ತುಮಕೂರು ರೈಲ್ವೆ ನಿಲ್ದಾಣ ಆವರಣದಲ್ಲಿ ಸ್ಚಚ್ಛತಾ ಕಾರ್ಯಕ್ಕೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಮಸಾಲಜಯರಾಂ, ವೈ.ಎಚ್.ಹುಚ್ಚಯ್ಯ, ಎನ್.ಸಿ.ಪ್ರಕಾಶ್ ಮತ್ತಿತರರು ಇದದರು.
- ಸೇವಾ ಸಂಕಲ್ಪ ಅಭಿಯಾನ
- ಮೋದಿ ಹೆಸರಲ್ಲಿ ಪೂಜೆ
- ಕೇಂದ್ರ ರೈಲ್ವೆ ರಾಜ್ಯ ಸಚಿವೆ ವಿ.ಸೋಮಣ್ಣ
ತುಮಕೂರು: ಕೇಂದ್ರ ಸರ್ಕಾರದ ಯೋಜನೆಗಳು ಫಲಾನುಭವಿಗಳ ಮನೆ ಬಾಗಿಲಿಗೆತಲುಪಬೇಕು ಎಂಬುದು ಸೇವಾ ಸಂಕಲ್ಪ ಅಭಿಯಾನದ ಪ್ರಮುಖ ಆಶಯ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಸಂಸದರ ಕಚೇರಿ ಆವರಣದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಾಗೂ ಅವರು ಸಂವಿಧಾನಿಕ ಅಧಿಕಾರದ ಜವಾಬ್ದಾರಿ ವಹಿಸಿಕೊಂಡು 25ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ "ಸೇವಾ ಸಂಕಲ್ಪ ಅಭಿಯಾನ'ದಲ್ಲಿ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಮೋದಿ ಅವರ ಜನ್ಮದಿನ ಆಚರಣೆ ಅಂಗವಾಗಿ ಒಂದು ತಿಂಗಳ ಕಾಲ ವಿವಿಧ ಸೇವಾ, ಆರೋಗ್ಯ, ಸಾಮಾಜಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಹಲವು ದೇಶಗಳಲ್ಲಿ ಅವರ ಅಭಿಮಾನಿಗಳು ವಿಶೇಷವಾಗಿ ಆಚರಿಸುತ್ತಿದ್ದಾರೆ. ವಿಶ್ವನಾಯಕ ಮೋದಿ ಭಾರತದ ಘನತೆಯನ್ನು ವಿಶ್ವ ಮಟ್ಟದಲ್ಲಿ ಸಾರಿದ್ದಾರೆ. ದೇಶದ ಎಲ್ಲಾ ವರ್ಗದ ಜನರ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ವಿಕಸಿತ ಭಾರತ ನಿಮಾರ್ಣ ಕನಸನ್ನು ಸಾಕಾರಗೊಳಿಸಲು ಮೋದಿ ಅಭಿವೃದ್ಧಿ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಹಾಗೂ ಜನಕಲ್ಯಾಣ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಬೇಕಿದೆ. ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳು, ಸೌಲಭ್ಯಗಳು ಮತ್ತು ಫಲಾನುಭವಿಗಳ ಅರ್ಹತೆಗಳ ಕುರಿತು ಸಾರ್ವಜನಿಕರಿಗೆ ನೇರವಾಗಿ ಮಾಹಿತಿ ನೀಡಿ, ಅರ್ಹರಿಗೆ ಸ್ಥಳದಲ್ಲಿಯೇ ಅಗತ್ಯ ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ 25 ವರ್ಷಗಳ ಸಾರ್ವಜನಿಕ ಬದುಕು ಮಾದರಿಯಾಗಿದೆ. ಇಡೀ ದೇಶ ಹೆಮ್ಮೆಯಿಂದ ಅವರ ಸೇವೆಯನ್ನು ಸಂಭ್ರಮಿಸಿ ಕೊಂಡಾಡುತ್ತಿದೆ. ಬಲಿಷ್ಠ ಭಾರತ ನಿಮಾರ್ಣದ ಮೋದಿಯವರ ಕನಸನ್ನು ನನಸು ಮಾಡಲು ದೇಶದ ಜನ ಸಹಕಾರ ನೀಡಬೇಕು ಎಂದು
ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ಹೇಳಿದರು.
ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ವಿವಿಧ ಕ್ಷೇತ್ರಗಳ 25 ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಮತ್ತಿತರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮಾಜಿ ಶಾಸಕರಾದ ಡಾ. ಎಂ.ಆರ್.ಹುಲಿನಾಯ್ಕರ್, ಮಸಾಲಾ ಜಯರಾಮ್, ಎಂ.ಡಿ. ಲಕ್ಷ್ಮೀನಾರಾಯಣ, ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್. ನಿಂಗಪ್ಪ, ಬಿಜೆಪಿ ಮುಖಂಡರುಗಳಾದ ವೈ.ಎಚ್. ಹುಚ್ಚಯ್ಯ, ಅಂಬಿಕಾ ಹುಲಿನಾಯ್ಕರ್, ಬ್ಯಾಟರಂಗೇಗೌಡ, ಎಸ್.ಡಿ.ದಿಲೀಪ್ ಕುಮಾರ್, ಎಸ್.ಪಿ. ಚಿದಾನಂದ್, ಬಿ.ಹೆಚ್. ಅನಿಲ್ ಕುಮಾರ್, ಡಾ. ಎಸ್.ಪರಮೇಶ್, ಭೈರಣ್ಣ,ಟಿ.ಎಚ್. ಹನುಮಂತರಾಜು, ಎಚ್.ಎಂ. ರವೀಶಯ್ಯ, ವೇದಮೂರ್ತಿ, ಧನುಷ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಕಂಡ ಶ್ರೇಷ್ಠ ನಾಯಕ ನರೇಂದ್ರ ಮೋದಿ. 25 ವರ್ಷಗಳ ಸಾರ್ವಜನಿಕ ಕ್ಷೇತ್ರದಲ್ಲಿ ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ದೀರ್, ದಣಿವರಿಯದ ಅವರ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮ ಸೇವಾ ಸಂಕಲ್ಪ ಅಭಿಯಾನ. ಇದರ ಭಾಗವಾಗಿ 1 ತಿಂಗಳ ಕಾಲ ಜಿಲ್ಲೆಯಾದ್ಯಂತ ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳು, ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ಸೇರಿದಂತೆ ವಿವಿಧ ಸೇವಾಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ತುಮಕೂರು ರೈಲ್ವೆ ನಿಲ್ದಾಣ ಆವರಣದ ನಾಗಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ಶಾಲಾ ಮಕ್ಕಳಿಗೆ ಸಿಹಿ ವಿತರಿಸಿದರು. ನಂತರ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪರಿಸರ ನೈರ್ಮಲ್ಯದ ಬಗ್ಗೆ ಜನಜಾಗೃತಿ ಮೂಡಿಸಿದರು. ಈ ವೇಳೆ ಮಾತನಾಡಿ ಭಾರತದ ಸಾರ್ವಭೌಮತೆಗೆ ಪ್ರಧಾನಿ ಮೋದಿ ದೊಡ್ಡ ಕೊಡುಗೆ ನೀಡಿದ್ದಾರೆ. ಪ್ರಧಾನಿ ಮಾತ್ರವಲ್ಲದೆ, ವಿಶ್ವನಾಯಕರಾಗಿ ಭಾರತದ ಘನತೆಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದ್ದಿದ್ದಾರೆ ಎಂದರು.
ಪರಿಸರ ಸ್ವಚ್ಛತೆ ನಮ್ಮ ಆದ್ಯತೆ ಆಗಬೇಕು ಎಂಬುದು ಪ್ರಧಾನಿ ಮೋದಿ ಆಶಯ. ಮನುಷ್ಯನಿಗೆ ಆರೋಗ್ಯಕ್ಕೆ ಸ್ವಚ್ಛ ಪರಿಸರವು ಮುಖ್ಯ. ದೇಶದೆಲ್ಲಡೆ ರೈಲು ನಿಲ್ದಾಣದಲ್ಲಿ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಇಂತಹ ಸೇವಾ ಕಾರ್ಯಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು.