ತುಮಕೂರಿನಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತಿನ ಆರ್ಥಿಕ ನೆರವು ಬಿಡುಗಡೆಗೊಳಿಸುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶಗೌಡ, ಶುಭಕಲ್ಯಾಣ್, ಲಕ್ಷ್ಮಣ್ ಕಳ್ಳೆಣ್ಣವರ್, ಲೋಗಾನಾದನ್, ವೈ.ಎಚ್.ಹುಚ್ಚಯ್ಯ ಇದ್ದರು.
- ಪಶ್ಚಿಮ ಬಂಗಾದಲ್ಲಿ ಪ್ರಧಾನಿ ಮೋದಿ ಚಾಲನೆ
- ಏಕಕಾಲಕ್ಕೆ ಕಿಸಾನ್ ಸಮ್ಮಾನ್ ನಿಧಿ 23ನೇ ಕಂತು ಬಿಡುಗಡೆ
- ಕೇಂದ್ರ ಸಚಿವ ವಿ.ಸೋಮಣ್ಣ ಮಾಹಿತಿ
ತುಮಕೂರು: ಜಿಲ್ಲೆಯ 2,30,941 ರೈತರಿಗೆ ಕೇಂದ್ರ ಸರ್ಕಾರದಿಂದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 23ನೇ ಕಂತಿನ ಮೂಲಕ 46.19 ಕೋಟಿ ರೂ.ಗಳ ಆರ್ಥಿಕ ನೆರವು ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ಕೃಷಿ ಇಲಾಖೆ ಆಯೋಜಿಸಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತಿನ ಆರ್ಥಿಕ ನೆರವು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ 22 ಕಂತುಗಳ ಮೂಲಕ ಒಟ್ಟು 2,28,543 ರೈತ ಫಲಾನುಭವಿಗಳಿಗೆ 1136.64 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಫೆ.19 ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6 ಸಾವಿರ ರೂ.,ಗಳ ಆರ್ಥಿಕ ನೆರವನ್ನು 3 ಕಂತುಗಳಲ್ಲಿ 4 ತಿಂಗಳಿಗೊಮ್ಮೆ ನೀಡುವ ಯೋಜನೆಯಾಗಿದೆ. ಈ ಯೋಜನೆಯು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದ್ದು, ಯಾವುದೇ ಮಧ್ಯವರ್ತಿಯ ಲೇಪವಿಲ್ಲದೆ ನಿಜವಾದ ಫಲಾನುಭವಿಗೆ ಸೇರುವ ಯೋಜನೆಯಾಗಿದೆ. ರೈತರು ಸೇರಿದಂತೆ ದೇಶದ ಎಲ್ಲಾ ವರ್ಗದ ಜನರ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿ ರೂಪಿಸುವ ಯೋಜನೆಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕಂಟೈನರ್ ಕಾಪೋರೇಷನ್ಗೆ 2.5 ಎಕರೆ: ಸಾಮಾನ್ಯ ರೈತನೂ ದೇಶದ ಸುಧಾರಿತ ರೈತನಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲವೂ ಕೈಜೋಡಿಸಬೇಕು. ಜಿಲ್ಲೆ ಬುದ್ಧೀಜಿವಿಗಳ, ಸಂಸ್ಕಾರವಂತರ ಜಿಲ್ಲೆಯಾಗಿದ್ದು, ಈ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ತರಲು ಪ್ರಯತ್ನ ನಡೆಸಲಾಗಿದೆ. ಅಂತೆಯೇ, ತಿಮ್ಮರಾಜನಹಳ್ಳಿಯಲ್ಲಿ ಕಂಟೈನರ್ ಕಾಪೋರ್ರೇಷನ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಅಗತ್ಯವಿರುವ ಎರಡೂವರೆ ಎಕರೆ ಭೂಮಿಯನ್ನು ಸ್ವಾಧಿನಪಡಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸಚಿವ ಸೋಮಣ್ಣ ಸೂಚಿಸಿದರು.
ಈ ಯೋಜನೆಯಿಂದ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ದೇಶದ ಇತರ ಪ್ರದೇಶಗಳ ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುತ್ತದೆ. ಅಲ್ಲದೆ, ಸುಮಾರು 400ಕ್ಕು ಹೆಚ್ಚು ಮಂದಿ ಉದ್ಯೋಗಸ್ಥರಾಗಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ಕಳ್ಳೆಣ್ಣವರ್, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕ ಲೋಗಾನಾದನ್, ದಿಶಾ ಸಮಿತಿ ಸದಸ್ಯ ವೈ.ಎಚ್.ಹುಚ್ಚಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪಶ್ಚಿಮ ಬಂಗಾಳದ ಹೂಗ್ಲಿಯಾದ ತಾರಕೇಶ್ವರ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ 9.4ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 18,800 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನೇರ ಹಣ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಸೋಮಣ್ಣ, ಜ್ಯೋತಿಗಣೇಶ್, ಸುರೇಶಗೌಡ ಸೇರಿದಂತೆ ಗಣ್ಯರು ಪ್ರಧಾನಿ ಕಾರ್ಯಕ್ರಮವನ್ನು ಎಲ್ಇಡಿ ಪರದೆಯಲ್ಲಿ ವೀಸಿದರು.