ತುಮಕೂರು ಒಪನ್ ಟೆನ್ನಿಸ್ ಪಂದ್ಯಾವಳಿಗೆ ಸಿದ್ಧತೆ
- ಗರಿಷ್ಟ ಮೊತ್ತ ಭರಿಸಲು ಕೋರಿ ಜಿಲ್ಲಾಧಿಕಾರಿ ಪತ್ರ
- ಗ್ರಾಪಂ ಆಡಳಿತದಲ್ಲಿ ಡಿಸಿ ಹಸ್ತಕ್ಷೇಪಕ್ಕೆ ಖಂಡನೆ
- ಇವೆಂಟ್ಗಳಿಗೆ ಹಣ ಹೊಂದಿಸಲು ಪಿಡಿಒಗಳ ಪರದಾಟ
ತುಮಕೂರು: ಜಿಲ್ಲಾ ಕೇಂದ್ರ ತುಮಕೂರು ಮತ್ತೊಂದು ಕ್ರೀಡಾ ಇವೆಂಟ್ಗೆ ಸಜ್ಜಾಗುತ್ತಿದೆ. ಮೇ.3ರಿಂದ 10ರ ವರೆಗೂ ತುಮಕೂರು ವಿವಿ ಟೆನ್ನಿಸ್ ಕೋರ್ಟ್ನಲ್ಲಿ ಆಯೋಜಿಸಿರುವ "ತುಮಕೂರು ಓಪನ್ ಅಂತರಾಷ್ಟ್ರೀಯ ಮಹಿಳಾ ಟಿನ್ನಿಸ್ ಪಂದ್ಯಾವಳಿ'ಗೆ ಜಿಲ್ಲೆಯ 330 ಗ್ರಾಪಂಗಳಿಗೆ ಭಲವಂತವಾಗಿ ಪ್ರಾಯೋಜಕತ್ವ ವಹಿಸಲಾಗುತ್ತಿದೆ.
15ನೇ ಹಣಕಾಸು ನಿಧಿಯನ್ನು ಪಡೆಯಲಾಗದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಪಂಗಳು ಪಂದ್ಯಾವಳಿಗೆ ಗರಿಷ್ಟ ಮೊತ್ತವನ್ನು ನೀಡಿ, ಪ್ರಾಯೋಜಕತ್ವ ಪಡೆಯಬೇಕು ಎಂದು ಖುದ್ದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಇಲಾಖೆಗಳ ಜಿಲ್ಲಾ ಅಧಿಕಾರಿಗಳು ಹಾಗೂ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ನೇರವಾಗಿ ಪತ್ರಬರೆದಿರುವುದು ಜಿಲ್ಲೆಯೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ತುಮಕೂರು ಜಿಲ್ಲಾಡಳಿತ ಗ್ರಾಪಂಗಳಿಂದ ಹಣ ವಸೂಲಿ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದೆ. ಈ ಹಿಂದೆಯೂ ತುಮಕೂರು ದಸರಾ, ವಿವಿಧ ಸಂ, ಸಂಸ್ಥೆಗಳ ರಾಜ್ಯ ಸಮ್ಮೇಳನಕ್ಕೂ ಅನಧಿಕೃತವಾಗಿ ಹಣ ವಸೂಲಿ ಮಾಡಿಕೊಂಡಿದೆ. ಈಗ ಮತ್ತೊಂದು ಕ್ರೀಡಾಕೂಟಕ್ಕೆ ಕಡ್ಡಾಯವಾಗಿ ಹಣ ನೀಡಲೇಬೇಕು ಎಂದು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಣ ಹೊಂದಿಸಲು ಅನ್ಯಮಾರ್ಗ ಹಿಡಿಯಲಾರಂಭಿಸಿದ್ದಾರೆ.
ತುಮಕೂರು ಓಪನ್ ಅಂತರಾಷ್ಟ್ರೀಯ ಮಹಿಳಾ ಟೆನೀಸ್ ಕ್ರೀಡಾಂಗಣದಲ್ಲಿ ವಿಶ್ವ ರ್ಯಾಂಕಿಂಗ್ನ್ನ 60 ಮಹಿಳಾ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು ತುಮಕೂರು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿ ಎಂದು ಪತ್ರದಲ್ಲಿ ಪ್ರಸ್ತಾಪಿಸಿರುವ ಜಿಲ್ಲಾಧಿಕಾರಿ ಶುಭಕಲ್ಯಾಣ್, ಈ ಕ್ರೀಡಾಕೂಟದಿಂದ ಜಿಲ್ಲೆಯ ಜನತೆ ಉತ್ತಮವಾದ ಟೆನ್ನಿಸ್ ಪಂದ್ಯಾವಳಿ ವೀಕ್ಷಿಸಬಹುದಾಗಿದೆ ಎಂದು "ಬ್ಯಾಂಕ್ ಖಾತೆ'ಯನ್ನು ನೀಡಿ ಗರಿಷ್ಟ ಮೊತ್ತವನ್ನು ಭರಿಸಲು ಕೋರಿರುವ ಪತ್ರ ಪಿಡಿಒಗಳ ನೆಮ್ಮದಿ ಕಡೆಸಿದೆ.
ಜಿಲ್ಲೆಯಲ್ಲಿ 330 ಗ್ರಾಪಂಗಳಿಂದ ಪ್ರತಿಯೊಂದರಿಂದಲೂ ತಲಾ 5000ರೂ. ಕಡ್ಡಾಯವಾಗಿ ನೀಡಬೇಕು ಎಂದು ಆದೇಶಿಸಲಾಗಿದ್ದು ಪಿಡಿಒಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಮುಖ್ಯಸ್ಥರೇ ಪದೇಪದೇ ವಂತಿಕೆಗೆ ಒತ್ತಾಯಿಸುವುದರಿಂದ ಸಂಕಷ್ಟದಲ್ಲಿ ಆಡಳಿತ ನಡೆಸುವಂತಾಗಿದೆ ಗ್ರಾಪಂ ವ್ಯಾಪ್ತಿಯ ಹೊರಗೆ ನಡೆಯುವ ಕ್ರೀಡಾಕೂಟಕ್ಕೆ ವಂತಿಕೆ ನೀಡಲು ಕಾಯ್ದೆಯಲ್ಲಿ ಅವಕಾಶವಿಲ್ಲದಿದ್ದರೂ ಹಣ ನೀಡಬೇಕು ಎಂಬ ಒತ್ತಾಯ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗುತ್ತಿದೆ.
ಗ್ರಾಪಂ ಹೊರಗಿನ ಕ್ರೀಡಾಕೂಟಕ್ಕೆ ಹಣ ನೀಡಲು ಅವಕಾಶವಿಲ್ಲ!?
ಗ್ರಾಪಂಗಳು ಆಯಾ ಕ್ಷೇತ್ರ ವ್ಯಪ್ತಿಯ ಹೊರಗಿನ ಸಭೆ, ಸಮಾರಂಭಗಳಿಗೆ ಬೇಕಾಬಿಟ್ಟಿಯಾಗಿ ಹಣಕಾಸು ನೆರವು ಒದಗಿಸಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಕಾನೂನು ಮೀರಿ ಗ್ರಾಪಂ ಅಧಿಕಾರಿಗಳು ಜಿಲ್ಲಾಧಿಕಾರಿ ಸೂಚಿಸಿರುವ ಖಾತೆಗೆ ಹಣ ವರ್ಗಾವಣೆ ಮಾಡುತ್ತಿರುವುದು ಜಿಲ್ಲೆಯ ಜನರನ್ನು ಕೆರಳಿಸಿದೆ.
