ದಲಿತ ಕಾರ್ಮಿಕರಿಂದ ಮಲಗುಂಡಿ ಸ್ವಚ್ಛಗೊಳಿಸಿರುವರನ್ನು ಬಂಧಿಸುವಂತೆ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ವೈ.ಎಚ್​.ರವಿಚಂದ್ರ, ವೈ.ಎಚ್​.ಹುಚ್ಚಯ್ಯ, ಬ್ಯಾಟರಂಗೇಗೌಡ, ಎಸ್​.ಪಿ.ಚಿದನಾಂದ್​, ಸತ್ಯಮಂಗಲ ಜಗದೀಶ್​, ಎಚ್​.ಎ.ಆಂಜನಪ್ಪ ಮತ್ತಿತರರು ಇದ್ದರು. 
ತುಮಕೂರು

ಮಲಗುಂಡಿ ಸ್ವಚ್ಛ ಪ್ರಕರಣ ಆರೋಪಿಗಳ ಬಂಧನಕ್ಕೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ
  • ಕೆಇಬಿ ಇಂಜಿನಿಯರ್ಸ್​ ಅಸೋಸಿಯೇಷನ್​ ಆವರಣ
  • ಬರಿಗೈಲಿ ಮಲಬಾಚಿಸಿರುವ ಪ್ರಕರಣ
ತುಮಕೂರು: ದಲಿತ ಕಾರ್ಮಿಕರಿಂದ ಮಲಗುಂಡಿ ಸ್ವಚ್ಛ ಮಾಡಿಸಿದ ಹೇಯ ಕೃತ್ಯ ಖಂಡಿಸಿ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಬಿಜೆಪಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟಿಸಿ, ನಗರದ ಕೆಇಬಿ ಇಂಜಿನಿಯರ್ಸ್​ ಅಸೋಸಿಯೇಷನ್​ ಆವರಣದಲ್ಲಿ ದಲಿತ ಕಾರ್ಮಿಕರಿಂದ ಬರಿಗೈಲಿ ಮಲಗುಂಡಿ ಸ್ವಚ್ಛಗೊಳಿಸಿರುವುದು ಅತ್ಯಂತ ಹೀನಕೃತ್ಯ. ಮಲಬಾಚಿಸಿರುವುದರ ಬಗ್ಗೆ ದಲಿತ ಸಮುದಾಯದ ಡಿಸಿಎಂ ಡಾ.ಜಿ.ಪರಮೇಶ್ವರ್​ ಈ ಟನೆ ಕುರಿತು ಹೇಳಿಕೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಜಿಪಂ ಮಾಜಿ ಅಧ್ಯಕ್ಷ ವೈ.ಎಚ್​. ಹುಚ್ಚಯ್ಯ, ದಲಿತರ ಕೈಯ್ಯಲ್ಲಿ ಮಲ ಎತ್ತಿಸಿದ ಕೃತ್ಯ ಖಂಡನೀಯ. ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ, ಇದೇ ಸಮುದಾಯದಿಂದ ಮುಖ್ಯಮಂತ್ರಿ ಆಗಲು ಹೊರಟಿರುವ, ದಲಿತರ ರಕ್ಷಣೆ ಮಾಡುವಲ್ಲಿ ವಿಫಲರಾದ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್​ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಪೌರಾಡಳಿತ ಸಚಿವರಾಗಿದ್ದ ಬಸವಲಿಂಗಪ್ಪ ಅವರು ಮಲಹೊರುವ ಪದ್ದತಿ ನೀಷೇಧ ಕಾನೂನು ಜಾರಿಗೆ ಕಾರಣರಾಗಿದ್ದರು. ಡಿಸಿಎಂ ಡಾ.ಪರಮೇಶ್ವರ್​ ಅವರು ಬಸವಲಿಂಗಪ್ಪ ಅವರಂತೆ ದಲಿತರ ಪರ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಯಾವತ್ತೂ ಕಾಳಜಿವಹಿಸಿಲ್ಲ. ಅಮಾನವೀಯವಾದ ಮಲ ಹೊರುವ ಪದ್ಧತಿ ನಿಷೇಧವಿದ್ದರೂ ಜಾರಿಯಲ್ಲಿದ್ದರೂ ತುಮಕೂರು ಕೆಇಬಿ ಇಂಜಿನಿಯರ್ಸ್​ ಅಸೋಸಿಯೇಷನ್​ ಆವರಣದಲ್ಲಿ ಅಮಾಯಕ ಕಾರ್ಮಿಕರಿಂದ ಮಲ ಬಾಚಿಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಮತ್ತೆಂದು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮುಖಂಡ ಎಸ್​.ಪಿ ಚಿದಾನಂದ್​, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್​, ಎಸ್ಸಿ ಮೋರ್ಚಾ ಮಾಜಿ ಅಧ್ಯಕ್ಷ ಎಚ್​.ಎ. ಆಂಜನಪ್ಪ, ಉಪಾಧ್ಯಕ್ಷರಾದ ವರದಣ್ಣ, ವೆಂಕಟೇಶ್​, ಪ್ರಧಾನ ಕಾರ್ಯದರ್ಶಿ ಅಂಜನಮೂರ್ತಿ, ಅಶೋಕ್​, ಮುಖಂಡರಾದ ಕೆ. ವೇದಮೂರ್ತಿ, ನವೀನ್​ಕುಮಾರ್​, ರಾಕೇಶ್​, ಶಿವರಾಜ್​, ಪ್ರತಾಪ್​, ಜಗದೀಶ್​, ನಾಗರಾಜು, ರತ್ನಮ್ಮ ಮೊದಲಾದವರು ಭಾಗವಹಿಸಿದ್ದರು.
ನಗರದ ಹೃದಯ ಭಾಗದಲ್ಲಿರುವ ಕೆ.ಇ.ಬಿ ಅಸೋಸಿಯೇಷನ್​ ಆವರಣದಲ್ಲಿದ್ದ ಮಲಗುಂಡಿಯನ್ನು ಕಾರ್ಮಿಕರ ಬಡತನದ ಹಾಗೂ ಹಸಿವಿನ ದುರ್ಲಾಭ ಪಡೆದು ಮಲವನ್ನು ಬರಿಗೈನಲ್ಲಿ ಬಾಚಿಸಿ ಟ್ರಾಕ್ಟರ್​ಗೆ ತುಂಬಿಸಿದ್ದಾರೆ. ಇದೊಂದು ಅಮಾನವೀಯ, ಕಾನೂನು ಬಾಹಿರ, ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಹಾಗೂ ವ್ಯಕ್ತಿಗೌರವಕ್ಕೆ ಚ್ಯುತಿ ತರಿಸುವಂತಹ ದುರ್ಘಟನೆಯಾಗಿದೆ. ಈ ಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ವೈ.ಎಚ್​.ರವಿಚಂದ್ರ
ಅಧ್ಯಕ್ಷ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