ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನೀರಿಗಾಗಿ ಮೈದಾಳ ಅಮಾನಿಕೆರೆ ಅಚ್ಚುಕಟ್ಟು ರೈತರ ಧರಣಿ ಸತ್ಯಾಗ್ರಹದಲ್ಲಿ ಮಾಜಿ ಸಚಿವ ಕೆ.ಎನ್.ರಾಜಣ್ಣ, ಜಿ.ಎಸ್.ಬಸವರಾಜು, ಸೊಗಡುಶಿವಣ್ಣ, ಗಂಗಹನುಮಯ್ಯ, ಕಲ್ಲಹಳ್ಳಿ ದೇವರಾಜು ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.
- ಮೈದಾಳ ಅಮಾನಿಕೆರೆ ಅಚ್ಚುಕಟ್ಟು ಪ್ರದೇಶದ ರೈತರ ಪ್ರತಿಭಟನೆ
- ಮಾಜಿ ಸಚಿವ ರಾಜಣ್ಣ ಗುಡುಗು
- ಹೋರಾಟಕ್ಕೆ ಸ್ಪಂದಿಸಿದ ಸಚಿವ ಪರಮೇಶ್ವರ್
ತುಮಕೂರು: ಮೈದಾಳ ಕೆರೆ ಅಚ್ಚುಕಟ್ಟು ಪ್ರದೇಶದ ರೈತರ ತೋಟದ ಜಮೀನುಗಳಿಗೆ ತುರ್ತಾಗಿ ನೀರು ಹರಿಸುವ ಮಾಜಿ ಸಚಿವ ಕೆ.ಎನ್.ರಾಜಣ್ಣ ನೇತೃತ್ವದ ಹೋರಾಟಕ್ಕೆ ಜಯಸಂದಿದೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ನೀರಿಗಾಗಿ ಮೈದಾಳ ಅಮಾನಿಕೆರೆ ಅಚ್ಚುಕಟ್ಟು ರೈತರ ಧರಣಿ ಸತ್ಯಾಗ್ರಹದಲ್ಲಿ ಈ ಕೆರೆ ನೀರು ಅವಲಂಬಿಸಿರುವ 25-30 ಹಳ್ಳಿಗಳ ತೋಟ&ತುಡಿಕೆಗಳಿಗೆ, ದನಕರುಗಳಿಗೆ ತುರ್ತಾಗಿ ನೀರು ಹರಿಸುವಂತೆ ನೂರಾರು ರೈತರು ಆಗ್ರಹಿಸಿದರು. ಈ ವೇಳೆ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡುಶಿವಣ್ಣ ನೇತೃತ್ವದಲ್ಲಿ ನೂರಾರು ಪ್ರತಿಭಟನೆ ನಡೆಸಿ ಈ ಬೇಸಿಗೆ ಬಿಸಿಲಿಗೆ ಅಡಿಕೆ-ತೆಂಗಿನ ತೋಟುಗಳು ನೀರಿಲ್ಲದೆ ಒಣಗುತ್ತಿದ್ದು ತುರ್ತಾಗಿ ನೀರು ಹರಿಸುವಂತೆ ಘೋಷಣೆಗಳನ್ನು ಕೂಗಿದರು.
