ತುಮಕೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ಆಯೋಜಿಸಿದ್ದ ಪ್ರೊ.ಜಿ.ಎಸ್​.ಸಿದ್ದಲಿಂಗಯ್ಯ ಅವರ ಬದುಕು- ಬರಹ ಕುರಿತ ವಿಚಾರ ಸಂಕಿರಣದಲ್ಲಿ ಯಲಚಗೆರೆ ಉಮೇಶ್​, ರೇಖಾ ಹಿಮಾನಂದ್​, ಕೆ.ಬಿ.ನೇತ್ರಾವತಿ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ.ಎಸ್​.ಜಿ.ಸಿದ್ದರಾಮಯ್ಯ, ಡಾ.ಎಂ.ಎಸ್​.ಆಶಾದೇವಿ, ಕೆ.ಎಸ್​.ಸಿದ್ದಲಿಂಗಪ್ಪ, ಪ್ರೊ.ಸಿ.ನಾಗಭೂಷಣ್​, ಡಾ.ಡಿ.ಎನ್​.ಯೋಗೀಶ್ವರಪ್ಪ, ಡಾ.ಟಿ.ಬಿ.ನಿಜಲಿಂಗಪ್ಪ, ಡಾ.ಎಚ್​.ಎಂ.ದಕ್ಷಿಣಮೂರ್ತಿ,ಎಂ.ಎಚ್​.ನಾಗರಾಜು ಮತ್ತಿತರರು ಇದ್ದರು.  
ತುಮಕೂರು

ತಾಯಿ ಅಂತಃಕರಣದ ಪ್ರೊ.ಜಿ.ಎಸ್​.ಸಿದ್ದಲಿಂಗಯ್ಯ

ಪ್ರಮುಖ ಮುಖ್ಯಾಂಶಗಳು

  • ಕಸಾಪ ವತಿಯಿಂದ ದತ್ತಿ ಪ್ರಶಸ್ತಿ ಪ್ರದಾನ
  • ಅಮೆರಿಕಾ, ಇಸ್ರೇಲ್​ನಲ್ಲಿ ಮಾತೃ ಹೃದಯದ ಮನಸುಗಳಿಲ್ಲ
  • ಪ್ರೊ.ಎಸ್​.ಜಿ.ಸಿದ್ದರಾಮಯ್ಯರಿಂದ ಪ್ರಶಸ್ತಿ ಪ್ರದಾನ
ತುಮಕೂರು: ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಮನಸ್ಸುಗಳು ಅಧಿಕಾರದಲ್ಲಿದ್ದರೆ ಯುದ್ಧದಂತಹ ಮನುಷ್ಯ ವಿರೋಧಿ ಕೃತ್ಯಗಳಿಗೆ ಅವಕಾಶ ಇರುವುದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್​.ಜಿ.ಸಿದ್ದರಾಮಯ್ಯ ಹೇಳಿದರು.
ನಗರದ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯಕಾಲೇಜಿನ ಡಾ.ಶ್ರೀ ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪ್ರೊ.ಜಿ.ಎಸ್​.ಸಿದ್ದಲಿಂಗಯ್ಯ ಅವರ ಬದುಕು- ಬರಹ ಕುರಿತ ವಿಚಾರ ಸಂಕಿರಣ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಅಮೆರಿಕಾ, ಇಸ್ರೇಲ್​ ಮತ್ತಿತರರ ರಾಷ್ಟ್ರಗಳಲ್ಲಿ ತಾಯಿ ಹೃದಯದ ಮನಸ್ಸುಗಳು ಇಲ್ಲದಿರುವುದೇ ಕಾರಣ. ಯಾವ ವಿಭಾಗವೇ ಆಗಲಿ ತನ್ನಲ್ಲಿ ಸಾಂಸತಿಕ ಹಾಗೂ ಸಾಹಿತ್ಯಿಕ ದೃಷ್ಟಿಕೋನ ಅಳವಡಿಸಿಕೊಳ್ಳದಿದ್ದರೆ, ಆ ವಿಭಾಗ ಹಳ್ಳ ಹಿಡಿದಂತೆಯೇ ಸರಿ. ಇತ್ತೀಚಿನ ಟ್ರಂಪ್​, ನೆತನ್ಯಾಹು ಆಡಳಿತವೇ ಇದಕ್ಕೆ ಸಾಕ್ಷಿ.165 ಮುಗ್ಧ ಮಕ್ಕಳನ್ನು ಕೊಲೆ ಮಾಡಿದಾಗ, ಕನಿಷ್ಠ ಪಾಪ ಪ್ರಜ್ಞೆ ಕಾಡದಿರುವುದು ದುರಂತವೇ ಸರಿ ಎಂದರು.
