ಪರಿಶಿಷ್ಟ ಪಂಗಡಕ್ಕೆ ಶೇ.7 ಮೀಸಲಾತಿ ಹೆಚ್ಚಳ ಬಳಿಕ ಹೊಸ ನೇಮಕಾತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಕುಪ್ಪೂರು ಶ್ರೀಧರ್​, ಸಿಂಗದಹಳ್ಳಿ ರಾಜಕುಮಾರ್​, ನಾಗರಾಜು, ಪಿ.ಬಿ. ಬಸವರಾಜು, ರಾಮಚಂದ್ರಪ್ಪ, ಸೋಲಾರ್​ ರಾಜು, ನವೀನ್​, ಶಿವಕುಮಾರ್​, ಎಚ್​.ಪ್ರಕಾಶ್​ , ಸರಸ್ವತಿ, ಯಶೋಧಮ್ಮ ಮತ್ತಿತರರು ಇದ್ದರು.  
ತುಮಕೂರು

ಮೀಸಲಿಗೆ ವಾಲ್ಮೀಕಿ ಸಂಘಟನೆಗಳ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಶೇ.7 ಮೀಸಲಾತಿ ಬಳಿಕ ನೇಮಕಾತಿಗೆ ಆಗ್ರಹ
  • ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹೋರಾಟ
  • ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ನೇತೃತ್ವ
ತುಮಕೂರು: ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.7 ಮೀಸಲಾತಿ ನೀಡಿದ ಬಳಿಕ 56,437 ಹುದ್ದೆಗಳನ್ನು ಭರ್ತಿ ಮಾಡುವಂತೆ ಹಾಗೂ ಎಸ್ಸಿ-ಎಸ್ಟಿ ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬುಧವಾರ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮೀಸಲಾತಿ ನಮ್ಮ ಹಕ್ಕು, ಭಿಕ್ಷೆಯಲ್ಲ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾನಿರತರು ಹೊಸ ನೇಮಕಾತಿಗೆ ಮುನ್ನ ಪರಿಶಿಷ್ಟ ಪಂಗಡದವರಿಗೆ ಶೇ.7 ಮೀಸಲು ನಿಗದಿಪಡಿಸಿ ಜಾರಿಗೊಳಿಸಲು ಎಂದು ಆಗ್ರಹಿಸಿದರು.
ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಮುಖಂಡ ಕುಪ್ಪೂರು ಶ್ರೀಧರ್​, ರಾಜ್ಯ ಸರ್ಕಾರ 2022ರಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಶೇ. 15 ರಿಂದ ಶೇ. 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3 ರಿಂದ ಶೇ. 7 ರಷ್ಟು ಹೆಚ್ಚಿಸಿದೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂವಿಧಾನದ 9ನೇ ಷೆಡ್ಯೂಲ್​ಗೆ ಸೇರಿಸದೆ ರ್ನಿಲಕ್ಷ$್ಯ ತೋರಿದ್ದು, ಅತಿ ಶೀಘ್ರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನದ 9ನೇ ಅಧಿಸೂಚಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ರಾಜ್ಯ ಸರ್ಕಾರ ಸುಮಾರು 56,437 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದು ಸರಿಯಷ್ಟೆ. ಆದರೆ, 2022 ರಲ್ಲಿ ಎಸ್ಸಿ ಹಾಗೂ ಎಸ್ಟಿ ಸಮುದಾಯಗಳಿಗೆ ಹೆಚ್ಚಿಸಿರುವ ಮೀಸಲಾತಿಯನ್ನು ಕೈಬಿಟ್ಟು ಹಳೆಯ ಮಾದರಿಯ ಮೀಸಲಾತಿ ಅಡಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಎಸ್ಸಿ ಹಾಗೂ ಎಸ್ಟಿ ಸಮುದಾಯಗಳು ಖಂಡಿಸುತ್ತವೆ. 2022ರ ಮೀಸಲಾತಿ ಅನ್ವಯ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಎಸ್ಸಿ ಹಾಗೂ ಎಸ್ಟಿ ಸಮುದಾಯಗಳಿಗೆ ಶೇ. 56 ರಷ್ಟು ಮೀಸಲಾತಿ ಆಗುವವರೆಗೂ ಯಾವುದೇ ನೇಮಕಾತಿ ಮಾಡಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಕೆ: ಪರಿಶಿಷ್ಟ ಪಂಗಡಕ್ಕೆ ಶೇ.7 ಮೀಸಲು ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಡಾ.ಎನ್​.ತಿಪ್ಪೇಸ್ವಾಮಿ ಮೂಲಕ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರುಗಳಾದ ಸಿಂಗದಹಳ್ಳಿ ರಾಜಕುಮಾರ್​, ನಿವೃತ್ತ ಅಬಕಾರಿ ಅಧಿಕಾರಿ ನಾಗರಾಜು, ನಿವೃತ್ತ ಬಿಇಒ ಪಿ.ಬಿ. ಬಸವರಾಜು, ರಾಮಚಂದ್ರಪ್ಪ, ಸೋಲಾರ್​ ರಾಜು, ವಿದ್ಯಾರ್ಥಿ ಘಟಕದ ನವೀನ್​, ಮಂಜುನಾಥ್​, ಕುಂದೂರು ಮುರುಳಿ, ನಾಗರಾಜು, ಅಡವೀಶಸ್ವಾಮಿ, ಪುರುಷೋತ್ತಮ, ಶಿವಕುಮಾರ್​, ಎಚ್​.ಪ್ರಕಾಶ್​ , ಸರಸ್ವತಿ, ಯಶೋಧಮ್ಮ, ಯೋಗೇಂದ್ರಬಾಬು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.