- ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ
- ಸದನದಲ್ಲಿ ಬಿಜೆಪಿ ಶಾಸಕ ಸುರೇಶಗೌಡ ಪ್ರಸ್ತಾಪ
- ಹಕ್ಕುಚ್ಯುತಿ ಸಮಿತಿಗೆ ಪ್ರಸ್ತಾವನೆ ವರ್ಗಾವಣೆ
ತುಮಕೂರು: ತಾಲೂಕಿನ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನಾಮಕರಣ ಸದಸ್ಯರು ತಮ್ಮ ವಿರುದ್ಧ ಗುರುತರವಾದ ಮಿಥ್ಯಾರೋಪಗಳನ್ನು ಮಾಡಿದ್ದು ಇದರಿಂದ ಶಾಸಕರಾಗಿ ತಾವು ಕಾರ್ಯನಿರ್ವಹಿಸಲು ಅಡ್ಡಿಯಾಗುತ್ತಿದ್ದು ಆ ಸದಸ್ಯರ ವಿರುದ್ಧ ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್ಗೌಡ ಸೋಮವಾರ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಸೂಚನೆ ಮಂಡಿಸಿದ ಪ್ರಸಂಗ ನಡೆಯಿತು.
ವಿಧಾನಸಭೆಯ ಶೂನ್ಯವೇಳೆಯಲ್ಲಿ ಸೋಮವಾರ ತಾವು ಮಾ.12 ರಂದು ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ನಾಮಕರಣ ಸದಸ್ಯರು ಸಭೆಗೆ ಬಂದರೂ ತಂತ್ರಾಂಶ ಬಳಸಿ ಬೆರಳಚ್ಚು ಗುರುತು ಕೊಡಲು ನಿರಾಕರಿಸುತ್ತಿರುವ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಕಂದಾಯಸಚಿವರು ಸೂಕ್ತ ಉತ್ತರ ನೀಡಿದ್ದಾರೆ. ಆದರೆ, ಆ ಪ್ರಸ್ತಾಪಕ್ಕೆ ಸದನದ ಹೊರಗಡೆ ನಾಮಿನಿ ಸದಸ್ಯರು ತಮ್ಮ ವಿರುದ್ಧ ಖಾಸಗಿ ವಾಹಿನಿಗಳ ಜತೆಗೆ ಮಾತನಾಡಿ ಶಾಸಕರೇ ಸಭೆಗೆ ಬರುತ್ತಿಲ್ಲವೆಂದು ಆಪಾದಿಸಿದ್ದಾರೆ ಎಂದು ಅವರು ತಿಳಿಸಿದರು.
ಈ ನಾಮಿನಿ ಸದಸ್ಯರ ಅಸಹಕಾರದಿಂದಾಗಿ ಬಡವರಿಗೆ ಹಕ್ಕು ಪತ್ರ ಕೊಡಲು ಸಮಸ್ಯೆಯಾಗುತ್ತದೆ ಎಂಬ ವಿಚಾರವನ್ನು ಮಾತ್ರ ತಾವು ಆ ದಿನ ಪ್ರಸ್ತಾಪ ಮಾಡಿದ್ದಾಗಿಯೂ ಆ ಸದಸ್ಯರ ವಿರುದ್ಧ ಯಾವುದೇ ಭ್ರಷ್ಟಾಚಾರದ ಅಥವಾ ಇನ್ನಾವುದೇ ಆರೋಪ ಮಾಡಿರಲಿಲ್ಲ ಸ್ಪಷ್ಟನೆ ನೀಡಿದರು.
ಸದನದಲ್ಲಿ ತಾವು ಪ್ರಸ್ತಾಪ ಮಾಡಿದ ವಿಷಯವನ್ನು ಮುಂದಿಟ್ಟುಕೊಂಡು ನಾಮಿನಿ ಸದಸ್ಯರಾದ ಕರೆರಂಗಯ್ಯ, ಶಿವರಾಜ್ ಎಂಬುವರು ಲುವಾಗಿ ಮಾತನಾಡಿದ್ದಾರೆ. ಈ ವಿಚಾರವನ್ನು ತಾವು ಹಕ್ಕು ಚ್ಯುತಿ ಸಮಿತಿಗೆ ಸಲ್ಲಿಸುತ್ತಿದ್ದು ಅವರ ವಿರುದ್ಧ ಕಾನೂನು ಪ್ರಕಾರ ಗಂಭೀರ ಕ್ರಮಜರುಗಿಸಬೇಕು. ಸಿಒಡಿಯಿಂದಲು ಇವರ ವಿರುದ್ಧ ತನಿಖೆ ಮಾಡಿಸಬೇಕೆಂದು ಸುರೇಶ್ಗೌಡರು ಒತ್ತಾಯಿಸಿದರು.
ಈ ರೀತಿ ಸುಳ್ಳು ಆರೋಪ ಮಾಡಿದರೆ ತಾವು ಶಾಸಕರಾಗಿ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಸಭಾಧ್ಯಕ್ಷರನ್ನು ಪ್ರಶ್ನಿಸಿದರು. ಸುರೇಶಗೌಡ ಪ್ರಸ್ತಾವನೆಯನ್ನು ಆಲಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಹಕ್ಕುಚ್ಯುತಿ ಸಮಿತಿಗೆ ಕಳಿಹಿಸುವುದಾಗಿ ಪ್ರಕಟಿಸಿದರು.