Provide bus facilities for school timings.
ಗುಬ್ಬಿ: ಶಾಲಾ&ಕಾಲೇಜು ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಕಳ್ಳಿಪಾಳ್ಯ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ-73 ತಡೆದ ವಿದ್ಯಾರ್ಥಿಗಳು, ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದರು.
ಕಳ್ಳಿಪಾಳ್ಯ ಗೇಟ್ನಿಂದ ಗುಬ್ಬಿ ಮತ್ತು ತುಮಕೂರು ಕಡೆಗೆ ಶಾಲೆ ಮತ್ತು ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಕಾದರೂ ಬಸ್ ಬಾರದ ಹಿನ್ನೆಲೆ ಆಕ್ರೋಶಗೊಂಡು ದಿಢೀರ್ ರಸ್ತೆಗಿಳಿದು ಸ್ಥಳಿಯ ಸಾರ್ವಜನಿಕರ ಸಹಕಾರದಲ್ಲಿ ಕೆಲಕಾಲ ಚತುಷ್ಪಥ ತಡೆದು ಆಕ್ರೋಶ ವ್ಯಕ್ತಪಡಿಸಿ, ಶಾಲೆ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಪ್ರತಿದಿನ ಈ ಮಾರ್ಗದಲ್ಲಿ ಹತ್ತಾರು ಬಸ್ಗಳು ಓಡಾಡುತ್ತವೆ. ಆದರೆ ಸಂಚರಿಸುವ ಎಲ್ಲ ಕೆಎಸ್ಆರ್ಟಿಸಿ ಬಸ್ಗಳು ಕಳ್ಳಿಪಾಳ್ಯ ಗೇಟ್ ಬಳಿಯ ನಿಲ್ದಾಣದಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ವೇಗವಾಗಿ ತೆರಳುತ್ತಿವೆ. ಕೊನೆಯಲ್ಲಿ ಯಾವುದಾದರೂ ಒಂದು ಬಸ್ ನಿಲ್ಲಿಸಿದರೆ ಅತಿಯಾದ ಜನಸಂದಣಿ ಇರುವುದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ-&ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತಲುಪಲು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಕಳ್ಳಿಪಾಳ್ಯ, ಅಡಗೂರು, ಧೂಳನಹಳ್ಳಿ, ಹೊಸಪಾಳ್ಯ ಸೇರಿ ಐದಾರು ಹಳ್ಳಿಗಳಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಗುಬ್ಬಿ ಮತ್ತು ತುಮಕೂರಿಗೆ ತೆರಳುತ್ತಾರೆ. ಬಹುತೇಕ ಕೂಲಿ ಕಾರ್ಮಿಕರ ಬಡ ಮಕ್ಕಳು ಸರ್ಕಾರಿ ಬಸ್ ಮೂಲಕ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ಸರ್ಕಾರಿ ಬಸ್ ಸಿಗದೇ ಹೋದರೆ ಮಕ್ಕಳು ಬೇರೆ ವಾಹನ ಇಲ್ಲಿ ಸಿಗಲ್ಲ. ನಿತ್ಯ ಶಾಲಾ ಕಾಲೇಜು ತಡವಾಗಿ ಹೋಗುವಂತಾಗಿದೆ. ಸಮಯಕ್ಕೆ ಸರಿಯಾಗಿ ಶಾಲೆಗೆ ಬರದಿದ್ದರೆ ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಲು ಶಾಲಾ ಕಾಲೇಜುಗಳಲ್ಲಿ ಹೇಳುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಮಕ್ಕಳು ಶಿಕ್ಷಣ ಮೊಟಕು ಆಗುತ್ತದೆ. ಗ್ಯಾರಂಟಿ ಹೆಸರಿನ ಬಿಟ್ಟಿ ಭಾಗ್ಯ ಯೋಜನೆ ಫಲ ನಮ್ಮ ಮಕ್ಕಳಿಗೆ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಗುಬ್ಬಿ ಸಿಪಿಐ ರಾಘವೇಂದ್ರ ನೇತೃತ್ವದ ಪೊಲೀಸ್ ತಂಡ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಅಧಿಕಾರಿಗಳ ಜತೆ ಮಾತನಾಡುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪತಿಭಟನೆ ಹಿಂಪಡೆದರು..