ತಾಯಿ ಅಂತಃಕರಣದ ಸಿದ್ದಲಿಂಗಯ್ಯ: ಸಾಹಿತಿಯಾಗಿ, ವಿಮರ್ಶಕರಾಗಿ, ಆಡಳಿತಾಧಿಕಾರಿಯಾಗಿ, ಉಪನ್ಯಾಸಕರಾಗಿ ಬಹುಮುಖ ವ್ಯಕ್ತಿತ್ವದ ಪ್ರೊ.ಜಿ.ಎಸ್​.ಸಿದ್ದಲಿಂಗಯ್ಯ ತಾಯಿಯ ಅಂತಃಕರಣ ಹೊಂದಿದ್ದವರು. ಕ್ರಿಯೆ ಇಲ್ಲದ ಅರಿವು ಪ್ರಯೋಜನಕ್ಕೆ ಬಾರದು. ಆದರೆ, ನಿರಂತರ ಅಧ್ಯಯನ ಶೀಲರಾಗಿದ್ದ ಸಿದ್ದಲಿಂಗಯ್ಯ ಅವರ ಭಾಷಾ ಪಾಂಡಿತ್ಯ, ವಿದ್ವತ್​, ಆಧ್ಯಾಪನಕ್ರಮ ಎಲ್ಲವೂ ಇಂದಿನವರಿಗೆ ಮಾದರಿ ಎಂದು ಪ್ರೊ.ಸಿದ್ದರಾಮಯ್ಯ ತಿಳಿಸಿದರು.
ಕಾವ್ಯಕ್ಕೆ ಎಲ್ಲಾ ಸಮಸ್ಯೆಗಳಿಗೆ ಮದ್ದಾಗಿ ಕೆಲಸ ಮಾಡುವ ಶಕ್ತಿ ಕಾವ್ಯಕ್ಕಿದೆ. ಇಡೀ ಜಗತ್ತೇ ಪ್ರಕ್ಷುಬ್ದ ವಾತಾವರಣದಲ್ಲಿ ಇರುವ ಸಂದರ್ಭದಲ್ಲಿ ಕಾವ್ಯದ ಅಗತ್ಯತೆ ಇದೆ. ಪ್ರೊ.ಜಿ.ಎಸ್​.ಸಿದ್ದಲಿಂಗಯ್ಯ ಅವರದ್ದು ಬಹುಮುಖ ವ್ಯಕ್ತಿತ್ವ. ಕಾವ್ಯ, ಗದ್ಯ, ವಚನ, ಆಡಳಿತಾಧಿಕಾರಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ಆ ದೇವರೇ ಕೂಡ ನನ್ನ ಭ್ರಷ್ಟಗೊಳಿಸಲಾರ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನೇಮಕವಾದ ದಿನ ನುಡಿದ ಮಾತಿಗೆ ಕೊನೆಯವರೆಗೂ ಸಿದ್ದಲಿಂಗಯ್ಯ ಅವರು ಬದ್ಧರಾಗಿದ್ದರು ಎಂದು ವಿಮರ್ಶಕಿ ಡಾ.ಎಂ.ಎಸ್​.ಆಶಾದೇವಿ ಸ್ಮರಿಸಿದರು.
