Provide accurate compensation for crop losses.
ತಿಪಟೂರು: ಇತ್ತೀಚೆಗೆ ಸುರಿದ ಗಾಳಿಮಳೆಯಿಂದ ತಾಲೂಕಿನಲ್ಲಿ ಸಾವಿರಾರು ತೆಂಗು, ಅಡಿಕೆ, ಬಾಳೆ, ಮಾವಿನ ಮರಗಳು ನೆಲಕಚ್ಚಿದ್ದು, ಇದನ್ನು ನಿಖರವಾಗಿ ಪರಿಶೀಲಿಸಿ ರೈತರಿಗೆ ಆಗಿರುವ ನಷ್ಟವನ್ನು ರಾಷ್ಟ್ರೀಯ ವಿಪತ್ತು ಸಹಾಯನಿಧಿಯಿಂದ ನೀಡಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ರಾಜ್ಯ ರೈತಸಂಘ, ಹಸಿರುಸೇನೆ, ಕರ್ನಾಟಕ ಪ್ರಾಂತ ರೈತಸಂಘ ಹಾಗೂ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ಮುಖಂಡರು ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು, ಒಂದು ತೆಂಗಿನ ಮರ ಬಿದ್ದರೆ ಪ್ರತಿವರ್ಷಕ್ಕೆ 7,500, ಪ್ರತಿ ಅಡಿಕೆ ಮರಕ್ಕೆ 1 ಸಾವಿರ, ಮಾವಿನ ಮರಕ್ಕೆ 8ರಿಂದ 10 ಸಾವಿರ ನಷ್ಟವಾಗುತ್ತದೆ. ಮರಗಳನ್ನು ಬೆಳೆಸಲು ಕನಿಷ್ಠ 10 ವರ್ಷ ಬೇಕಾಗುತ್ತದೆ. ಭೂಸ್ವಾಧಿನ ಮಾಡಿಕೊಂಡಾಗ ಪ್ರತಿ ತೆಂಗಿನ ಮರಕ್ಕೆ 18 -ರಿಂದ 20 ಸಾವಿರ ರೂಪಾಯಿ ನೀಡಲಾಗುತ್ತತ್ತೆ. ಆದರೆ, ಪ್ರಕೃತಿ ವಿಕೋಪದಿಂದ ನೆಲಕಚ್ಚಿದ ಮರಕ್ಕೆ ಇಲಾಖೆ ಕೇವಲ 150ರಿಂದ 200 ರೂ. ನಿಗದಿ ಮಾಡುವುದು ರೈತರ ಮೇಲೆ ಎಸಗಿದ ತಾರತಮ್ಯ ನೀತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಬಂದು ಸುಮಾರು 7 ತಿಂಗಳು ಕಳೆದಿದ್ದು, ಕಳೆದ ವರ್ಷದ ಮೇವಿನ ದಾಸ್ತಾನು ಮುಗಿಯುತ್ತಾ ಬಂದಿದ್ದು, ಕೆರೆ&ಕಟ್ಟೆಗಳು ಒಣಗಿ ಬರಗಾಲದ ಲಕ್ಷಣಗಳು ಎಲ್ಲ ಕಡೆ ಕಾಣುತ್ತಿದೆ. ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ರೈತರಿಗೆ ದಿಕ್ಕು ತೋಚದಂತಾಗಿದೆ. ನೆರವಿಗೆ ಬರಬೇಕಾದ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಸುಮ್ಮನೆ ಕುಳಿತುಕೊಂಡಿವೆ. ತಕ್ಷಣವೇ ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲು ಸರ್ಕಾರವನ್ನು ಒತ್ತಾಯಿಸಿದರು.
ರೈತಸಂಘದ ಮುಖಂಡ ಟಿ.ಬಿ.ಜಯಾನಂದಯ್ಯ, ತೀಮ್ಲಾಪುರ ದೇವರಾಜು, ಬಿಳಿಗೆರೆ ನಾಗೇಶ್, ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ. ಸಿದ್ದಪ್ಪ.ಬಳವನೇರಲು, ಸೌಹಾರ್ದ ಸಂಘಟನೆಯ ಅಲ್ಲಾಬಕಾಷ್, ಗಡಬನಹಳ್ಳಿ ತಿಮ್ಮೇಗೌಡ, ಬೇಲೂರನಹಳ್ಳಿ ಷಡಾಕ್ಷರಯ್ಯ ಇದ್ದರು.