ಇಂತಹ ಕಾರ್ಯಕ್ರಮಗಳಿಗೆ ಹಣಕಾಸು ನೆರವು ಒದಗಿಸುವ ಬಗ್ಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ&ಸೆಕ್ಷನ್ 58(3)ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಗ್ರಾಪಂ ತನ್ನ ಸಭೆಯಲ್ಲಿ ಅಂಗೀಕರಿಸಿದ ಮತ್ತುತನ್ನ ಸದಸ್ಯರ ಒಟ್ಟು ಸಂಖ್ಯೆಯಮೂರನೇ&ಎರಡರಷ್ಟು ಸದಸ್ಯರು ಸಮರ್ಥಿಸಿದ ರ್ನಿಣಯದಿಂದ ಹಣಕಾಸು ನೆರವು ನೀಡಲು ಅವಕಾಶವಿದ್ದು ಜನಪ್ರತಿನಿಧಿಗಳಿಲ್ಲದ ಗ್ರಾಪಂ ಆಡಳಿತವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲೆಯ ಒಳಗಡೆ ಯಾವುದೇ ವಸ್ತು ಪ್ರದರ್ಶನ, ಸಮ್ಮೇಳನ ಅಥವಾ ವಿಚಾರ ಸಂಕಿರಣಗಳಿಗೆ ಮಾತ್ರ ವಂತಿಕೆ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ ಆದರೆ, ಜಿಲ್ಲಾಧಿಕಾರಿ ಸೂಚಿಸಿರುವ ಕ್ರೀಡಾಕೂಟಕ್ಕೆ ವಂತಿಕೆ ನೀಡಲು ಅವಕಾಶವೇ ಇಲ್ಲ. ನೋಂದಾಯಿತ ವೈದ್ಯಕಿಯ, ಶೈಕ್ಷಣಿಕ ಅಥವಾ ಧಮಾರ್ಥ ಸಂಸ್ಥೆಗಳಿಗೆ ಅಥವಾ ಸಾರ್ವಜನಿಕ ಉಪಯುಕ್ತತೆಯ ಸಂಸ್ಥೆಗಳಿಗಷ್ಟೇ ವಂತಿಕೆ ನೀಡಲು ಅವಕಾಶವಿದ್ದು, ಪಟ್ಟಣ ಪ್ರದೇಶದ ಶ್ರೀಮಂತರಷ್ಟೇ ಆಡುವ ಟೆನ್ನಿಸ್ ಕ್ರೀಡಾಕೂಟಕ್ಕೆ ವಂತಿಕೆ ನೀಡಲು ಗ್ರಾಪಂಗೆ ಅವಕಾಶವಿಲ್ಲ.
ಜಿಲ್ಲೆಯಲ್ಲಿ ಕ್ರೀಡೆ, ಸಮ್ಮೇಳನ ಎಂದು ಪದೇಪದೇ ಗ್ರಾಪಂಗಳಿಂದ ಹಣ ವಸೂಲಿ ಮಾಡುತ್ತಿದ್ದರೆ ಎಲ್ಲಿಂದ ಹಣ ಒದಗಿಸುವುದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ದಸರಾ, ಸಮ್ಮೇಳನ, ಕ್ರೀಡಾಕೂಟ ಎಂದು ಪದೇಪದೇ ಗ್ರಾಪಂ ಅಧಿಕಾರಿಗಳಿಗೆ ಹಣಕ್ಕೆ ಒತ್ತಾಯಿಸುವುದು ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರು, ಸಿಬ್ಬಂದಿಗೆ ವೇತನ ಒದಗಿಸಲು ಪರದಾಡುತ್ತಿರುವ ಸ್ಥಳಿಯ ಆಡಳಿತಕ್ಕೆ ಇಂತಹ ಕಿರಿಕಿರಿ ಮಾಡುವುದು ಜಿಲ್ಲಾಡಳಿತಕ್ಕೆ ಶೋಭೆ ತರುವುದಿಲ್ಲ.
ಗ್ರಾಪಂ ಮಾಜಿ ಅಧ್ಯಕ್ಷ, ಕೆಂಕೆರೆ
ರಾಜ್ಯದ ಯಾವ ಕಾಯ್ದೆಯಲ್ಲಿ ಜಿಲ್ಲಾಧಿಕಾರಿಗೆ ಗ್ರಾಪಂ ಪಿಡಿಒಗಳಿಗೆ ನೇರವಾಗಿ ಆದೇಶ ಮಾಡುವ ಅಧಿಕಾರ ನೀಡಲಾಗಿದೆ? ಎಂಬುದನ್ನು ಜಿಪಂ ಸಿಇಒ ಆಗಿಯೂ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶುಭಕಲ್ಯಾಣ್ ಉತ್ತರಿಸಬೇಕು. ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದ್ದು ಜಿಪಂ ಸಿಇಒ ಆದೇಶ ಮಾಡುವುದು ನಿಯಮ ಆದರೆ, ತುಮಕೂರು ಜಿಲ್ಲಾಡಳಿತ ಅಧಿಕಾರ ದುರುಪಯೋಗ ಮಾಡಿಕೊಂಡು ಪದೇಪದೇ ಹಣಕ್ಕೆ ಪೀಡಿಸುವುದು ಖಂಡನೀಯ ಹಾಗೂ ನಿಯಮಬಾಹಿರ.
ಅಧ್ಯಕ್ಷರು, ಗ್ರಾಪಂ ಸದಸ್ಯರ ಮಹಾ ಒಕ್ಕೂಟ