ಎಲ್.ಕಲ್ಲೇಶ್, ಬಿ.ಕಂಚೀರಾಯ, ಬಸವರಾಜು, ಬಲರಾಮಯ್ಯ, ಶಿವಕುಮಾರ್, ಡಿ.ಎಸ್.ಶಿವಣ್ಣ ಮತ್ತು ಪುಟ್ಟರಾಮಯ್ಯ ಇದ್ದರು.