ಶಾಸ್ತ್ರ, ಕಾವ್ಯ, ವಿಮರ್ಶೆ, ವಚನಗಳ ಅವಲೋಕನ ಹಾಗೂ ಆಡಳಿತಗಾರರಾಗಿ ಪ್ರೊ.ಜಿ.ಎಸ್​.ಸಿದ್ದಲಿಂಗಯ್ಯ ಅಪರೂಪದ ವ್ಯಕ್ತಿತ್ವ ಹೊಂದಿದ್ದವರು.
ಉಪನ್ಯಾಸಕರಾಗಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಯಾರ ಮುಲಾಜಿಗೂ ಒಳಗಾಗದೆ ಅಧ್ಯಾಪಕ ಸ್ನೇಹಿ ಆಡಳಿತ ನೀಡಿದವರು. ಶಿಕ್ಷಣ ಇಲಾಖೆಯ ಸಮಸ್ಯೆಗಳಿಗೆ ತಮ್ಮದೇ ರೀತಿಯಲ್ಲಿ ಪರಿಹಾರ ಒದಗಿಸಿದವರು. ಅವರ ಕಾಲದಲ್ಲಿ ಹಿರಿತನಕ್ಕೆ ಹೆಚ್ಚಿನ ಆದ್ಯತೆ ನೀಡಿ, ಕಾಲೇಜು ಶಿಕ್ಷಣ ಆಡಳಿತ ಸುಧಾರಿಸಲು ಕಾರಣರಾದರು ಎಂದು ಸಾಹಿತಿ ಪ್ರೊ.ಲಕ್ಷಿ$್ಮನಾರಾಯಣ ಹೇಳಿದರು.
ಸಂಶೋಧಕರಾಗಿ ನಡುಗನ್ನಡದ ಸಾಹಿತ್ಯಕ್ಕೆ ಹೆಚ್ಚಿನ ಬೆಳಕು ಚಲ್ಲಿದವರು. ವಚನ ಸಾಹಿತ್ಯದಲ್ಲಿ, ಅದರಲ್ಲಿಯು ಶೂನ್ಯ ಸಂಪಾದನೆಯ ಕುರಿತು ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸುವ ಮೂಲಕ ಭೌದ್ಧಿಕ ಪರಂಪರೆಯನ್ನು ಹುಟ್ಟು ಹಾಕಿದರು ಎಂದು ಪ್ರಾಧ್ಯಾಪಕ ಪ್ರೊ.ಸಿ.ನಾಗಭೂಷಣ್​ ತಿಳಿಸಿದರು.
ದತ್ತಿಪ್ರಶಸ್ತಿ ಪ್ರದಾನ: ಶ್ರೀಮತಿ ಮಲ್ಲಮ್ಮ ಶ್ರೀ ಪಟೇಲ್​ ನಾರಸೇಗೌಡ ದತ್ತಿ ಪ್ರಶಸ್ತಿಯನ್ನು ಸಾಹಿತಿಗಳಾದ ಯಲಚಗೆರೆ ಉಮೇಶ್​, ರೇಖಾ ಹಿಮಾನಂದ್​ ಮತ್ತು ಕೆ.ಬಿ.ನೇತ್ರಾವತಿ ಅವರಿಗೆ ಪ್ರದಾನ ಮಾಡಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ಅಧ್ಯಕ್ಷತೆವಹಿಸಿದ್ದರು. ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್​.ಯೋಗೀಶ್ವರಪ್ಪ, ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯಕಾಲೇಜಿನ ಪ್ರಾಂಶುಪಾಲ ಡಾ.ಟಿ.ಬಿ.ನಿಜಲಿಂಗಪ್ಪ, ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್​.ಎಂ.ದಕ್ಷಿಣಮೂರ್ತಿ, ಕಸಾಪ ಕಾರ್ಯದರ್ಶಿ ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ಕೋಶಾಧ್ಯಕ್ಷ ಎಂ.ಎಚ್​.ನಾಗರಾಜು, ಸಿದ್ದಗಂಗಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಎಂ.ಪದ್ಮಜ, ಡಾ.ಸಿ.ವಿ.ಶಕುಂತಲಾ ಮತ್ತಿತರರು ಉಪಸ್ಥಿತರಿದ್ದರು.