Provide appropriate compensation for farmers' crop losses
ತಿಪಟೂರು: ತಾಲೂಕಿನ ಹಲವಾರು ಭಾಗಗಳಲ್ಲಿ ಮಳೆ ಹಾಗೂ ಬಿರುಗಾಳಿಗೆ ರೈತರು ಬೆಳೆದ ತೆಂಗು, ಅಡಿಕೆ, ಬಾಳೆ ಸೇರಿದಂತೆ ಸಾಕಷ್ಟು ಗಿಡ, ಮರಗಳು ಮುರಿದುಬಿದ್ದಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ತಾಲೂಕು ಆಡಳಿತ ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆಗ್ರಹಿಸಿದರು.
ಮಳೆ- ಬೆಳೆ ಹಾನಿ ಸಂಭವಿಸಿದ ತಾಲೂಕಿನ ಹಲವಾರು ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ತೋಟಗಾರಿಕೆ ಅಧಿಕಾರಿಗಳು ರೈತರ ತೋಟಕ್ಕೆ ಭೇಟಿ ನೀಡಬೇಕು. ಮತ್ತಿಹಳ್ಳಿಯಲ್ಲಿ ಮುಜುರಾಯಿ ಇಲಾಖೆಗೆ ಸೇರಿದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೂ ಕೂಡ ಮಳೆಯಿಂದ ಹಾನಿಯಾಗಿದೆ. ಹಾನಿಗೊಳಗಾದವರಿಗೆ ಎಸ್ಜಿಆರ್ಎಫ್ ಫಂಡ್ನಿಂದ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ದೂರವಾಣಿ ಮೂಲಕ ತಹಸೀಲ್ದಾರ್ ಅವರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ ಸಂಭವಿಸಿದ ರೈತರಿಗೆ ಶೀಘ್ರವೇ ಪರಿಹಾರ ನೀಡಿ. ಡಿಸಿ ಗಮನಕ್ಕೆ ತಂದು ಪರಿಹಾರ ನೀಡುವಲ್ಲಿ ನಿಯಮಗಳನ್ನು ಸಡಿಲಿಸಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಕೋರಿದರು.
ಮಳೆಯಿಂದಾಗಿ ಮತ್ತಿಹಳ್ಳಿಯಲ್ಲಿ ಮನೆ ಗೋಡೆ ಕುಸಿದು ತೊಂದರೆಯಲ್ಲಿರುವ ವೃದ್ಧೆ ಜಯಮ್ಮ ಅವರಿಗೆ ವೈಯಕ್ತಿಕವಾಗಿ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಧನ ಸಹಾಯ ಮಾಡಿದರು. ಮುಖಂಡರಾದ ಮಂಜು, ಉಮೇಶ್, ಕಾಂತರಾಜು, ಸಿದ್ದೇಶ್ ಇದ್ದರು.