ಉಸ್ತುವಾರಿ ಸಚಿವರ ಮಧ್ಯಪ್ರವೇಶ: ಮೈದಾಳ ಅಮಾನಿಕೆರೆ ಅಚ್ಚಕಟ್ಟು ಗ್ರಾಮಗಳಾದ ಮೈದಾಳ, ಬಂಡೀಹಳ್ಳಿ, ಪಂಡಿತನಹಳ್ಳಿ, ಮಂಚಕಲ್ಕುಪ್ಪೆ, ಮಾಚನಹಳ್ಳಿ, ಬೊಮ್ಮನಹಳ್ಳಿ, ಕಲ್ಲಹಳ್ಳಿ, ಕ್ಯಾತಸಂದ್ರ, ಕೆಸರಮುಡು, ಚನ್ನಿಗಯ್ಯನಪಾಳ್ಯ, ಶೆಟ್ಟಿಹಳ್ಳಿ, ಕೆ.ಪಾಲಂದ್ರ, ಕೌತಮಾರನಹಳ್ಳಿ, ಕಿತ್ತಗನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಗಳ ರೈತರ ಉಳಿವಿಗಾಗಿ ನಡೆಸಿದ ಪ್ರತಿಭಟನೆ ತೀವ್ರತೆಯನ್ನು ಮನಗಂಡ ಜಿಲ್ಲಾಧಿಕಾರಿ ಶುಭಕಲ್ಯಾಣ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಗಮನಕ್ಕೆ ತಂದರು. ತಕ್ಷಣವೇ ಸ್ಪಂದಿಸಿದ ಸಚಿವ ಪರಮೇಶ್ವರ್ ಮೈದಾಳ ಅಮಾನಿಕೆರೆ ಅಚ್ಚುಕಟ್ಟು ವ್ಯಾಪ್ತಿಯ ಹಳ್ಳಿಗಳ ಅಡಿಕೆ-ತೆಂಗಿನ ತೋಟ, ಜಾನುವರುಗಳಿಗೆ ಕುಡಿಯುವ ನೀರು ಬಿಡುವಂತೆ ಆದೇಶಿಸಿದರು. ಸಚಿವರ ಮಧ್ಯಪ್ರವೇಶಿಸಿ ರೈತರ ಹೋರಾಟಕ್ಕೆ ಸ್ಪಂದಿಸಿದ ಪರಿಣಾಮ ಕೆಲವೇ ಗಂಟೆಗಳಲ್ಲಿ ಧರಣಿ ಸತ್ಯಾಗ್ರಹವನ್ನು ಕೈಬಿಡಲಾಯಿತು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆ.ಎನ್.ರಾಜಣ್ಣ, "ಕೆರೆ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯು ಬೇಕಿಲ್ಲ'. ಮೈದಾಳ ಅಚ್ಚುಕಟ್ಟ ರೈತರ ತೋಟ ತುಡಿಕೆಗಳು ನೀರಿಲ್ಲದೆ ಒಣಗುತ್ತಿದ್ದು ತಕ್ಷಣವೇ ನೀರು ಹರಿಸಬೇಕು. ದನಕರುಗಳು ಸಹ ಕುಡಿಯುವ ನೀರಿಲ್ಲದೆ ಪರದಾಡುತ್ತಿವೆ. ಈ ಸಮಸ್ಯೆಯನ್ನು ಜಿಲ್ಲಾಡಳಿತ ತತ್ಕ್ಷಣವೇ ಬಗೆಹರಿಸುವಂತೆ ಒತ್ತಾಯಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ಮೈದಾಳ ಕೆರೆಯಿಂದ ನೀರು ಹರಿಸುವ ಭರವಸೆ ಕೊಟ್ಟಿದ್ದಾರೆ. ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ರೈತರ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ನೀರು ಬಿಡುವ ತೀರ್ಮಾನ ಆಗಿದೆ. ಸಂಬಂಧಪಟ್ಟ ಅಕಾರಿಗಳು, ನಿಮ್ಮೆಲ್ಲರ ಪ್ರತಿನಿಧಿಯಾಗಿ ಕೆ.ಟಿ.ಚಂದ್ರಶೇಖರ್, ಮೂರ್ತಿ ಸಮ್ಮುಖದಲ್ಲಿ ನೀರು ಬಿಡಲಿದ್ದಾರೆ. ಮೈದಾಳ ಕೆರೆ ತೂಬು ತೆರೆಯಲಿದ್ದಾರೆ. ನಮ್ಮ ರೈತರ ಪಾಲು ಬಿಡಲು ಕೇಳಿದ್ದೇವೆ. ಸಚಿವರು ನೀರು ಬಿಡುವ ಆದೇಶ ಮಾಡಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಲ್ಲಹಳ್ಳಿ ದೇವರಾಜು, ಲಕ್ಷಿ$್ಮಕಾಂತ್, ಕೇಬಲ್ ರು, ನರಸಿಂಹಮೂರ್ತಿ, ಕೇಶವಮೂರ್ತಿ, ಕೆ.ಎಸ್.ಅರುಣ್ ಕುಮಾರ್, ಜಯಣ್ಣ, ಕೆಸರಮುಡು ಆನಂದ್, ರಾಮಣ್ಣ, ಲಕ್ಷ$್ಮಣ್, ಹನುಮಯ್ಯ, ಕೆ.ಸಿ.ಬಸವರಾಜು, ವಿದ್ಯಾಧರ್, ರಾಜಣ್ಣ, ಶಾಂತಕುಮಾರ್, ಎಚ್ಎಂಟಿ ರೇವಣಸಿದ್ದಯ್ಯ, ಮುಷ್ತಾಕ್, ಷಫೀ, ಪ್ಯಾರಿಜಾನ್, ಹಿನಾಯತ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.